ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ಸಮಾಜ ಬೆಸೆಯುವ ಬೆಂಕಿಯಾಗಿ: ಸಂಗೀತ ನಿರ್ದೇಶಕ ನಾಗೇಂದ್ರಪ್ರಸಾದ್‌

ವಿಶ್ವಕರ್ಮ ಮಹೋತ್ಸವ
Last Updated 29 ಸೆಪ್ಟೆಂಬರ್ 2021, 15:08 IST
ಅಕ್ಷರ ಗಾತ್ರ

ದಾವಣಗೆರೆ: ‘ವಿಶ್ವಕರ್ಮ ಸಮಾಜ ಶೈಕ್ಷಣಿಕ, ರಾಜಕೀಯವಾಗಿ ಮುಂದುವರಿಯಲು ಸಾಧ್ಯವಾಗಿಲ್ಲ. ಹೀಗಾಗಿ ಹಿಂದುಳಿದ ವರ್ಗದವರನ್ನು ಜೋಡಿಸಲು ವಿಶ್ವಕರ್ಮ ಸಮಾಜದವರು ಚಿನ್ನವನ್ನು ಬೆಸೆಯುವ ಬೆಂಕಿಯಂತಾಗಬೇಕು’ ಎಂದು ಸಂಗೀತ ನಿರ್ದೇಶಕ ವಿ. ನಾಗೇಂದ್ರಪ್ರಸಾದ್‌ ಸಲಹೆ ನೀಡಿದರು.

ನಗರದ ಬಾಪೂಜಿ ಬ್ಯಾಂಕ್‌ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಮಹೋತ್ಸವ ಹಾಗೂ ಅಖಿಲ ಭಾರತ ವಿಶ್ವಕರ್ಮ ಪರಿಷತ್‌ ಉದ್ಘಾಟನೆ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

‘ಎಲ್ಲಾ ಹಿಂದುಳಿದ ವರ್ಗದವರು ಒಂದು ಧ್ವನಿಯಾದಾಗ ನಮ್ಮ ಮುಂದಿನ ಪೀಳಿಗೆಗೆ ಕೊಡುಗೆ ನೀಡಲು ಸಾಧ್ಯವಾಗಲಿದೆ. ಪಕ್ಷಾತೀತವಾಗಿ ಸಮಾವೇಶ ಮಾಡಬೇಕು. ಎಲ್ಲಾ ಪಕ್ಷದವರನ್ನೂ ಜೊತೆಗೆ ತೆಗೆದುಕೊಂಡು ಹೋದಾಗ ಗುರಿ ಸಾಧಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ವಿಶ್ವಕರ್ಮ ಸಮಾಜದ ಕುರಿತು ನಾಂಗೇಂದ್ರಪ್ರಸಾದ್‌ ಅವರು ನಿರ್ಮಿಸಿದ್ದ ಧ್ವನಿಸುರಳಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಶಾಮನೂರು ಶಿವಶಂಕರಪ್ಪ, ‘ಇದೇ ರೀತಿಯ ಒಗ್ಗಟ್ಟನ್ನು ಕೊನೆಯವರೆಗೂ ಕಾಯ್ದುಕೊಳ್ಳಬೇಕು. ಒಗ್ಗಟ್ಟಿನಿಂದ ಇದ್ದಾಗ ನಿಮ್ಮ ಬೇಡಿಕೆಗಳನ್ನೂ ಈಡೇರಿಸಿಕೊಳ್ಳಬಹುದು. ಜಕಣಾಚಾರಿ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಸಾಗಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು’ ಎಂದು ಹೇಳಿದರು.

ಮಾಜಿ ಸಚಿವ ಕೆ. ಶಿವಮೂರ್ತಿ, ‘ವಿಶ್ವಕರ್ಮ ಸಮಾಜದವರ ಆರ್ಥಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿಯ ಅಧ್ಯಯನದ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗದ ಮುಂದೆ ಇಡಬೇಕು’ ಎಂದರು.

ಚನ್ನಗಿರಿಯ ಮುಖಂಡ ಹೊದಿಗೆರೆ ರಮೇಶ್‌, ‘ಆಳುವ ಸರ್ಕಾರ ವಿಶ್ವಕರ್ಮ ಸಮಾಜದವರ ಆರ್ಥಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿಯನ್ನು ಕಣ್ತೆರೆದು ನೋಡುತ್ತಿಲ್ಲ. ಈ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಸಹಕರಿಸಬೇಕು’ ಎಂದು ಹೇಳಿದರು.

ಕೆಪಿಸಿಸಿಯ ಇತರೆ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ, ‘ಜಾತಿ ಗಣತಿಯ ವರದಿಯನ್ನು ಸರ್ಕಾರ ಬಿಡುಗಡೆಗೊಳಿಸಬೇಕು. ಹಿಂದುಳಿದ ವರ್ಗಗಳ 197 ಸಮಾಜದಲ್ಲಿ ವಿಶ್ವಕರ್ಮ ಸಮುದಾಯವೂ ಒಂದಾಗಿದೆ. ವರದಿ ಬಿಡುಗಡೆಗೊಳಿಸಿದರೆ ಯಾವ ಸಮುದಾಯದವರು ಎಷ್ಟಿದ್ದಾರೆ ಎಂಬ ನಿಖರ ಮಾಹಿತಿ ಸಿಗುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಆಯವ್ಯಯ ಮಾಡಲು ಅನುಕೂಲವಾಗಲಿದೆ. ಮುಂದೆ ನಮ್ಮ ಸರ್ಕಾರ ಬಂದಾಗ ವಿಶ್ವಕರ್ಮ ಸಮಾಜದ ಬೇಡಿಕೆಗಳನ್ನು ಈಡೇರಿಸುತ್ತೇವೆ’ ಎಂದು ಹೇಳಿದರು.

ಸರ್ಕಾರಿ ಅಭಿಯೋಜಕ ಎಸ್‌.ವಿ. ಪಾಟೀಲ್‌, ‘ದೇವರ ಮೂರ್ತಿಯನ್ನು ರೂಪಿಸುವ ವಿಶ್ವಕರ್ಮ ಸಮುದಾಯದವರ ಕೈಯನ್ನು ದೇವರು ಹಿಡಿಯಲಿಲ್ಲ. ಸಣ್ಣ ಸಮುದಾಯ ಎಂಬ ಕಾರಣಕ್ಕೆ ರಾಜಕೀಯ ಪಕ್ಷಗಳೂ ನೆರವಿಗೆ ಬರುತ್ತಿಲ್ಲ. ಸಂಘಟಿತರಾದರೆ ಮಾತ್ರ ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತ ವಿಶ್ವಕರ್ಮ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಎಚ್‌.ವಿ. ಸತೀಶ್‌ ಕುಮಾರ್‌, ‘ನಮ್ಮ ಸಮುದಾಯಕ್ಕೆ ಇನ್ನೂ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಸೌಲಭ್ಯಗಳನ್ನು ಪಡೆದುಕೊಳ್ಳಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದರು.

ದಾವಣಗೆರೆಯಲ್ಲಿನ ವೃತ್ತವೊಂದಕ್ಕೆ ವಿಶ್ವಕರ್ಮರ ಹೆಸರಿಡಬೇಕು; ರಾಜಕೀಯ ಪಕ್ಷಗಳ ಎಲ್ಲಾ ಘಟಕಗಳಲ್ಲೂ ಸಮುದಾಯದವರನ್ನು ಪದಾಧಿಕಾರಿಗಳನ್ನಾಗಿ ನೇಮಿಸಿಕೊಳ್ಳಬೇಕು; ವಿಶ್ವಕರ್ಮ ಅಧ್ಯಯನ ಕೇಂದ್ರ ಸ್ಥಾಪಿಸಬೇಕು. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ₹ 200 ಕೋಟಿ ಅನುದಾನ ನೀಡಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಮುದಾಯದವರು ಶಾಮನೂರು ಶಿವಶಂಕರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಅಖಿಲ ಭಾರತ ವಿಶ್ವಕರ್ಮ ಪರಿಷತ್‌ನ ಗೌರವಾಧ್ಯಕ್ಷ ನಾಗೇಂದ್ರಾಚಾರ್‌ ಬಸಾಪುರ, ಉಪಾಧ್ಯಕ್ಷ ಕೆ. ಕಾಳಾಚಾರ್‌, ಪ್ರಧಾನ ಕಾರ್ಯದರ್ಶಿ ವಿ.ಎಂ. ಕೊಟ್ರೇಶಾಚಾರ್‌, ವರವಿಯ ಮೌನೇಶ್ವರ ದೇವಸ್ಥಾನ ಟ್ರಸ್ಟ್‌ ಕಮಿಟಿಯ ಅಧ್ಯಕ್ಷ ಮನೋಹರ ಲಕ್ಕುಂಡಿ, ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

ಕಲಾವಿದ ರವಿ ಶಿಕಾರಿಪುರ ನಿರೂಪಿಸಿದರು. ಗಾಯಕ ಸಚ್ಚಿನ್‌ ಅರವಳ್ಳಿ ಪ್ರಾರ್ಥಿಸಿದರು.

*

‘ಮಠ ಸದೃಢವಾದರೆ ಸಮಾಜಕ್ಕೆ ಬಲ’

‘ಹಲವು ಸಮುದಾಯಗಳು ಮಠಗಳ ಮೂಲಕ ಏಳ್ಗೆಯಾಗುತ್ತಿವೆ. ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಮಠಾಧೀಶರು ಇರುವ ಸಮುದಾಯ ನಮ್ಮದಾಗಿದೆ. ಹೀಗಿದ್ದರೂ ನಮ್ಮ ಸಮುದಾಯ ಸದೃಢವಾಗಿಲ್ಲ. ಹೀಗಾಗಿ ಮಠಗಳನ್ನು ಸದೃಢಗೊಳಿಸುವ ಮೂಲಕ ಸಮಾಜಕ್ಕೆ ಬಲ ತುಂಬಬೇಕು’ ಎಂದು ಹಾಸನ ಜಿಲ್ಲೆಯ ಅರಕಲಗೂಡಿನ ಅರೆಮಾದೇನಹಳ್ಳಿಯ ವಿಶ್ವಕರ್ಮ ಮಹಾಸಂಸ್ಥಾನದ ಶಿವ ಸುಜ್ಞಾನತೀರ್ಥ ಸ್ವಾಮೀಜಿ ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಸ್ವಾಮೀಜಿ, ‘ಮಠ ಮತ್ತು ಸಮಾಜದವರ ನಡುವೆ ಅನ್ಯೋನ್ಯ ಭಾವ ಇರಬೇಕು. ಮರದಿಂದ ಮರಕ್ಕೆ ಹಾರುವ ತಾಯಿ ಮೇಲೆ ಸಂಪೂರ್ಣ ನಂಬಿಕೆಯನ್ನಿಡುವ ಮಂಗನ ಮರಿಯಂತೆ ಮರ್ಕಟ ಕಿಶೋರ ನ್ಯಾಯವನ್ನು ಭಕ್ತರು ಪಾಲಿಸಬೇಕು. ಅದೇ ರೀತಿ ಬೆಕ್ಕು ತನ್ನ ಮರಿಯನ್ನು ಕಚ್ಚಿಕೊಂಡು ಬೇರೆ ಬೇರೆ ಸ್ಥಳಗಳಿಗೆ ತೆಗೆದುಕೊಂಡು ಹೋಗಿ ರಕ್ಷಿಸುವಂತೆ ಭಕ್ತರನ್ನು ರಕ್ಷಿಸಲು ಮಠಾಧೀಶರೂ ಮಾರ್ಜಾಲ ಕಿಶೋರ ನ್ಯಾಯವನ್ನು ಅನುಸರಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಚನ್ನಗಿರಿಯ ವಡ್ನಾಳ್‌ನ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ‘ವಿಶ್ವಕರ್ಮ ಸಮಾಜ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗುವುದಕ್ಕೆ ಅವಕಾಶ ನೀಡುವುದಿಲ್ಲ. ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ನಮ್ಮ ಕಡೆಗೆ ಗಮನ ಸೆಳೆಯುವಂತೆ ಮಾಡಲು ನಾವು ಸದೃಢರಾಗಿರಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT