ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜಿಲ್ಲಾಡಳಿತ ಭವನದಲ್ಲೂ ನೀರಿನ ಸಮಸ್ಯೆ

ಶೌಚಾಲಯಗಳಲ್ಲೂ ನೀರಿಲ್ಲ; ಟ್ಯಾಂಕರ್‌ ಮೂಲಕ ಪೂರೈಕೆ, ಒಣಗಿದ ಗಿಡ–ಮರ
Published 6 ಏಪ್ರಿಲ್ 2024, 7:28 IST
Last Updated 6 ಏಪ್ರಿಲ್ 2024, 7:28 IST
ಅಕ್ಷರ ಗಾತ್ರ

ದಾವಣಗೆರೆ: ಬರಗಾಲದ ಪರಿಣಾಮದಿಂದ ಉಂಟಾಗಿರುವ ನೀರಿನ ಸಮಸ್ಯೆಯು ಸಾರ್ವಜನಿಕರಿಗೆ ಮಾತ್ರವಲ್ಲದೇ ಜಿಲ್ಲಾಡಳಿತ ಭವನಕ್ಕೂ, ಅಲ್ಲಿನ ಸಿಬ್ಬಂದಿಗೂ ತಟ್ಟುತ್ತಿದೆ.

ಜಿಲ್ಲೆಯ ಆಡಳಿತ ಶಕ್ತಿ ಕೇಂದ್ರವಾದ ಜಿಲ್ಲಾಡಳಿತ ಭವನದಲ್ಲೂ ನೀರಿನ ಸಮಸ್ಯೆ ಉಲ್ಭಣಿಸಿದೆ. ನೂರಾರು ಅಧಿಕಾರಿಗಳು, ಸಿಬ್ಬಂದಿ ಕಾರ್ಯ ನಿರ್ವಹಿಸುವ ಹಾಗೂ ನಿತ್ಯವೂ ಸಾಕಷ್ಟು ಜನರು ಭೇಟಿ ನೀಡುವ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡದಲ್ಲೇ ನೀರಿನ ಸಮಸ್ಯೆ ಎದುರಾಗಿದೆ.

ಕಟ್ಟಡದಲ್ಲಿನ ಕೆಲವು ಶೌಚಾಲಯಗಳಲ್ಲಿ ನೀರು ಬರುತ್ತಿಲ್ಲ. ವಿವಿಧ ಇಲಾಖೆಗಳ ಪ್ರತ್ಯೇಕ ಕೊಠಡಿಗಳಲ್ಲೂ ನೀರಿನ ಸಮಸ್ಯೆ ಉಂಟಾಗಿದೆ. ಕಟ್ಟಡದಲ್ಲಿ ಪ್ರತೀ ಮಹಡಿಯಲ್ಲೂ ಮಹಿಳೆಯರು ಹಾಗೂ ಪುರುಷರಿಗೆ ತಲಾ 2 ಪ್ರತ್ಯೇಕ ಸಾರ್ವಜನಿಕ ಶೌಚಾಲಯಗಳಿವೆ. ಭವನದಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಮೀಪದಲ್ಲೇ ಇರುವ ಶೌಚಾಲಯ (ಕೊಠಡಿ ಸಂಖ್ಯೆ 11ಎ) ಹಾಗೂ ಇನ್ನೊಂದು ಮಹಡಿಯ 40‘ಎ’ ಶೌಚಾಲಯಗಳಲ್ಲಿ ಶನಿವಾರ ನೀರು ಇರಲ್ಲಿಲ್ಲ. ಶೌಚಾಲಯಗಳಲ್ಲಿದ್ದ ಡ್ರಮ್‌ಗಳೂ ಖಾಲಿ ಇದ್ದವು.

‘ಜಿಲ್ಲಾಡಳಿತ ಕಟ್ಟಡದಲ್ಲಿ ಸಾರ್ವಜನಿಕರಿಗಾಗಿ ಇರುವ ಶೌಚಾಲಯಗಳಲ್ಲೂ 2 ದಿನಗಳಿಂದ ಇದೇ ಪರಿಸ್ಥಿತಿ ಇದೆ. ಸಾರ್ವಜನಿಕರಿಗೆ ಮಾತ್ರವಲ್ಲದೇ ನಮಗೂ ಸಮಸ್ಯೆಯಾಗುತ್ತಿದೆ. ಮೂತ್ರ ವಿಸರ್ಜನೆಗೆ ಹೋಗಿ ಬಂದ ನಂತರ ಕೈ ತೊಳೆಯಲೂ ನೀರಿಲ್ಲ’ ಎಂದು ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಭವನದಲ್ಲಿ ಹಲವು ಇಲಾಖೆಗಳ/ ಶಾಖೆಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಲವು ಕೊಠಡಿಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ನಿಯುಕ್ತಿಗೊಂಡಿದ್ದು, ಅವರೂ ಇದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೂ ನೀರಿನ ಸಮಸ್ಯೆ ಎದುರಾಗಿದೆ.

ಟ್ಯಾಂಕರ್ ನೀರೂ ಸಾಲುತ್ತಿಲ್ಲ:

‘ಪಾಲಿಕೆ ಪೂರೈಸುವ ನೀರನ್ನು ತೊಟ್ಟಿಯಲ್ಲಿ (ಸಂಪ್‌) ಸಂಗ್ರಹಿಸಿ ಬಳಿಕ ಕಟ್ಟಡಕ್ಕೆ ಬಳಸಿಕೊಳ್ಳುತ್ತೇವೆ. ಆದರೆ, ಆ ನೀರು ಸಾಲುತ್ತಿಲ್ಲ. ಕಟ್ಟಡದ ಆವರಣದಲ್ಲಿರುವ 2 ಕೊಳವೆಬಾವಿಗಳಿಂದಲೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ನಿತ್ಯವೂ 2–3 ಟ್ಯಾಂಕರ್‌ ನೀರು ತರಿಸಿಕೊಳ್ಳುತ್ತೇವೆ. ಆದರೆ, ಅಧಿಕಾರಿ, ಸಿಬ್ಬಂದಿ ಹಾಗೂ ಭೇಟಿ ನೀಡುವ ಸಾರ್ವಜನಿಕರ ಸಂಖ್ಯೆ ಹೆಚ್ಚೇ ಇರುವುದರಿಂದ ನೀರಿನ ಕೊರತೆ ಕಾಡುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ತೊಟ್ಟಿಯಲ್ಲಿನ ನೀರನ್ನು ಒಮ್ಮೆಲೇ ಕಟ್ಟಡಕ್ಕೆ ಪೂರೈಸಿದರೆ, ನೀರು ಬೇಗ ಖಾಲಿಯಾಗುತ್ತದೆ. ಹೀಗಾಗಿ ಸ್ವಲ್ಪ ಸ್ವಲ್ಪವೇ ನೀರು ಪೂರೈಸುತ್ತೇವೆ. ಎಲ್ಲೆಡೆ ನೀರಿನ ಸಮಸ್ಯೆ ಉಂಟಾಗಿರುವುದರಿಂದ ನೀರನ್ನು ಮಿತವಾಗಿ ಬಳಸಲು ಕ್ರಮ ವಹಿಸುತ್ತಿದ್ದೇವೆ. ನೀರು ಪೋಲಾಗದಂತೆಯೂ ಎಚ್ಚರಿಕೆ ವಹಿಸಿದ್ದೇವೆ’ ಎಂದು ಅವರು ತಿಳಿಸಿದರು.

‘ಈಗಾಗಲೇ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದ್ದು, ಯಾರಿಗೂ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ ಅವರು ಪ್ರತಿಕ್ರಿಯಿಸಿದರು.

ಡಾ.ಎಂ.ವಿ.ವೆಂಕಟೇಶ್
ಡಾ.ಎಂ.ವಿ.ವೆಂಕಟೇಶ್
ವಿದ್ಯುತ್‌ ಸಂಪರ್ಕದ ಸಮಸ್ಯೆಯಿಂದಾಗಿ ನೀರು ಏರಿಸಲು ಸಾಧ್ಯವಾಗಿಲ್ಲ. ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ವಿದ್ಯುತ್‌ ಸಮಸ್ಯೆ ಸರಿಪಡಿಸುವಂತೆ ಸೂಚಿಸಲಾಗಿದೆ
ಡಾ.ಎಂ.ವಿ.ವೆಂಕಟೇಶ್ ಜಿಲ್ಲಾಧಿಕಾರಿ
ತೇಜಸ್ವಿ ಪಟೇಲ್‌
ತೇಜಸ್ವಿ ಪಟೇಲ್‌
ಸರ್ಕಾರಿ ಕಚೇರಿಗಳಲ್ಲಿ ಮೂಲಸೌಲಭ್ಯ ಒದಗಿಸುವುದು ಮುಖ್ಯ. ಜಿಲ್ಲಾಡಳಿತ ಭವನ ಮಾತ್ರವಲ್ಲದೇ ಚನ್ನಗಿರಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲೂ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಲಿ
ತೇಜಸ್ವಿ ಪಟೇಲ್‌ ರೈತ ಮುಖಂಡ
ಜಬೀನಾ ಖಾನಂ
ಜಬೀನಾ ಖಾನಂ
ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಹೊತ್ತು ಜಿಲ್ಲಾಧಿಕಾರಿ ಕಚೇರಿಗೆ ಹೋಗುತ್ತಾರೆ. ಮುಖ್ಯವಾಗಿ ಸರ್ಕಾರಿ ಕಚೇರಿಗಳಲ್ಲಿ ಮಹಿಳೆಯರಿಗೆ ಯಾವುದೇ ಕಾರಣಕ್ಕೂ ಶೌಚಾಲಯದ ಸಮಸ್ಯೆ ಎದುರಾಗಬಾರದು
ಜಬೀನಾ ಖಾನಂ ಸಾಮಾಜಿಕ ಕಾರ್ಯಕರ್ತೆ
ನೀರಿಲ್ಲದೇ ಒಣಗಿದ ಗಿಡ– ಮರ
ಜಿಲ್ಲಾಡಳಿತ ಭವನದ ಮುಂಭಾಗದಲ್ಲಿನ ವಿವಿಧ ಪ್ರಬೇಧಗಳ ಗಿಡ– ಮರಗಳು ನೀರಿಲ್ಲದೇ ಬಿಸಿಲಿಗೆ ಒಣಗುತ್ತಿವೆ. ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡ –ಮರಗಳು ಒಣಗುತ್ತಿದ್ದು ಅದರಲ್ಲೂ ಸಾಕಷ್ಟು ಅಲಂಕಾರಿಕ ಗಿಡಗಳು ಸಾಯುವ ಸ್ಥಿತಿ ತಲುಪಿವೆ. ‘ಕುಡಿಯುವುದಕ್ಕೇ ನೀರು ಸಿಗದಂತಹ ಸ್ಥಿತಿಯಲ್ಲಿ ಗಿಡ–ಮರಗಳಿಗೆ ಎಲ್ಲಿಂದ ನೀರು ತರುವುದು. ಮಳೆ ಬರುವವರೆಗೆ ಗಿಡಗಳ ಸ್ಥಿತಿ ಹೀಗೆಯೇ. ಬೇರೆ ಏನೂ ಮಾಡಲು ಸಾಧ್ಯವಿಲ್ಲದ ಸ್ಥಿತಿ ಇದೆ’ ಎಂದು ಜಿಲ್ಲಾಡಳಿತ ಭವನದಲ್ಲಿನ ಸಿಬ್ಬಂದಿಯೊಬ್ಬರು ಅಸಹಾಯಕತೆ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT