ಭಾನುವಾರ, ಸೆಪ್ಟೆಂಬರ್ 26, 2021
22 °C

ಕಾಂಗ್ರೆಸ್‌ ಟಿಕೆಟ್‌ ವಿಚಾರ: ದಾವಣಗೆರೆ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ್ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಶನಿವಾರ ಬೆಂಗಳೂರಿಗೆ ಬರಲಿದ್ದಾರೆ. ಟಿಕೆಟ್‌ ಬಗ್ಗೆ ಚರ್ಚಿಸಲು ನನಗೂ ಬರುವಂತೆ ರಾಜ್ಯದ ನಾಯಕರು ಆಹ್ವಾನ ನೀಡಿದ್ದಾರೆ. ಹೋಗಿ ಚರ್ಚಿಸುತ್ತೇವೆ’ ಎಂದು ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನಲ್ಲಿ ಕೊನೆಯ ದಿನದವರೆಗೂ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ಏಪ್ರಿಲ್‌ 4ರವರೆಗೂ ಅವಕಾಶ ಇದೆ’ ಎಂದು ತಿಳಿಸಿದರು.

‘ಸ್ಪರ್ಧಿಸಲು ನಿಮಗೆ ಆಸಕ್ತಿ ಇಲ್ಲವೇ’ ಎಂದು ಪ್ರಶ್ನಿಸಿದಾಗ, ‘ಆಸಕ್ತಿ ಇಲ್ಲ ಎನ್ನುವ ಪ್ರಶ್ನೆಯೇ ಇಲ್ಲ. ಹೈಕಮಾಂಡ್‌ ಹೂಂ ಅಂದರೆ ನಾನೂ ನಿಲ್ಲುತ್ತೇನೆ’ ಎಂದರು.

‘ಇನ್ನೂ ಅಂತಿಮವಾಗಿ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಪಕ್ಷದ ವರಿಷ್ಠರು ನನ್ನೊಂದಿಗೆ ಮಾತನಾಡಿದಾಗ, ಈ ಹಿಂದೆ ಮೂರು ಬಾರಿಗೆ ನೀವು ನಿಂತಿದ್ದೀರಿ; ಹೀಗಾಗಿ ಯಜಮಾನರಿಗೆ (ಶಾಮನೂರು) ಕೊಡುತ್ತೇವೆ ಎಂದರು. ಈ ಬಗ್ಗೆ ಅಪ್ಪರ ಜೊತೆ ಮಾತನಾಡಿದರು. ಆದರೆ, ಪ್ಯಾಮಿಲಿ ಹಾಗೂ ಆರೋಗ್ಯ ಸಮಸ್ಯೆ ಬಗ್ಗೆ ಅವರು ಹೇಳಿದರು’ ಎಂದರು.

ನೀವು ಹಾಗೂ ಶಾಮನೂರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ ಎಂಬ ಬಗ್ಗೆ ಕೇಳಿದಾಗ, ‘ಯಾರೂ ಹಿಂದೆ ಸರಿದಿಲ್ಲ. ಹೈಕಮಂಡ್‌, ರಾಜ್ಯ ನಾಯಕರು ಹಾಗೂ ನಾವು ಕುಳೀತು ಸಭೆ ನಡೆಸಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.

ತೇಜಸ್ವಿ ಪಟೇಲ್‌ ಅವರನ್ನು ದಿನೇಶ್‌ ಗುಂಡೂರಾವ್‌ ಕರೆಸಿಕೊಂಡಿರುವ ಬಗ್ಗೆ ಪ್ರಶ್ನಿಸಿದಾಗ, ‘ತೇಜಸ್ವಿ ಪಟೇಲ್‌ ಕಳೆದ ಬಾರಿ ನನ್ನ ಬಳಿಯೂ ಬಂದಿದ್ದ. ಇದರ್ಥ ನಾನು ಕರೆಸಿಕೊಂಡಿದ್ದೇನೆ ಎಂದಲ್ಲ. ಎಲ್ಲರಿಗೂ ಕಾಂಗ್ರೆಸ್‌ ಪಕ್ಷಕ್ಕೆ ದುಡಿಯಬೇಕು ಎಂಬುದಿದೆ. ಅವರು ನಿಂತರೂ ನಾವು ಕೆಲಸ ಮಾಡಬೇಕು; ಇನ್ನೊಬ್ಬರಿಗೆ ಕೊಟ್ಟರೂ ಮಾಡಬೇಕು’ ಎಂದು ಪ್ರತಿಕ್ರಿಯಿಸಿದರು.

ದಾವಣೆಗೆರೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್ ಎಸ್ ಮಲ್ಲಿಕಾರ್ಜುನ ಕಣಕ್ಕಿಳಿಸಯುವುದು ಬಹುತೇಕ ಖಚಿತವಾಗಿದೆ.

‘ಸಚಿವ ಸ್ಥಾನ ಕೊಡದಿರುವುದಕ್ಕೆ ಸಿಟ್ಟಿದೆ!’

‘ಆಗ ವಯಸ್ಸಾಗಿದೆ ಎಂದು ಮಂತ್ರಿಗಿರಿ ಕೊಡಲಿಲ್ಲ. ಈಗ ವಯಸ್ಸಾದ ನನಗೆ ಟಿಕೆಟ್‌ ಕೊಟ್ಟಿದ್ದೀರಿ. ಹೀಗಾಗಿ ನಾನು ಸ್ಪರ್ಧಿಸುವುದಿಲ್ಲ ಎಂದು ಬಿಫಾರಂ ವಾಪಸ್‌ ಕೊಟ್ಟಿದ್ದೇನೆ. ನೀವು ಯಾರಿಗಾದರೂ ಟಿಕೆಟ್‌ ಕೊಟ್ಟಿಕೊಳ್ಳಿ ಎಂದು ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.

‘ಸಚಿವ ಸ್ಥಾನ ಕೊಡಲಿಲ್ಲ ಎಂಬ ಸಿಟ್ಟಿಗೇ ನೀವು ಟಿಕೆಟ್‌ ವಾಪಸ್‌ ಕೊಟ್ಟಿದ್ದೀರಾ?’ ಎಂಬ ಪ್ರಶ್ನೆಗೆ ‘ಹೌದು’ ಎಂದು ಗಟ್ಟಿಯಾಗಿ ಹೇಳುತ್ತ ನಗೆ ಬೀರಿದರು.

‘ಯಾರಿಗೆ ಟಿಕೆಟ್‌ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇವೆ. ನಾನು ಯಾರ ಹೆಸರನ್ನೂ ಸೂಚಿಸಿಲ್ಲ’ ಎಂದರು.

ಟಿಕೆಟ್‌ ನಿರಾಕರಿಸಿರುವುದರಿಂದ ಪಕ್ಷಕ್ಕೆ ಹಾನಿಯಾಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ಪಕ್ಷದವರು ಈ ಬಗ್ಗೆ ಯೋಚನೆ ಮಾಡುತ್ತಾರೆ. ನಿಮಗೆ ಯಾಕೆ ಈ ಚಿಂತೆ’ ಎಂದು ಮರು ಪ್ರಶ್ನೆ ಹಾಕಿದರು.

ಕಾಂಗ್ರೆಸ್‌ ನಾಯಕರು ತೇಜಸ್ವಿ ಪಟೇಲ್‌ ಅವರನ್ನು ಬೆಂಗಳೂರಿಗೆ ಕರೆದ ಬಗ್ಗೆ ಗಮನ ಸೆಳೆದಾಗ, ‘ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನನ್ನು ಕರೆದಿದ್ದಾರೆ. ಹೀಗಾಗಿ ಅವರೂ ಬೆಂಗಳೂರಿಗೆ ತೆರಳಿದ್ದಾರೆ. ಏನಾಗುತ್ತದೆ ನೋಡೋಣ’ ಎಂದರು.

ತೇಜಸ್ವಿ ಪಟೇಲ್‌ ಹೆಸರು ಹೇಗೆ ಬಂತೋ ಗೊತ್ತಿಲ್ಲ: ಮಂಜಪ್ಪ

‘ಶಾಮನೂರು ಶಿವಶಂಕರಪ್ಪ ಅವರು ಗುರುವಾರ ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳಿದ ಬಳಿಕ ನನ್ನ ಹೆಸರನ್ನು ಪಕ್ಷದ ರಾಜ್ಯ ವರಿಷ್ಠರಿಗೆ ಸೂಚಿಸಿದ್ದರು. ಆದರೆ, ತೇಜಸ್ವಿ ಪಟೇಲ್‌ ಹೆಸರು ಏಕೆ ಮತ್ತು ಹೇಗೆ ಬಂತು ಎಂಬುದು ಗೊತ್ತಿಲ್ಲ. ನಾನು ಹಾಗೂ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಕೆಪಿಸಿಸಿ ಕಚೇರಿಗೆ ಹೋಗಿ ಈ ಬಗ್ಗೆ ಚರ್ಚಿಸುತ್ತೇವೆ’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ನಮ್ಮ ಶಾಸಕರು, ಮಾಜಿ ಶಾಸಕರು, ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರು ಮಲ್ಲಿಕಾರ್ಜುನ ಅಥವಾ ಶಿವಶಂಕರಪ್ಪ ಸ್ಪರ್ಧಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಸಭೆ ನಡೆಸಿ ಸ್ಪರ್ಧಿಸುವಂತೆ ಮಲ್ಲಿಕಾರ್ಜುನ ಅವರಿಗೆ ಮನವಿಯನ್ನೂ ಮಾಡಿದ್ದೆವು. ಕಾರಣಾಂತರದಿಂದ ಶಾಮನೂರು ಹಾಗೂ ಮಲ್ಲಿಕಾರ್ಜುನ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ’ ಎಂದು ತಿಳಿಸಿದ್ದಾರೆ ಎಂದು ಹೇಳಿದರು.

‘ತೇಜಸ್ವಿ ಪಟೇಲ್‌ಗೆ ಟಿಕೆಟ್‌ ಕೊಟ್ಟರೆ ನಿಮ್ಮ ನಡೆ ಏನು’ ಎಂಬ ಪ್ರಶ್ನೆಗೆ, ‘ಈಗಲೇ ಅದನ್ನು ಹೇಳುವುದಿಲ್ಲ. ಕಾಂಗ್ರೆಸ್‌ನಲ್ಲಿ ಬಹಳಷ್ಟು ಕಾರ್ಯಕರ್ತರು ನನಗಿಂತ ಹಿರಿಯರೂ ಇದ್ದಾರೆ; ಕಿರಿಯರೂ ಇದ್ದಾರೆ. ಅವರಲ್ಲಿ ಯಾರನ್ನಾದರೂ ಗುರುತಿಸಿ ಟಿಕೆಟ್‌ ಕೊಟ್ಟರೆ ನಮ್ಮ ಅಭ್ಯಂತರವಿಲ್ಲ. ಆದರೆ, ಯಾರ ಯಾರನ್ನೋ ಕರೆದುಕೊಂಡು ಬಂದು ಟಿಕೆಟ್‌ ಕೊಟ್ಟರೆ ಹೇಗೆ? ಜಿಲ್ಲಾ ಸಮಿತಿಯವರು ಹಾಗೂ ಮಾಜಿ ಶಾಸಕರು ಕುಳಿತು ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು