ಭಾನುವಾರ, ಜುಲೈ 3, 2022
24 °C
ದಲಿತ ಸೇನೆ ರಾಜ್ಯ ಘಟಕದ ಅಧ್ಯಕ್ಷ ಹನುಮಂತ್ ಜಿ. ಯಳಸಂಗಿ ಸಲಹೆ

ದೌರ್ಜನ್ಯದ ವಿರುದ್ಧ ಮಹಿಳೆಯರು ಹೋರಾಡಿ: ಹನುಮಂತ್ ಜಿ. ಯಳಸಂಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಕೆಲವರು ಪ್ರಶ್ನಿಸುತ್ತಿದ್ದು, ಅದಕ್ಕೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟುವ ಕೆಲಸ ದಲಿತ ಸೇನೆಯಿಂದ ಆಗಬೇಕಾಗಿದೆ ಎಂದು ದಲಿತ ಸೇನೆ ರಾಜ್ಯ ಘಟಕದ ಅಧ್ಯಕ್ಷ ಹನುಮಂತ್ ಜಿ. ಯಳಸಂಗಿ ಹೇಳಿದರು.

ನಗರದ ಜಯದೇವ ವೃತ್ತದ ಶಂಕರ ಮಠದ ಶಾರದ ಮಂದಿರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ದಲಿತ ಸೇನೆಯ ರಾಜ್ಯ ಸಮಿತಿ ಪದಾಧಿಕಾರಿಗಳ ಹಾಗೂ ಎಲ್ಲ ಜಿಲ್ಲೆಗಳ ಅಧ್ಯಕ್ಷರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಸತ್ತಿನ ಹೊರಗೆ ಹಾಗೂ ಒಳಗೆ ಯಾವುದೇ ಸರ್ಕಾರವಿದ್ದರೂ ಅಂಬೇಡ್ಕರ್ ಸಂವಿಧಾನವನ್ನು ಟೀಕಿಸುತ್ತಿದ್ದವವರಿಗೆ ರಾಮ್‌ವಿಲಾಸ್ ಪಾಸ್ವಾನ್ ಉತ್ತರ ನೀಡುತ್ತಿದ್ದರು’ ಎಂದು ಸ್ಮರಿಸಿದರು.

‘ಪರಿಶಿಷ್ಟರ ಮೇಲೆ ನಿರಂತರ ದಬ್ಬಾಳಿಕೆಗಳು ನಡೆಯುತ್ತಿದ್ದು, ಆಳುವ ಸರ್ಕಾರಗಳು ಈ ಬಗ್ಗೆ ಗಮನಹರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಚಳವಳಿ ನಡೆಯಬೇಕು. ಆ ಚಳವಳಿಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು. ಮೀಸಲಾತಿ ಕೇಳುವ ಹಾಗೆಯೇ ಸಾಮಾಜಿಕ ಅನ್ಯಾಯಗಳ ವಿರುದ್ಧ ಮಹಿಳೆಯರು ಧ್ವನಿ ಎತ್ತಬೇಕು’ ಎಂದು ಸಲಹೆ ನೀಡಿದರು.

‘ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ. ಉತ್ತರಪ್ರದೇಶದ ಹಥ್ರಾಸ್‌ನಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯ ನಾಲಿಗೆಯನ್ನು ಕತ್ತರಿಸಲಾಗಿದೆ. ಇವರು ಸಂಘ ಪರಿವಾರಕ್ಕೆ ಸೇರಿದ್ದರಿಂದ ಯಾರೊಬ್ಬರನ್ನೂ ಬಂಧಿಸಿಲ್ಲ. ಇನ್ನೊಂದೆಡೆ ಸರ್ಕಾರ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಜಾರಿಗೆ ತಂದಿದ್ದರೂ ಹೆಣ್ಣು ಮಕ್ಕಳನ್ನು ರಕ್ಷಿಸುವ ಕೆಲಸವಾಗಿಲ್ಲ’ ಎಂದು ಆರೋಪಿಸಿದರು.

‘ಈ ದೇಶದಲ್ಲಿ ಸಮರ್ಥವಾಗಿ ಧ್ವನಿ ಎತ್ತುತ್ತಿದ್ದ ಕಾನ್ಶಿರಾಂ ಹಾಗೂ ಮಾಯಾವತಿ ಅವರನ್ನು ಮನುವಾದಿಗಳು ಬಗ್ಗು ಬಡಿದಿದ್ದು, ಲೋಕಸಭೆಯಲ್ಲಿ ಪ್ರಬಲವಾಗಿ ಧ್ವನಿ ಎತ್ತುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇವಿಎಂ ಬಳಸಿ ಸೋಲಿಸಲಾಯಿತು’ ಎಂದು ಆರೋಪಿಸಿದರು.

‘ಭಾರತದ ರೈತರ ಪರ ಧ್ವನಿ ಎತ್ತಿದ ಪಾಪ್‌ ಸಂಗೀತ ಕಲಾವಿದೆ ರಿಹಾನಾ ಅವರನ್ನು ಟೀಕಿಸುವ ಕೆಲಸಗಳು ಆಗುತ್ತಿವೆ. ಚಿತ್ರನಟರಾದ ಅಕ್ಷಯ್ ಕುಮಾರ್, ಕಂಗನಾ ರನೌತ್ ಸೇರಿ ಅನೇಕರು ರೈತರನ್ನು ಆತಂಕವಾದಿಗಳು ಎಂದು ಬಿಂಬಿಸಿ ಕೇಂದ್ರ ಸರ್ಕಾರದ ಪರ ಮಾತನಾಡುತ್ತಿದ್ದಾರೆ. ಕಂಗನಾ ರನೌತ್ ಹಾಕಿರುವ ಬಟ್ಟೆ ರೈತರ ಶ್ರಮದಿಂದ ಬಂದಿದ್ದು ಎಂಬುದನ್ನು ಮರೆಯಬಾರದು. ಇಂತಹ ಹೇಳಿಕೆ ನೀಡುವವರನ್ನು ದೇಶದಿಂದ ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಸೇನೆ ಉಪಾಧ್ಯಕ್ಷ ರಾಜಶೇಖರ್ ಎಂ. ಚೌರ್, ‘ಇಂದು ರಾಜ್ಯದಲ್ಲಿ ಪರಿಶಿಷ್ಟ ಪಂಗಡ, ‘2ಎ’ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಗಳು ಮೀಸಲಾತಿಯನ್ನೇ ಕಿತ್ತೊಗೆಯುವ ಹುನ್ನಾರದ ಭಾಗವಾಗಿವೆ’ ಎಂದು ಆರೋಪಿಸಿದರು.

ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದರೆಂಬ ಕಾರಣಕ್ಕೆ ಕೋರ್ಟ್ ಆವರಣದಲ್ಲೇ ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿಯುವ ವಕೀಲೆ, ಉತ್ತರ ಪ್ರದೇಶದಲ್ಲಿ ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಅದರ ವಿರುದ್ಧ ಏಕೆ ಧ್ವನಿ ಎತ್ತಲಿಲ್ಲ. ಅಲ್ಲಿಯ ಸಿಎಂ ಮುಖಕ್ಕೆ ಏಕೆ ಮಸಿ ಬಳಿಯಲಿಲ್ಲ’ ಎಂದು ಪ್ರಶ್ನಿಸಿದರು.

ಸೇನೆಯ ಉಪಾಧ್ಯಕ್ಷರಾದ ಎನ್. ಪರಮೇಶ್ವರಪ್ಪ, ಜಿ. ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಎನ್. ರವಿಕುಮಾರ್, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಜಿ.ಪವಿತ್ರಾ, ಕಾರ್ಮಿಕ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ರಾಜಪ್ಪ, ರಾಜ್ಯ ಸಮಿತಿ ಸದಸ್ಯ ವಿ. ಮುತ್ತಣ್ಣ, ಎಂ. ಮಹೇಶ್ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು