ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿ

ವನಿತಾ ಸಮಾಜದ ಸದಸ್ಯೆಯರಿಗೆ ಪಾಲಿಕೆ ಸದಸ್ಯ ಶಿವನಳ್ಳಿ ರಮೇಶ್‌ ಸಲಹೆ
Last Updated 1 ಡಿಸೆಂಬರ್ 2018, 9:20 IST
ಅಕ್ಷರ ಗಾತ್ರ

ದಾವಣಗೆರೆ: ವನಿತಾ ಸಮಾಜ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದೆ. ಸಂಸ್ಥೆಯ ಸದಸ್ಯೆಯರು ರಾಜಕೀಯಕ್ಕೂ ಬರಬೇಕು. ಇದರಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದು ಪಾಲಿಕೆ ಸದಸ್ಯ ಶಿವನಳ್ಳಿ ರಮೇಶ್‌ ಸಲಹೆ ನೀಡಿದರು.

ನಗರದ ವನಿತಾ ಸಮಾಜದಲ್ಲಿ ಶುಕ್ರವಾರ ಜಿಲ್ಲಾ ಶಿಶು ಕಲ್ಯಾಣ ಮಂಡಳಿ ಏರ್ಪಡಿಸಿದ್ದ ಮಕ್ಕಳ ಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬುದ್ಧಿಮಾಂದ್ಯ, ಅಂಗವಿಕಲ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದಕ್ಕಾಗಿ ವನಿತಾ ಸಮಾಜದ ಅಂಗ ಸಂಸ್ಥೆಯಾದ ಜಿಲ್ಲಾ ಶಿಶು ಕಲ್ಯಾಣ ಮಂಡಳಿ ಅವಿರತವಾಗಿ ಶ್ರಮಿಸುತ್ತಿದೆ. ಈ ಮಹಿಳೆಯರಿಗೆ ರಾಜಕೀಯ ಶಕ್ತಿ ಸಿಕ್ಕರೆ ಇನ್ನಷ್ಟು ಮಾದರಿಯಾಗಿ ಕೆಲಸ ಮಾಡಬಲ್ಲರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಾದರೂ ಸ್ಪರ್ಧಿಸಲು ಮನಸ್ಸು ಮಾಡಬೇಕು ಎಂದರು.

ಪಾಲಿಕೆ ಸದಸ್ಯೆ ವಿ. ಅಶ್ವಿನಿ ಮಾತನಾಡಿ, ‘ಮೊಬೈಲ್‌ ಮಹಾ ಮಾರಿಯಂತೆ ಮಕ್ಕಳ ಬಾಲ್ಯವನ್ನು ಹಾಳು ಮಾಡುತ್ತಿದೆ. ಮೊಬೈಲ್‌ ಗೀಳು ಪೀಳಿಗೆಯನ್ನೇ ನಾಶ ಮಾಡುತ್ತಿದೆ. ಟಿ.ವಿ.ಗಳು ಮಕ್ಕಳಲ್ಲಿ ಸೌಜನ್ಯ ಹಾಳು ಮಾಡುತ್ತಿವೆ. ಪೋಷಕರು ಮಕ್ಕಳನ್ನು ತಿದ್ದಿ, ಸರಿತಪ್ಪುಗಳನ್ನು ತಿಳಿಸಬೇಕು’ ಎಂದರು.

ಸಮಾಜ ಸೇವಕಿ ಅನಿತಾ ವಿರೂಪಾಕ್ಷಪ್ಪ ಅವರಿಗೆ ‘ಶಿಶುಸೇವಾ’, ತರಳಬಾಳು ಜಗದ್ಗುರು ಸಂಯುಕ್ತ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಎಚ್‌.ಬಿ. ಸಹನಾ ಅವರಿಗೆ ‘ವರ್ಷದ ಅತ್ಯುತ್ತಮ ವಿದ್ಯಾರ್ಥಿನಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗಾಯತ್ರಿ ನಾಗರಾಜ್‌, ಶೀಲಾ ನಲ್ಲೂರು ಇದ್ದರು. ಪ್ರೇಮಾ ನಾಗರಾಜ್‌ ಸ್ವಾಗತಿಸಿದರು. ಮಮತಾ ವೆಂಕಟೇಶ್‌ ವಂದಿಸಿದರು. ಸುಜಾತಾ ಕೃಷ್ಣ ನಿರೂಪಿಸಿದರು.

ಮಕ್ಕಳ ಮೇಳದಲ್ಲಿ ಸಿ. ಕೇಶವಮೂರ್ತಿ ವಾಕ್‌ ಶ್ರವಣ ಕೇಂದ್ರ ‘ಸಾಹಸ್‌’ ಮಕ್ಕಳು, ವೃತ್ತಿ ತರಬೇತಿ ಕೇಂದ್ರ ‘ವಿಮೋಚನಾ’ ಮಕ್ಕಳು ನೃತ್ಯ ಪ್ರದರ್ಶಿಸಿದರು. ಪ್ರೇಮಾಲಯ ಸಂಸ್ಥೆಯ ಮಕ್ಕಳು ಯೋಗ ಪ್ರದರ್ಶನ ಮಾಡಿದರು.

* * *

‘ಪ್ರೋತ್ಸಾಹವೇ ಶಕ್ತಿ’

40 ವರ್ಷಗಳಿಂದ ಮಕ್ಕಳ ಮೇಳ ನಡೆಸಲಾಗುತ್ತಿದೆ. ಬಡವರ, ಅಶಕ್ತರ ಮಕ್ಕಳಿಗೆ ಅವಕಾಶ ಒದಗಿಸುವುದೇ ಇದರ ಉದ್ದೇಶ. ವಿಶೇಷ ಮಕ್ಕಳನ್ನು ಪ್ರೋತ್ಸಾಹಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಲಾಗುತ್ತಿದೆ ಎಂದು ಜಿಲ್ಲಾ ಶಿಶು ಕಲ್ಯಾಣ ಮಂಡಳಿ ಗೌರವಾಧ್ಯಕ್ಷೆ ಸಿ. ನಾಗಮ್ಮ ಕೇಶವಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT