ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜಿಲ್ಲೆಯ ತಾ.ಪಂ.ಗಳಲ್ಲಿ ಪ್ರಮೀಳಾಡಳಿತ

ದಾವಣಗೆರೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಮೂರೂ ಸ್ಥಾನ ಮಹಿಳೆಯರಿಗೆ
Last Updated 23 ಸೆಪ್ಟೆಂಬರ್ 2020, 1:27 IST
ಅಕ್ಷರ ಗಾತ್ರ

ದಾವಣಗೆರೆ: ಬೇರೆ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಅಧಿಕಾರ ಸಿಕ್ಕಿರುವುದು ಸಂಶಯವಿದ್ದರೂ ಜಿಲ್ಲೆಯ ತಾಲ್ಲೂಕು ಪಂಚಾಯಿತಿಗಳಲ್ಲಿ ಸದ್ಯ ಮಹಿಳೆಯರದ್ದೇ ಮೇಲುಗೈ. ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಹೀಗೆ ಎಲ್ಲ ಮೂರು ಸ್ಥಾನಗಳಲ್ಲಿ ಮಹಿಳೆಯರು ಅಧಿಕಾರದಲ್ಲಿದ್ದಾರೆ. ಅಷ್ಟೇ ಅಲ್ಲ, ಈಗ ಹೊಸ ತಾಲ್ಲೂಕು ಆಗಿರುವ ನ್ಯಾಮತಿಯನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷರಾಗಿ ಪ್ರಮೀಳೆಯರೇ ಇದ್ದಾರೆ.

ಹಿಂದೆ ದಾವಣಗೆರೆ ಜಿಲ್ಲೆಯಲ್ಲಿದ್ದ, ಈಗ ಬಳ್ಳಾರಿ ಜಿಲ್ಲೆಗೆ ಸೇರಿರುವ ಹರಪನಹಳ್ಳಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಕೂಡ ಮಹಿಳೆ.

ದಾವಣಗೆರೆಯಲ್ಲಿ ಮಮತಾ ಮಲ್ಲೇಶಪ್ಪ ನಾಲ್ಕೂವರೆ ವರ್ಷಗಳಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸು ತ್ತಿದ್ದಾರೆ. ಈಗ ಉಪಾಧ್ಯಕ್ಷರಾಗಿ ಮೀನಾ ಟಿ. ಶ್ರೀನಿವಾಸ್‌ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಂಜುಳಾ ಅಣಬೇರು ಶಿವಮೂರ್ತಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿ ಮೂರೂ ಸ್ಥಾನಗಳು ಮಹಿಳೆಯರ ಪಾಲಾಗಿವೆ.

‘ಎಲ್ಲ ಸದಸ್ಯರು, ಅಧಿಕಾರಿಗಳು

ಉತ್ತಮ ಸಹಕಾರ ನೀಡುತ್ತಿದ್ದಾರೆ. ಗೌರವದಿಂದ ನಡೆಸಿಕೊಳ್ಳು ತ್ತಿದ್ದಾರೆ. ಅವಕಾಶ ಸಿಕ್ಕಿದರೆ ಮಹಿಳೆಯರೂ ಉತ್ತಮವಾಗಿ ಕಾರ್ಯ ನಿರ್ವಹಿಸು ತ್ತಾರೆ. ವಿಧಾನ ಸಭೆ, ಲೋಕಸಭೆ ಯಲ್ಲಿಯೂ ಮಹಿಳೆಯರಿಗೆ ಆದ್ಯತೆ ನೀಡಬೇಕು. ಅವಕಾಶ ನೀಡಬೇಕು’ ಎಂಬುದು ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಅವರ ಅಭಿಪ್ರಾಯ.

’ಜನಸಂಖ್ಯೆಯಲ್ಲಿ ಪುರುಷರಷ್ಟೇ ಇರುವ ಮಹಿಳೆಯರಿಗೆ ಅಧಿಕಾರದಲ್ಲೂ ಸರಿಸಮಾನವಾಗಿ ಅವಕಾಶ ಸಿಗಬೇಕು. ನಾನು ಉಪಾಧ್ಯಕ್ಷಳಾಗಿ ಇರುವುದು ಶಾಶ್ವತವಲ್ಲ. ಆದರೆ ಆ ಸ್ಥಾನದ ಗೌರವ ಶಾಶ್ವತವಾಗಿ ಉಳಿಯಬೇಕು. ಅದಕ್ಕಾಗಿ ಪ್ರಾಮಾಣಿಕವಾಗಿ, ಪಕ್ಷಭೇದವಿಲ್ಲದೇ ಎಲ್ಲವೂ ನಮ್ಮವರು ಎಂಬಂತೆ ಕೆಲಸ ಮಾಡಬೇಕು ಎಂಬುದು ನನ್ನ ಉದ್ದೇಶ’ ಎಂದು ಉಪಾಧ್ಯಕ್ಷೆ ಮೀನಾ ಟಿ. ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನ ಅಧಿಕಾರ ಅವಧಿ ಬಹಳ ಕಡಿಮೆ. ಇನ್ನು ಎಂಟು ತಿಂಗಳಷ್ಟೇ ಇದೆ. ಸಂಸದರು, ಶಾಸಕರು, ತಾಲ್ಲೂಕು ಪಂಚಾಯಿಸಿ ಸದಸ್ಯರು ಎಲ್ಲರೂ ಗುರುತಿಸಿ ಪ್ರೋತ್ಸಾಹಿಸಿ ನನಗೆ ಈ ಸ್ಥಾನ ಕೊಟ್ಟಿದ್ದಾರೆ. ಎಲ್ಲ ಕಡೆಗಳಲ್ಲಿ ಹೆಣ್ಣುಮಕ್ಕಳಿಗೆ ಅವಕಾಶ ನ್ಯಾಯಯುತವಾಗಿಯೇ ಸಿಗಬೇಕು. ನನ್ನ ಅವಧಿಯಲ್ಲಿ ಉತ್ತಮ ಕೆಲಸ ಮಾಡುತ್ತೇನೆ’ ಎಂಬುದು ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ಅಣಬೇರು ಶಿವಮೂರ್ತಿ ಅವರ ವಿಶ್ವಾಸ.

ತಾಲ್ಲೂಕುವಾರು ವಿವರ

ಹರಿಹರ ತಾಲ್ಲೂಕು ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿ ಶ್ರೀದೇವಿ ಮಂಜಪ್ಪ, ಉಪಾಧ್ಯಕ್ಷರಾಗಿ ಜಯಮ್ಮ ಬಸವಲಿಂಗಪ್ಪ ಇದ್ದಾರೆ, ಜಗಳೂರಿನಲ್ಲಿ ಮಂಜುಳಾ ಶಿವಾನಂದಪ್ಪ, ಹೊನ್ನಾಳಿಯಲ್ಲಿ ಚಂದ್ರಮ್ಮ ಹಾಲೇಶಪ್ಪ, ಅಧ್ಯಕ್ಷರಾಗಿದ್ದಾರೆ. ಚನ್ನಗಿರಿಯಲ್ಲಿ ಉಷಾ ಶಶಿಕುಮಾರ್‌ ಅಧ್ಯಕ್ಷರಾಗಿ, ಗಾಯತ್ರಿ ಅಣ್ಣಪ್ಪ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಉಷಾ ಅವರು ರಾಜೀನಾಮೆ ನೀಡಿದ್ದಾರೆ. ಮುಂದಿನ ಅಧ್ಯಕ್ಷರ ಆಯ್ಕೆ ನಡೆಯಬೇಕಿದೆ. ಹರಪನಹಳ್ಳಿಯಲ್ಲಿ ಅನ್ನಪೂರ್ಣಮ್ಮ ಅಧ್ಯಕ್ಷರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT