ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಳೆಕೆರೆಯಿಂದ ಚಿತ್ರದುರ್ಗಕ್ಕೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ನೀರು

Last Updated 6 ಅಕ್ಟೋಬರ್ 2019, 14:18 IST
ಅಕ್ಷರ ಗಾತ್ರ

ದಾವಣಗೆರೆ: ಸೂಳೆಕೆರೆಯಿಂದ ಚಿತ್ರದುರ್ಗಕ್ಕೆ ಹೆಚ್ಚಿನ ನೀರನ್ನು ತೆಗೆದುಕೊಂಡು ಹೋಗುತ್ತಿದ್ದು, ಇದರಿಂದ ಚನ್ನಗಿರಿ ರೈತರಿಗೆ ತೊಂದರೆಯಾಗಿದೆ ಎಂದು ಖಡ್ಗ ಸ್ವಯಂ ಸೇವಕರ ಸಂಘ ಆರೋಪಿಸಿದೆ.

‘ಚಿತ್ರದುರ್ಗ, ಹೊನ್ನಾಳಿ, ಸಿರಿಗೆರೆ, ಹೊಳಲ್ಕೆರೆ, ಜಗಳೂರಿಗೆ ಸೂಳೆಕೆರೆಯಿಂದ ನೀರು ಹೋಗುತ್ತಿದ್ದು, ಆದ್ದರಿಂದ ಚನ್ನಗಿರಿ ತಾಲ್ಲೂಕಿನ ರೈತರಿಗೆ ಕುಡಿಯಲು ಹಾಗೂ ಕೃಷಿ ಚಟುವಟಿಕೆಗೆ ಅಗತ್ಯ ಪ್ರಮಾಣದ ನೀರನ್ನು ಮೀಸಲಿರಿಸಬೇಕು ಹಾಗೂ ಕೆರೆಯಲ್ಲಿ ನೀರನ್ನು ಒಂದು ಮಟ್ಟಕ್ಕೆ ಇರುವಂತೆ ನೋಡಿಕೊಂಡು ಬಿಟ್ಟು ಉಳಿದ ನೀರನ್ನು ತೆಗೆದುಕೊಂಡು ಹೋಗಿ’ ಎಂದು ಸಂಘದ ಅಧ್ಯಕ್ಷ ರಘು ಬಿ.ಆರ್‌. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಸರ್ಕಾರದ ಆದೇಶದ ಪ್ರಕಾರ ಸೂಳೆಕೆರೆಯಿಂದ ಒಂದು ವರ್ಷಕ್ಕೆ 0.2 ಟಿಎಂಸಿ ನೀರು ಮಾತ್ರ ತೆಗೆದುಕೊಂಡು ಹೋಗಬೇಕು. ಆದರೆ ಚಿತ್ರದುರ್ಗ ಜಿಲ್ಲೆಗೆ ಸೂಳೆಕೆರೆಯ 5 ಪಂಪ್‌ಹೌಸ್‌ಗಳಿಂದ ಅಪಾರ ಪ್ರಮಾಣದ ನೀರನ್ನು ಪಂಪ್‌ ಮಾಡಲಾಗುತ್ತಿದ್ದು, ನೀರಿನ ಮಾಪನವನ್ನೂ ಅಳವಡಿಸಿಲ್ಲ. ಕೂಡಲೇ ನೀರಿನ ಮಾಪನ ಅಳವಡಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಆದೇಶದ ಪ್ರಕಾರ ಎಷ್ಟು ನೀರನ್ನು ಕಳುಹಿಸಬೇಕೋ ಅಷ್ಟನ್ನು ಕಳುಹಿಸಿ ನಂತರ ಪಂಪ್‌ಹೌಸ್‌ಗಳಲ್ಲಿ ಮೋಟರ್ ಅನ್ನು ನಿಲ್ಲಿಸಬೇಕು ಎಂದು ನೀರಾವರಿ ಇಲಾಖೆ, ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ, ಮಾಜಿ ಶಾಸಕ ವಡ್ನಾಳ್ ರಾಜಣ್ಣ, ಸಂಸದ ಜಿ.ಎಂ. ಸಿದ್ದೇಶ್ವರ ಅವರಲ್ಲಿ ಮನವಿ ಮಾಡಿದ ಅವರು, ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದೇ ಇದ್ದರೆ ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

‘ಕಳೆದ ವರ್ಷ ಸೂಳೆಕೆರೆಯಲ್ಲಿ ನೀರಿನ ಲಭ್ಯತೆ ಕಡಿಮೆ ಎಂಬ ಆಧಾರದ ಮೇಲೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಆದ್ದರಿಂದ ಮುಂಬರುವ ಬೇಸಿಗೆಯಲ್ಲಿ ಈ ವಿಷಯವನ್ನು ಪರಿಗಣಿಸಿ, ಸರ್ಕಾರದ ಆದೇಶದಂತೆ ನೀರು ಹರಿಸಿ ಚನ್ನಗಿರಿ ತಾಲ್ಲೂಕಿನ ಜನರ ಹಿತವನ್ನು ಕಾಪಾಡಬೇಕು’ ಎಂದು ಅವರು ಆಗ್ರಹಿಸಿದರು.

‘ಸಂಸದರು, ಶಾಸಕರು, ಮುಖಂಡರು ಎಲ್ಲರೂ ಸರ್ವೇ ಕಾರ್ಯಕ್ಕೆ ಸಹಕರಿಸಿ. ಎಲ್ಲರೂ ಒಂದಾಗಿ ಕೆರೆಯನ್ನು ಉಳಿಸಿಕೊಳ್ಳೋಣ ವೋಟಿಗೋಸ್ಕರ ಸೂಳೆಕೆರೆನ್ನು ಬಲಿ ಕೊಡಬಾರದು. ಬೇರೆ ಪಕ್ಷ, ಜಾತಿಯವರೂ ಇದ್ದು, ಮುಂದಿನ ಜನಾಂಗಕ್ಕೆ ಬಳವಳಿಯಾಗಿ ಕೊಡಬೇಕು’ ಎಂದು ರಘು ಆಗ್ರಹಿಸಿದರು.

ಸಂಘದ ನಿರ್ದೇಶಕ ಚಂದ್ರಹಾಸ್ ಮಾತನಾಡಿ ‘ತುಂಗಾಭದ್ರ ಜಲಾಶಯದಿಂದ ಸೂಳೆಕೆರೆಗೆ 2 ಟಿಎಂಸಿ ನೀರು ಹರಿಸಿ 365 ದಿವಸವೂ ನೀರು ಇರುವ ಹಾಗೆ ನೋಡಿಕೊಳ್ಳಬೇಕು. ಆ ಮೂಲಕ ಚಿತ್ರದುರ್ಗ ಹಾಗೂ ಇತರೆ ಜಿಲ್ಲೆಗಳಿಗೆ ನೀರು ಹರಿಸಬಹುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಈಚೆಗೆ ನಡೆದ ಸಾಸ್ವೆಹಳ್ಳಿ ಏತ ನೀರಾವರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದ್ದಾರೆ. ಒಂದು ವೇಳೆ ಸೂಳೆಕೆರೆಗೆ ಎರಡು ಟಿಎಂಸಿ ನೀರು ಹರಿಸಿದ್ದಲ್ಲಿ ತಾಲ್ಲೂಕಿನ ನೂರಾರು ಎಕರೆ ಜಮೀನು ಮುಳುಗಡೆ ಆಗುತ್ತವೆ’ ಎಂದು ಆಪಾದಿಸಿದರು.

ಸೂಳೆಕೆರೆಯಲ್ಲಿ ಸದಾ ನೀರು ತುಂಬಿರುವಂತೆ ನೋಡಿಕೊಳ್ಳಲು ಭದ್ರಾ ನದಿಯಿಂದ ಪ್ರತ್ಯೇಕವಾದ ಕೆನಾಲ್ ನಿರ್ಮಿಸಿ ಅದರ ಮೂಲಕ ನೀರು ತುಂಬಿಸುವ ಕೆಲಸವನ್ನು ಸಂಸದರು ಹಾಗೂ ಶಾಸಕರು ಮಾಡಬೇಕು ಎಂದು ಅವರು ಮನವಿ ಮಾಡಿದರು.

ಉ‍ಪಾಧ್ಯಕ್ಷ ಕೆ. ಷಣ್ಮುಖಸ್ವಾಮಿ ಮಾತನಾಡಿ, ‘ಸೂಳೆಕೆರೆ ಸಮೀಕ್ಷೆ ಕಾರ್ಯಕ್ಕೆ ಅಧಿಕಾರಿಗಳು ನಿರಾಸಕ್ತಿ ವಹಿಸುತ್ತಿದ್ದು, ಅಧಿಕಾರಿಗಳು ಕೆಲಸ ಮಾಡದೇ ಇದ್ದರೆ ರಾಜೀನಾಮೆ ಕೊಟ್ಟು ಹೋಗಲಿ’ ಎಂದು ಆಗ್ರಹಿಸಿದರು.

ಕೊಲೆ ಬೆದರಿಕೆ ದೂರು:ಸೂಳೆಕೆರೆ ಸರ್ವೇಗೆ ಸಂಬಂಧಪಟ್ಟಂತೆ ಸಂಘದ ಸದಸ್ಯರಿಗೆ ಕೆಲವರು ಕೊಲೆ ಬೆದರಿಕೆ ಹಾಕಿದ್ದು, ಈ ಸಂಬಂಧ ಮಲ್ಲಿಕಾರ್ಜುನ್ ಎಂಬಾತನ ವಿರುದ್ಧ ಚನ್ನಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ಸಂಘದ ಷಣ್ಮುಖಸ್ವಾಮಿ ತಿಳಿಸಿದರು.

ಸರ್ವೇ ಮಾಡುವುದರಿಂದ ರೈತರ ಜಮೀನಿಗೆ ನಷ್ಟವಾಗುವುದಾದರೆ ಅವರಿಗೆ ಪರಿಹಾರ ಕಲ್ಪಿಸಲು ಹೋರಾಟ ಮಾಡುವುದಾಗಿ ಭರವಸೆ ನೀಡಿದರು. ಸಂಘದ ನಿರ್ದೇಶರಾದ ಸೈಯ್ಯದ್‌ ನಯ್ಯಾಜ್, ರವಿ.ಎಚ್.ಎಂ, ಕೆರೆಬಿಳಚಿ ಮೊಹಮದ್ ಶಬ್ಬೀರ್, ರುದ್ರೇಶ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT