ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ರೈತರಿಗೆ ಭದ್ರಾ ಕಾಲುವೆಯೇ ಆಸರೆ

ತೋಟ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ
Published 7 ಏಪ್ರಿಲ್ 2024, 7:18 IST
Last Updated 7 ಏಪ್ರಿಲ್ 2024, 7:18 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ಬಿಸಿಲ ಬೇಗೆ ದಿನೇದಿನೇ ಹೆಚ್ಚುತ್ತಿದೆ. ಅಡಿಕೆ ತೋಟದಲ್ಲಿನ ಕೊಳವೆಬಾವಿಗಳು ಬತ್ತತಿ ಬರಿದಾಗುತ್ತಿವೆ. ಈ ಭಾಗದಲ್ಲಿನ ಬೆಳೆಗಾರರು ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ.‌ ಭದ್ರಾ ಕಾಲುವೆ ನೀರನ್ನು ಟ್ಯಾಂಕರ್‌ಗೆ ತುಂಬಿಸಿಕೊಳ್ಳುತ್ತಿದ್ದಾರೆ.

‘ಭದ್ರಾ ಕಾಲುವೆ ಪಕ್ಕದಲ್ಲಿನ ರೈತರು ಕಾಲುವೆ ನೀರು ಬಿಟ್ಟಾಗ ಮೋಟರ್ ಬಳಸಿ ನೀರನ್ನು ತಮ್ಮ ಹೊಲಗಳಿಗೆ ಹಾಯಿಸಿಕೊಳ್ಳುತ್ತಾರೆ. ನಮ್ಮ ಹೊಲಗಳು ತುಂಬಾ ದೂರದಲ್ಲಿವೆ. ಕೊಳವೆಬಾವಿಯಲ್ಲಿ ನೀರು ಖಾಲಿಯಾಗಿದೆ. ಹೊಸ ಕೊಳವೆಬಾವಿ ಕೊರೆಯಿಸಲು ಹಣ ಇಲ್ಲ. ನಮ್ಮ ಹೊಲದ ಪಕ್ಕದಲ್ಲಿ ಹಲವರು ಕೊಳವೆಬಾವಿ ಕೊರೆಸಿದ್ದರೂ ಒಂದೆರಡು ದಿನಗಳಲ್ಲಿಯೇ ನೀರು ಖಾಲಿಯಾಗಿದೆ. ಕೊರೆಯಿಸಲು ಬಳಸಿದ ಹಣವೂ ವ್ಯರ್ಥವಾಗಿದೆ. ತೋಟ ಉಳಿಸಿಕೊಳ್ಳುವುದು ದೊಡ್ದ ಸವಾಲಾಗಿದೆ. ಈ ಕಾರಣ ಟ್ಯಾಂಕರ್‌ ನೀರಿನ ಮೊರೆ ಹೋಗಿದ್ದೇವೆ’ ಎಂದು ತ್ಯಾಗದಕಟ್ಟೆಯ ರೈತ ಕುಬೇರಪ್ಪ ಹೇಳಿದರು.

‘ದೊಡ್ಡ ಹಿಡುವಳಿದಾರರು ಲಕ್ಷಾಂತರ ವ್ಯಯಿಸಿ ತೋಟಗಳಿಗೆ ತುಂಗಾಭದ್ರಾ ನದಿಯಿಂದ ಪೈಪ್‌ಲೈನ್ ಮಾಡಿಸಿಕೊಳ್ಳುತ್ತಿದ್ದಾರೆ. ನಾವು ಬಡವರು, ಅಷ್ಟೊಂದು ಹಣ ಖರ್ಚು ಮಾಡಲು ಆಗದು. ತೋಟಕ್ಕೆ ಟ್ಯಾಂಕರ್‌ ನೀರು   ಹಾಯಿಸಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಭೈರನಹಳ್ಳಿಯ ಬಸವರಾಜಪ್ಪ.

ತೋಟದಲ್ಲಿ ಅಡಿಕೆ, ತೆಂಗು, ಬಾಳೆ ಗಿಡಗಳು ಬಾಡುತ್ತಿವೆ. ಅಡಿಕೆಗೆ ಈ ಬಿಸಿಲ ವಾತಾವರಣಕ್ಕೆ ಕನಿಷ್ಠ 15 ದಿನಕ್ಕೊಮ್ಮೆ ನೀರು ನೀಡಬೇಕು. ಬಾಳೆಗೂ 10 ದಿನಕ್ಕೊಮ್ಮೆ ನೀರು ಬೇಕು. ತೋಟ ಉಳಿಸಿಕೊಳ್ಳದಿದ್ದರೆ, ಸಾಲ ತೀರಿಸಲಾಗದೇ ಆತ್ಮಹತ್ಯೆಯೇ ದಾರಿಯಾಗುತ್ತದೆ. ಮಳೆ ಬಂದರೆ ರೈತರು ನಿಟ್ಟುಸಿರು ಬಿಡಬಹುದು ಎಂದು ಅವರು ಮಾತು ಸೇರಿಸಿದರು.

‘ಒಂದು ಟ್ಯಾಂಕರ್ ನೀರಿಗೆ ಕನಿಷ್ಠ ₹ 500ರಿಂದ ₹ 800 ಇದೆ. ಇಳುವರಿಗಿಂತ ಗಿಡ ಉಳಿಸಿಕೊಂಡರೆ ಸಾಕು ಎಂಬ ಸ್ಥಿತಿ ಇದೆ’ ಎಂದು ಭೈರನಹಳ್ಳಿಯ ಪಂಚಾಕ್ಷರಯ್ಯ ಹೇಳಿದರು.

ಅಂತರ್ಜಲ ಮಟ್ಟ ಕುಸಿಯುತ್ತಿದೆ. ಅದನ್ನು ತಡೆಯಲು ರೈತರು ಇಂಗು ಗುಡಿಗಳನ್ನು, ಬದುಗಳನ್ನು ತಮ್ಮ ಜಮೀನುಗಳಲ್ಲಿ ನಿರ್ಮಿಸಿಕೊಳ್ಳಬೇಕು. ಈ ಬದುಗಳ ಮೇಲೆ ಮರಗಳನ್ನು ಬೆಳೆಸಬೇಕು. ಬಹಳ ರೈತರು ತಮ್ಮ ಹೊಲದಲ್ಲಿರುವ ಕೆರೆ,ಕಟ್ಟೆ, ಬಾವಿ, ನೀರು ಇಂಗುವ ಗುಂಡಿಗಳನ್ನು ಸಮತಟ್ಟು ಮಾಡಿರುವ ಪರಿಣಾಮ ಅಂತರ್ಜಲ ಮಟ್ಟ ಕುಸಿಯುತ್ತಿದೆ. ರೈತರು ಅಂತರ್ಜಲ ವೃದ್ಧಿಗಾಗಿ ಸರ್ಕಾರದ ಯೋಜನೆಯನ್ನು ಬಳಸಿಕೊಳ್ಳಬೇಕು. ಹನಿ ನೀರಾವರಿ ಪದ್ಧತಿಯೇ ಅತಿ ಉತ್ತಮ ಪದ್ಧತಿ. ರೈತರು ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಸಾಸ್ವೆಹಳ್ಳಿ ಕೃಷಿ ಅಧಿಕಾರಿ ಶಶಿಧರ್ ಸಲಹೆ ನೀಡಿದರು.

ತೋಟದಲ್ಲಿ ಒಂದು ತೊಟ್ಟಿ ನಿರ್ಮಿಸಿ ಟ್ಯಾಂಕರ್‌ಗಳಿಂದ ಅಲ್ಲಿ ನೀರನ್ನು ಸಂಗ್ರಹಿಸುತ್ತಿದ್ದೇವೆ. ದಿನವೊಂದಕ್ಕೆ 10ರಿಂದ 20 ಟ್ಯಾಂಕರ್ ನೀರು ಸಂಗ್ರಹಿಸುತ್ತಿದ್ದೇವೆ.

-ಪಂಚಾಕ್ಷರಯ್ಯ ರೈತ ಭೈರನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT