ಸೋಮವಾರ, ಜೂಲೈ 13, 2020
23 °C
ತ್ರಿಶತಕ ದಾಟಿದ ಸೋಂಕಿತರ ಸಂಖ್ಯೆ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೂ ಕೊರೊನಾ

ಮಹಿಳೆ ಸಾವು: ಮೃತರ ಸಂಖ್ಯೆ 8ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ತೀವ್ರ ಉಸಿರಾಟದ ಸಮಸ್ಯೆ ಇದ್ದ 50 ವರ್ಷದ ಮಹಿಳೆ ಮಂಗಳವಾರ ಮುಂಜಾನೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯೂ 300 ದಾಟಿದೆ.

ಎಸ್ಎಸ್‌ಎಂ ನಗರದ ಮಹಿಳೆ (ಪಿ.14411) ಮೃತಪಟ್ಟವರು. ಅವರನ್ನು ಕೋವಿಡ್‌ ಆಸ್ಪತ್ರೆಗೆ ಜೂನ್‌ 29ರಂದು ದಾಖಲಿಸಲಾಗಿದ್ದು, 30ರಂದು ಮೃತಪಟ್ಟಿದ್ದಾರೆ ಎಂದು ಬುಲ್ಲೆಟಿನ್‌ನಲ್ಲಿ ತೋರಿಸಲಾಗಿದೆ.

ಹರಿಹರ ಅಗಸರಬೀದಿಯ 24 ವರ್ಷದ ಪುರುಷನಿಂದ 40 ವರ್ಷದ ಮಹಿಳೆ (ಪಿ.14400) ಮತ್ತು ಅವರ 16 ವರ್ಷದ ಮಗಳಿಗೆ (ಪಿ.14401) ಸೋಂಕು ತಗಲಿದೆ. 16 ವರ್ಷದ ಹುಡುಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದು, ಮೂರು ಪರೀಕ್ಷೆ ಮುಗಿಸಿದ್ದಾಳೆ. ಇದೀಗ ಕೊರೊನಾ ಇರುವುದು ದೃಢಪಟ್ಟಿರುವುದರಿಂದ ಮುಂದಿನ ಪರೀಕ್ಷೆಗೆ ಅನುಮತಿ ನಿರಾಕರಿಸಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಭರಮಸಾಗರದ 75 ವರ್ಷದ ವೃದ್ಧ (ಪಿ.14402) ಅನಾರೋಗ್ಯದ ಕಾರಣ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಹೊಂಡದ ಸರ್ಕಲ್‌ನ 35 ವರ್ಷದ ಮಹಿಳೆಗೆ (ಪಿ.14403) ಸೋಂಕು ತಗುಲಿದೆ. ಜಗಳೂರಿನಲ್ಲಿ ಡಿಟಿಪಿ ಸೆಂಟರ್‌ ನಡೆಸುತ್ತಿದ್ದ 43 ವರ್ಷದ ವ್ಯಕ್ತಿಗೆ (ಪಿ.14404) ಸೋಂಕು ಕಾಣಿಸಿಕೊಂಡಿದೆ. ಈ ಮೂವರನ್ನೂ ಶೀತಜ್ವರ (ಐಎಲ್‌ಐ) ಪ್ರಕರಣ ಎಂದು ಗುರುತಿಸಲಾಗಿದೆ. ಇವರಿಗೆ ಎಲ್ಲಿಂದ ಸೋಂಕು ಬಂದಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ಬೇತೂರು ರಸ್ತೆ ಕಂಟೈನ್‌ಮೆಂಟ್‌ ವಲಯದಲ್ಲಿ ರ‍್ಯಾಂಡಮ್‌ ಆಗಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಸಂದರ್ಭದಲ್ಲಿ 9 ವರ್ಷದ ಬಾಲಕಿಗೂ (ಪಿ.14405) ಸೋಂಕು ಇರುವುದು ಪತ್ತೆಯಾಗಿದೆ.

ವಿನೋಬನಗರದ 34 ವರ್ಷದ ವ್ಯಕ್ತಿಯಿಂದ (ಪಿ.10387) ನಾಲ್ವರಿಗೆ ಕೊರೊನಾ ಬಂದಿದೆ. 50 ವರ್ಷದ ಮಹಿಳೆ (ಪಿ.14406), 27 ವರ್ಷದ ಯುವಕ (ಪಿ.14407), 26 ವರ್ಷದ ಯುವತಿ (ಪಿ.14408) ಮತ್ತು 76 ವರ್ಷದ ವೃದ್ಧೆ (ಪಿ.14409) ಸೋಂಕಿಗೆ ಒಳಗಾದವರು.

ಹರಿಹರ ಗಾಂಧಿನಗರದ 34 ವರ್ಷದ ವ್ಯಕ್ತಿಗೆ (ಪಿ.14410) ತೀವ್ರ ಉಸಿರಾಟದ ಸಮಸ್ಯೆ ಎಂದು ಗುರುತಿಸಲಾಗಿದೆ. ಸೋಂಕು ಯಾರಿಂದ ಬಂದಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 309ಕ್ಕೇರಿದೆ. ಅದರಲ್ಲಿ 265 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 8 ಮಂದಿ ಮೃತಪಟ್ಟಿದ್ದಾರೆ. 36 ಸಕ್ರಿಯ ಪ್ರಕರಣಗಳಿವೆ. ನಾಲ್ವರು ಐಸಿಯುನಲ್ಲಿದ್ದಾರೆ.

ಜಿಲ್ಲಾ ಆಸ್ಪತ್ರೆಯ ನಿರ್ಲಕ್ಷ್ಯವೇ ಸಾವಿಗೆ ಕಾರಣ: ಆರೋಪ
ತೀವ್ರ ಉಸಿರಾಟದ ಸಮಸ್ಯೆ ಇದ್ದ ಎಸ್‌ಎಸ್‌ಎಂ ನಗರ ಬಿ ಬ್ಲಾಕ್‌ನ ಮಹಿಳೆಯನ್ನು ಜೂನ್‌ 22ರಂದೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ನೀಡದೇ ನಾಲ್ಕು ದಿನ ಇಟ್ಟುಕೊಂಡು ಬಳಿಕ ಖಾಸಗಿ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿ ಕೊರೊನಾ ದೃಢಪಟ್ಟಾಗ ಮತ್ತೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಈ ಸಾವು ಉಂಟಾಗಿದೆ ಎಂದು ಮಹಿಳೆಯ ಸಂಬಂಧಿಕರಾದ ಮುಬಾರಕ್‌, ಆರೀಫ್‌ ಆರೋಪಿಸಿದ್ದಾರೆ.

‘ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದಾಗ ಕೊರೊನಾ ಪರೀಕ್ಷೆಯ ವರದಿ ಬರಲಿ ಎಂದು ನಾಲ್ಕು ದಿನ ಯಾವುದೇ ಚಿಕಿತ್ಸೆ ನೀಡದೇ ಕಾದಿದ್ದಾರೆ. ನೆಗೆಟಿವ್ ಎಂದು ಬಂದಾಗ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಶಿಫಾರಸು ಮಾಡಿದ್ದಾರೆ. ಎ‌ಸ್‌ಎಸ್‌ ಹೈಟೆಕ್‌ ಆಸ್ಪತ್ರೆಗೆ ಹೋಗಿ ಬಳಿಕ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೆಂಟಿಲೇಟರ್‌ ಹಾಕಿದರು. ಅಲ್ಲಿಯೂ ಕೊರೊನಾ ಪರೀಕ್ಷೆ ನಡೆಸಿದ್ದಾರೆ. ಅದು ಪಾಸಿಟಿವ್‌ ಎಂದು ಬಂದಿದ್ದರಿಂದ ಸೋಮವಾರ ರಾತ್ರಿ ಮತ್ತೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ವೈದ್ಯರು, ಸಿಬ್ಬಂದಿ ಯಾರೂ ಸರಿಯಾಗಿ ಸ್ಪಂದಿಸದೇ ಇದ್ದಿದ್ದರಿಂದಲೇ ಮೃತಪಟ್ಟಿದ್ದಾರೆ’ ಎಂದು ಹೋರಾಟಗಾರ್ತಿ ಜಬೀನಾಖಾನಂ ಆರೋಪಿಸಿದ್ದಾರೆ.

‘ಸೋಂಕು ನೆಗೆಟಿವ್ ಎಂದು ಆರಂಭದಲ್ಲಿ ಬಂದಿರಬಹುದು. ಆದರೆ ತೀವ್ರ ಉಸಿರಾಟದ ಸಮಸ್ಯೆ ಇರುವುದು ಕೊರೊನಾದ ಲಕ್ಷಣವಾಗಿರುವಾಗ ಅವರು ಖಾಸಗಿ ಆಸ್ಪತ್ರೆಗೆ ಕಳುಹಿಸಿ ಅಲೆದಾಡಿಸಿದ್ದರಿಂದಲೇ ಮೃತಪಟ್ಟಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಕೋವಿಡ್‌ ಆಸ್ಪತ್ರೆ ಆಗಿರುವುದರಿಂದ ನೆಗೆಟಿವ್‌ ಬಂದವರನ್ನು ಇರಿಸಿಕೊಳ್ಳಲಾಗುವುದಿಲ್ಲ. ಬೇರೆ ಕಾಯಿಲೆ ಇರುವವರನ್ನು ಇಟ್ಟುಕೊಂಡರೆ ಕೊರೊನಾ ಸೋಂಕಿತರಿಗೆ ಜಾಗ ಇಲ್ಲದಾಗುತ್ತದೆ. ಅದಕ್ಕೆ ಬೇರೆ ಆಸ್ಪತ್ರೆಗೆ ಹೋಗಲು ತಿಳಿಸಲಾಗುತ್ತದೆ. ಈ ಮಹಿಳೆಗೆ ನ್ಯುಮೋನಿಯ, ಐಎಚ್‌ಡಿ, ಹೃದಯ ಕಾಯಿಲೆ ಸಹಿತ ವಿವಿಧ ಕಾಯಿಲೆಗಳಿದ್ದವು. ಅದಕ್ಕೆ ಚಿಕಿತ್ಸೆ ಕೊಡಿಸಲು ಬೇರೆಡೆಗೆ ಹೋಗಿ ಎಂದು ತಿಳಿಸಲಾಗಿದೆ’ ಎಂದು ಜಿಲ್ಲಾ ಸರ್ಜನ್‌ ಡಾ. ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು