ದಾವಣಗೆರೆ: ಕೊರೊನಾ ವೈರಸ್ ಸೋಂಕು ಬಂದು ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದರಿಂದ ಸರ್ಕಾರಿ ಉದ್ಯೋಗ ಇರುವ ಮಹಿಳೆಯರೂ ಹೊಸ ಬಟ್ಟೆ ಕೊಳ್ಳುತ್ತಿಲ್ಲ. ಕರ್ತವ್ಯ ಮತ್ತು ಪ್ರಾರ್ಥನೆಗೆ ಸೀಮಿತಗೊಂಡಿದ್ದಾರೆ. ಅಂದಂದಿನ ದುಡಿಮೆಯನ್ನು ಅವಲಂಬಿಸಿರುವ ಮಹಿಳೆಯರಂತು ದುಡಿಮೆ ಇಲ್ಲದೇ ಬರೀ ಪ್ರಾರ್ಥನೆ ಮಾಡುತ್ತಿದ್ದಾರೆ. ‘ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇವೆ’ ಎಂಬ ಮಾತು ಎಲ್ಲರಲ್ಲೂ ಸಾಮಾನ್ಯವಾಗಿದೆ.
‘ರಂಜಾನ್ ತಿಂಗಳ ಉಪವಾಸ ಮತ್ತು ಕೊನೆಯಲ್ಲಿ ಆಚರಿಸುವ ಹಬ್ಬ ನಮ್ಮ ಎಲ್ಲ ಹಬ್ಬಗಳಲ್ಲಿ ಶ್ರೇಷ್ಠವಾದುದು. ಹಿಂದಿನ ವರ್ಷಗಳಲ್ಲಿ ನಾವು ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದೆವು. ಎಲ್ಲರಿಗೂ ಹೊಸ ಬಟ್ಟೆಗಳನ್ನು ತೆಗೆದುಕೊಳ್ಳುತ್ತಿದ್ದೆವು. ರಂಜಾನ್ ತಿಂಗಳಲ್ಲಿ ರಾತ್ರಿ ಹೊಸ ಹೊಸ ತಿನಿಸುಗಳನ್ನು ಮಾಡುತ್ತಿದ್ದೆವು. ಈ ವರ್ಷದ ಸನ್ನಿವೇಶ ಯಾವತ್ತೂ ಬಂದಿರಲಿಲ್ಲ. ಎಲ್ಲರೂ ಸಂಕಟದಲ್ಲಿ ಇರುವಾಗ ನಾವು ಹೇಗೆ ಸಂಭ್ರಮ ಪಡಲಿ’ ಎಂದು ಪ್ರಶ್ನಿಸುತ್ತಾರೆ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿಯಾಗಿರುವ ನಜ್ಮಾ.
‘ಯುಗಾದಿ, ಗುಡ್‌ಫ್ರೈಡೆಗಳನ್ನು ಸರಳವಾಗಿ ಆಚರಿಸಿದ್ದಾರೆ. ನಾವು ಕೂಡ ರಂಜಾನ್ ಅನ್ನು ಸರಳವಾಗಿ ಆಚರಿಸುತ್ತಿದ್ದೇವೆ. ಕೊರೊನಾ ವೈರಸ್ ಹೋಗಲಿ, ಎಲ್ಲರಿಗೂ ನೆಮ್ಮದಿಯ ಬದುಕು ಸಿಗಲಿ ಎಂದು ನಿತ್ಯ ಪ್ರಾರ್ಥನೆ ಮಾಡುತ್ತಿದ್ದೇವೆ. ಹಬ್ಬಕ್ಕೆ ನಮಗಾಗಲಿ ಮಕ್ಕಳಿಗಾಗಲಿ ಹೊಸ ಬಟ್ಟೆ ತೆಗೆದುಕೊಂಡಿಲ್ಲ. ಮನೆಯಲ್ಲೇ ಹಬ್ಬವನ್ನು ಆಚರಿಸುತ್ತೇವೆ’ ಎನ್ನುತ್ತಾರೆ ಅವರು.
‘ರಂಜಾನ್ ಹಬ್ಬದಲ್ಲಿ ಎಲ್ಲರೂ ಭೇಟಿಯಾಗುವುದು ಪರಸ್ಪರ ಶುಭ ಕೋರುವುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ನಾವು ನಮ್ಮ ನಮ್ಮ ಮನೆಯಲ್ಲಿ ಇದ್ದುಕೊಂಡೇ ಶುಭಾಶಯ ಕೋರುತ್ತಿದ್ದೇವೆ. ಯಾರನ್ನೂ ಭೇಟಿಯಾಗುವುದಿಲ್ಲ. ಮನೆ ಮಂದಿಯಷ್ಟೇ ಕುಳಿತು ಹಬ್ಬ ಆಚರಿಸಲಿದ್ದೇವೆ’ ಎಂದು ದಾವಣಗೆರೆಯ ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾವು ಬಟ್ಟೆ, ಇನ್ನಿತರ ವಸ್ತುಗಳನ್ನು ಖರೀದಿಸುವುದಿಲ್ಲ. ಅದರ ಹಣವನ್ನು ತೀರ ಸಂಕಷ್ಟದಲ್ಲಿ ಇರುವ ಬಡವರಿಗೆ ನೀಡುತ್ತೇವೆ. ಎಲ್ಲರೂ ಸಂಕಷ್ಟದಿಂದ ಪಾರಾಗಬೇಕು ಎಂಬುದೇ ನಮ್ಮ ಪ್ರಾರ್ಥನೆ’ ಎಂದು ಹೇಳಿದರು.
‘ಪ್ರತಿ ಬಾರಿ ರಂಜಾನ್ ತಿಂಗಳಲ್ಲಿ ಮನೆ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದೆವು. ಈ ಬಾರಿ ಮನೆಗಿಂತ ಕೆಲಸ ಕಡೆಗೇ ಹೆಚ್ಚು ಗಮನಕೊಡುತ್ತಿದ್ದೇವೆ. ‘ಕಾಮ್ ಇಬದಾತ್ ಹೈ’ (ಕಾಯಕವೇ ಕೈಲಾಸ) ಎಂದು ತಿಳಿದಿದ್ದೇವೆ. ಕೊರೊನಾ ನಿಯಂತ್ರಣಕ್ಕೆ ನಾವು ಕೆಲಸ ಮಾಡದಿದ್ದರೆ ದೇವರು ಮೆಚ್ಚಲ್ಲ. ಜಿಲ್ಲಾಧಿಕಾರಿ ಕೂಡ ನಮಗೆ ಸಂಜೆ ಉಪವಾಸ ಬಿಡುವ ಹೊತ್ತಿಗೆ ಮನೆಯಲ್ಲಿರಲು ಅವಕಾಶ ಮಾಡಿಕೊಟ್ಟಿದ್ದಾರೆ. ಹೆಚ್ಚು ಕೆಲಸ ಇದ್ದಾಗ ಸಂಜೆ ಮನೆಗೆ ಹೋಗಿ ಉಪವಾಸ ಮುಗಿಸಿ ರಾತ್ರಿ ಮತ್ತೆ ಕಚೇರಿಗೆ ಬಂದು ಕೆಲಸ ಮಾಡಿದ್ದೇವೆ. ಜಿಲ್ಲಾಧಿಕಾರಿಯವರಿಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ’ ಎಂದು ನಜ್ಞಾ ಮತ್ತು ರೇಷ್ಮಾ ಹೇಳಿಕೊಂಡರು.
‘ದುಡಿಮೆಯೇ ಇಲ್ಲ’
‘ನಾನು ಬೀಡಿ ಕಟ್ಟುತ್ತಿದ್ದೆ. ನಮ್ಮ ಮನೆಯವರು (ಸಿಕಂದರ್‌ಖಾನ್) ಕಟ್ಟಡ ಕಾರ್ಮಿಕರು. ಕೊರೊನಾ ಬಂತೆಂದು ದೇಶದಲ್ಲಿ ಲಾಕ್‌ಡೌನ್ ಮಾಡಿದ್ದಲ್ಲಿಂದ ನಮ್ಮಿಬ್ಬರಿಗೂ ದುಡಿಮೆ ಇಲ್ಲ.ಅಂಗಡಿಯಿಂದ ಸಾಲ ಮಾಡಿ ಸಾಮಗ್ರಿ ತರುತ್ತಿದ್ದೇವೆ. ಬಿಪಿಎಲ್ ಕಾರ್ಡ್ ಇರುವುದರಿಂದ ರೇಷನ್ ಸಿಕ್ಕಿದೆ’ ಎಂದು ಬಾಷಾನಗರದ ಬೀಡಿ ಕಾರ್ಮಿಕರಾದ ಶಿರಿನ್‌ಬಾನು ‘ಪ್ರಜಾವಾಣಿ’ಗೆ ಸಂಕಷ್ಟದ ಪರಿ ವಿವರಿಸಿದರು.
‘ಇದು ನಮ್ಮ ಕುಟುಂಬದ ಸಮಸ್ಯೆ ಮಾತ್ರ ಇಲ್ಲ. ಸುತ್ತಮುತ್ತಲಿನ ಎಲ್ಲರ ಕಥೆಯೂ ಇದೇ ಆಗಿದೆ. ಸಾಲವೋ ಇನ್ನೊಂದೋ ಸದ್ಯಕ್ಕೆ ನಮಗೆ ಊಟ ಇಲ್ಲದಂತಾಗಿಲ್ಲ. ಆದರೆ ಊಟಕ್ಕೆ ತೊಂದರೆ ಇರುವವರೂ ಇದ್ದಾರೆ’ ಎಂದು ಸಮಸ್ಯೆ ಬಿಡಿಸಿಟ್ಟರು.
‘ನಮಗೆ ಇಬ್ಬರು ಮಕ್ಕಳಿದ್ದಾರೆ. ಈ ಪರಿಸ್ಥಿತಿಯನ್ನು ನೋಡಿ ನಮಗೆ ಹಬ್ಬಕ್ಕೆ ಹೊಸ ಬಟ್ಟೆ ಬೇಡ ಎಂದು ಅವರೇ ತಿಳಿಸಿದ್ದಾರೆ. ನಮ್ಮ ಕಷ್ಟವನ್ನು ಮಕ್ಕಳೂ ಅರ್ಥ ಮಾಡಿಕೊಂಡಿದ್ದಾರೆ. ಈ ಬಾರಿ ಮನೆಯಲ್ಲೇ ಪ್ರಾರ್ಥನೆ ಮಾಡುತ್ತಿದ್ದೇವೆ. ಹಬ್ಬದ ದಿನ ಕೂಡ ಮನೆಯ ಮಂದಿಯಷ್ಟೇ ಆಚರಣೆ ಮಾಡುತ್ತೇವೆ’ ಎಂದು ತಿಳಿಸಿದರು.
‘ಮಕ್ಕಳು ಬೇಡಿಕೆ ಇಡುವ ಸಮಯ’
ವಿವಿಧ ವಸ್ತುಗಳನ್ನು ತೆಗೆದುಕೊಳ್ಳಲು ಬೇಡಿಕೆ ಇಡುವುದು, ಕೇಳಿದ್ದನ್ನು ಕೊಡಲೇಬೇಕು ಎಂದು ಮಕ್ಕಳು ಹಠ ಹಿಡಿಯುವುದೇ ರಂಜಾನ್ ಹಬ್ಬದಲ್ಲಿ. ಆದರೆ ಈ ವರ್ಷದ ರಂಜಾನ್ ಹಬ್ಬ ಇಂಥ ಯಾವ ಸಂಭ್ರಮವೂ ಇಲ್ಲದ ಸನ್ನಿವೇಶದಲ್ಲಿ ಬಂದು ಬಿಟ್ಟಿದೆ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಜಬೀನಾಖಾನಂ ಪರಿಸ್ಥಿತಿಯನ್ನು ವಿವರಿಸಿದರು.
ರೋಜಾ ಮುಗಿದ ತಕ್ಷಣ ಬಗೆಬಗೆಯ ಬಟ್ಟೆ, ಬಳೆಗಳು, ಕ್ಲಿಪ್, ಚಪ್ಪಲಿ, ಸೆಂಟು, ಕರ್ಚಿಪ್, ಅರಿಶಿಣ ಖರೀದಿಸುತ್ತಿದ್ದ ಹೆಣ್ಣುಮಕ್ಕಳನ್ನು ಕೊರೊನಾ ಸುಮ್ಮನಾಗಿಸಿದೆ. ಎಲ್ಲರ ಕೈ ಖಾಲಿಯಾಗಿಸಿದೆ. ಮನೆಯಲ್ಲಿರುವ ಗಂಡುಮಕ್ಕಳಿಗೆ ಒಳ್ಳೆಯ ಟೋಪಿಯನ್ನು ಕೂಡ ಹೆಣ್ಣುಮಕ್ಕಳು ಖರೀದಿಸುತ್ತಿದ್ದರು. ಅದೂ ನಿಂತಿದೆ. ದಿನಾ ಹಾಲು ಹಾಕಿದ ಚಹಾ ಕುಡಿಯುತ್ತಿದ್ದರು. ಈಗ ಹಣವಿಲ್ಲದೇ ಬರೀ ಡಿಕಾಕ್ಷನ್ ಕುಡಿಯುವಂತಾಗಿದೆ. ಕೊರೊನಾ ಎಂಬ ಸೋಂಕು ಕೆಲವರಿಗಷ್ಟೇ ಬಂದಿರಬಹುದು. ಆದರೆ ಎಲ್ಲ ಬಡವರ ಹೊಟ್ಟೆಗೆ ಹೊಡೆದಿದೆ. ಎಲ್ಲರ ಕೆಲಸವನ್ನು ಕಸಿದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅವರು.
‘ರೋಜಾ ಬಿಡುವ ಸಮಯಕ್ಕೆ ಕಣ್ಣಿಂದ ನೀರು ಜಾರುತ್ತಿದೆ. ಹೋದ ವರ್ಷದ ಬಟ್ಟೆ ಧರಿಸಿ, ಮನೆಯಲ್ಲಿ ಸಿಂಪಲ್ ಆಗಿ ಅಡುಗೆ ಮಾಡಿ ರಂಜಾನ್ ಆಚರಿಸುತ್ತಿದ್ದೇವೆ. ಕೊರೊನಾ ನೀಡಿದ ನೋವು ಒಂದು ಕಡೆಯಾದರೆ ಅದಕ್ಕೆ ಒಂದು ಸಮುದಾಯ ಕಾರಣ ಎಂದು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ನೋವು ಇನ್ನೊಂದು ಕಡೆ ಕಾಡುತ್ತಿದೆ. ಕೊರೊನಾ ಮತ್ತು ಇಂಥ ದ್ವೇಷದ ಮನಸ್ಥಿತಿ ಹೋಗಲಿ, ಸೌಹಾರ್ದದಿಂದ, ನೆಮ್ಮದಿಯಿಂದ ಎಲ್ಲರೂ ಬದುಕಲಿ ಎಂಬುದೇ ಈ ಹಬ್ಬದ ಸಂದರ್ಭದಲ್ಲಿ ನಾನು ಮಾಡುವ ವಿಶೇಷ ಪ್ರಾರ್ಥನೆ’ ಎಂದು ‘ಪ್ರಜಾವಾಣಿ’ಗೆ ವಿವರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.