ಪಟ್ಟಭದ್ರರ ಪಾಲಾದ ಕಾರ್ಮಿಕರ ಕಿಟ್‍ಗಳು- ಅಧಿಕಾರಿಗಳ ವಿರುದ್ಧ ಆಕ್ರೋಶ

ಹರಿಹರ: ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಸರ್ಕಾರದಿಂದ ಕಟ್ಟಡ ಕಾರ್ಮಿಕರಿಗೆ ಹಂಚುತ್ತಿರುವ ಕಿಟ್‍ಗಳು ಕಂಡವರ ಪಾಲಾಗುತ್ತಿದ್ದರೂ ಅಧಿಕಾರಿಗಳು ಮೂಕ ಪ್ರೇಕ್ಷಕರಂತೆ ನಿಂತು ನೋಡುತ್ತಿದ್ದ ದೃಶ್ಯ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಯಿತು.
ಕಾರ್ಮಿಕ ಇಲಾಖೆ ಕವಿತಾ ಮಾತನಾಡಿ, ತಾಲ್ಲೂಕಿಗೆ 5 ಸಾವಿರ ಕಿಟ್‍ಗಳನ್ನು ನೀಡಲಾಗಿದೆ. ನೋಂದಾಯಿತ ಸಂಘಗಳ ತಲಾ 50 ಫಲಾನುಭವಿಗಳಿಗೆ ಕಿಟ್ ವಿತರಿಸಲು ಯೋಜಿಸಲಾಗಿತ್ತು. ಆದರೆ, ಹೆಚ್ಚು ಕಾರ್ಮಿಕರು ಆಗಮಿಸಿದ ಕಾರಣ ಸೋಮವಾರ 1 ಸಾವಿರ ಕಿಟ್‍ಗಳನ್ನು ವಿತರಿಸಲಾಗಿದೆ. ಬೇಡಿಕೆ ಹೆಚ್ಚಾಗಿದ್ದರಿಂದ ಕಿಟ್ ವಿತರಣೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.
ಹೆಚ್ಚವರಿ ಕಿಟ್‍ಗಳಿಗಾಗಿ ಶಾಸಕರು ಕಾರ್ಮಿಕ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ಕಿಟ್ ವಿತರಣೆ ಬಗ್ಗೆ ಶೀಘ್ರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಕಟ್ಟಡ ಕಾರ್ಮಿಕ ಹುಚ್ಚಪ್ಪ ಆನವೇರಿ ಮಾತನಾಡಿ, ‘ಕಿಟ್ ವಿತರಣಾ ಕೇಂದ್ರದ ಹಿಂಭಾಗದಲ್ಲಿ ನಗರಸಭೆ ಸದಸ್ಯರೊಬ್ಬರು ಕೂಪನ್‍ಗಳನ್ನು ವಿತರಿಸುತ್ತಿದ್ದಾರೆ. ಕೂಪನ್ ಕೇಳಲು ಹೋದಾಗ ನಮ್ಮ ಸಂಘದ ಸದಸ್ಯರಿಗೆ ಮಾತ್ರ ಕೂಪನ್, ಉಳಿದವರು ಅಧಿಕಾರಿಗಳ ಬಳಿ ಪಡೆಯಿರಿ ಎಂದು ವಾಪಸ್ ಕಳುಹಿಸಿದರು’ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಮಿಕ ಬೀರಪ್ಪ ಮಾತನಾಡಿ, ‘ತಾಲ್ಲೂಕಿನಲ್ಲಿ ಒಟ್ಟು 17,895 ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು, ಸರ್ಕಾರ ಕೇವಲ 5 ಸಾವಿರ
ಕಿಟ್‍ಗಳನ್ನು ವಿತರಿಸಿದೆ. ಯಾವ ಮಾನದಂಡದಲ್ಲಿ ಅಧಿಕಾರಿಗಳು ಕಿಟ್‍ಗಳನ್ನು ಹಂಚಿಕೆ ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.
ನಗರಸಭೆ ಸದಸ್ಯ ಆರ್.ಸಿ. ಜಾವೇದ್ ಮಾತನಾಡಿ, ‘ಪ್ರತಿ ವಾರ್ಡ್‌ನಲ್ಲಿ ಕಟ್ಟಡ ಕಾರ್ಮಿಕರಿದ್ದಾರೆ. ಇಲಾಖೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದೆ ಕಿಟ್ ಹಂಚುತ್ತಿರುವುದು ತಪ್ಪು. ಕಿಟ್‍ಗಳು ಬಡ ಕಾರ್ಮಿಕರ ಬದಲು ಪಟ್ಟಭದ್ರ ಹಿತಾಸಕ್ತಿಗಳ ಹಾಗೂ ಉಳ್ಳವರ ಪಾಲಾಗುತ್ತಿವೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳು, ಸಂಘ-ಸಂಸ್ಥೆ ಹಾಗೂ ಅಧಿಕಾರಿಗಳ ಪಾಲುದಾರಿಕೆಯಲ್ಲಿ ಬಡ ಕಾರ್ಮಿಕರ ಹೊಟ್ಟೆ ಸೇರಬೇಕಿದ್ದ ದಿನಸಿ ಸಾಮಗ್ರಿಗಳು ಪಟ್ಟಭದ್ರರ ಪಾಲಾಗಿರುವುದು ಬೇಸರ ಮೂಡಿಸಿದೆ ಎಂಬುದು ಕಾರ್ಮಿಕ ಅಳಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.