ಸೋಮವಾರ, ಮಾರ್ಚ್ 20, 2023
30 °C
ವೆಬಿನಾರ್‌ನಲ್ಲಿ ಮೈಸೂರಿನ ಯೋಗ ಗುರು ಶ್ರೀಹರಿ ಅನಿಸಿಕೆ

ನೆಮ್ಮದಿ, ಸಂತೃಪ್ತ ಬದುಕಿನ ಸೂತ್ರಗಳೇ ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಿತ್ಯ ಬದುಕಿನ ನೆಮ್ಮದಿಗೆ, ಸಂತೃಪ್ತಿಗೆ ಅಗತ್ಯವಿರುವ ಸೂತ್ರಗಳನ್ನು ಯಾವುದಕ್ಕೂ ಹೊರೆಯಾಗದಂತೆ ಅಳವಡಿಸಿಕೊಳ್ಳುವುದೇ ನಿಜವಾದ ಯೋಗಶಾಸ್ತ್ರ. ಇದೇ ಸೂತ್ರ ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಏಕಾಗ್ರತೆ ಕಾಪಾಡಿಕೊಂಡು ಗುರಿ ಮುಟ್ಟುವ ಮಾರ್ಗದರ್ಶಿ ಎಂದು ಮೈಸೂರಿನ ಜಿ.ಎಸ್.ಎಸ್ ಯೋಗ ಪ್ರತಿಷ್ಠಾನದ ಸಂಸ್ಥಾಪಕ ಶ್ರೀಹರಿ ಅವರು ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಿಂದ ಬುಧವಾರ ಏರ್ಪಡಿಸಿದ್ದ ‘ವೃತ್ತಿ ಮತ್ತು ಏಕಾಗ್ರತೆ’ ಕುರಿತ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಜೀವನವೇ ಒಂದು ಯೋಗ. ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ, ಹೇಗೆ ಬದುಕುತ್ತೇವೆ ಎಂಬುದು ಮುಖ್ಯ. ಅದಕ್ಕೆ ನಿರ್ದಿಷ್ಟ ಗುರಿ ಬೇಕು. ತಲುಪಲು ಅಗತ್ಯವಿರುವ ದಾರಿಗಳನ್ನು ಕಂಡುಕೊಳ್ಳಬೇಕು. ಇಲ್ಲಿ ನಡೆಯುವ ದಾರಿ ಯಾವುದು ಎಂಬುದು ಮುಖ್ಯವಾಗುತ್ತದೆ’ ಎಂದು ನುಡಿದರು.

‘ಕೆಲಸದ ಒತ್ತಡದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಹಲವಾರು ಸಮಸ್ಯೆಗಳಿಗೂ ಕಾರಣವಾಗುತ್ತದೆ. ಯಾವುದು ಬೇಡವಾಗುತ್ತದೆಯೋ ಅದನ್ನು ಒತ್ತಾಯದಿಂದ ಮಾಡಿದಾಗ ಕಷ್ಟವೆನಿಸುತ್ತದೆ. ಆದರೆ, ಅದೇ ಕೆಲಸವನ್ನು ಪ್ರೀತಿಯಿಂದ, ಆತ್ಮೀಯತೆಯಿಂದ ನಿರ್ವಹಿಸಲು ಮುಂದಾದಾಗ ಸುಲಭವಾಗುತ್ತದೆ. ಇದಕ್ಕೆ ತನ್ಮಯತೆ, ಸ್ವೀಕಾರ ಮನೋಭಾವ ಮುಖ್ಯ. ಆದರೆ, ಅದನ್ನು ಪಡೆಯಲು ಕಷ್ಟಪಡಬೇಕಿಲ್ಲ, ಅನುಭವಿಸಬೇಕು. ಆಗ ಅದು ಸಿದ್ಧಿಸುತ್ತದೆ’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ, ‘ಜೀವನದಲ್ಲಿ ಆರೋಗ್ಯಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಆರೋಗ್ಯವನ್ನು ಎಷ್ಟೇ ಹಣ ಕೊಟ್ಟರೂ ಪಡೆಯಲಾಗದು. ಉತ್ತಮ ಆರೋಗ್ಯಕ್ಕೆ ಯೋಗ, ಪ್ರಾಣಾಯಾಮ, ಸಾತ್ವಿಕ ಆಹಾರ ಮುಖ್ಯ. ದೇಹ ಉತ್ತಮವಾಗಿದ್ದರೆ ಮಾನಸಿಕ ಆರೋಗ್ಯ ಗಟ್ಟಿಯಾಗಿರುತ್ತದೆ. ಇವೆಲ್ಲ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತವೆ’ ಎಂದು ನುಡಿದರು.

ಕುಲಸಚಿವೆ ಪ್ರೊ.ಗಾಯತ್ರಿ ದೇವರಾಜ, ‘ಏಕಾಗ್ರತೆ ಇದ್ದಾಗ ಮಾಡುವ ವೃತ್ತಿ ಮೌಲ್ಯ ಸಿಗುತ್ತದೆ. ಗುಣಮಟ್ಟದ ಕೆಲಸವನ್ನು ನಿರೀಕ್ಷಿಸಲು ಸಾಧ್ಯ. ಶಿಸ್ತು, ಸಂಯಮಗಳು ವೃತ್ತಿಯಲ್ಲಿ ಸಾಧನೆಯ ಉನ್ನತಿಗೇರಲು ಸಹಕಾರಿಯಾಗುತ್ತವೆ. ಶಿಸ್ತುಬದ್ಧ ಜೀವನ ಕ್ರಮವೂ  ಬಹಳ ಮುಖ್ಯವೆನಿಸುತ್ತದೆ’ ಎಂದರು.

ಪರೀಕ್ಷಾಂಗ ಕುಲಸಚಿವೆ ಪ್ರೊ. ಅನಿತಾ ಎಚ್.ಎಸ್. ಮಾತನಾಡಿ, ‘ಜೀವನದ ಪ್ರತಿಯೊಂದ ಹಂತದಲ್ಲಿಯೂ ಏಕಾಗ್ರತೆ ಬೇಕಾಗುತ್ತದೆ. ಏಕಾಗ್ರತೆ, ಚಿತ್ತ ಸ್ಥಿರತೆ ಇಲ್ಲದಿದ್ದರೆ ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ. ವೃತ್ತಿ ಮತ್ತು ಏಕಾಗ್ರತೆ ನಾಣ್ಯದ ಎರಡು ಮುಖಗಳಿದ್ದಂತೆ. ಒಂದು ಮುಕ್ಕಾದರೂ ಚಲಾವಣೆ ಆಗುವುದಿಲ್ಲ’ ಎಂದು ಹೇಳಿದರು.

ಕಲಾ ನಿಕಾಯದ ಡೀನ್ ಪ್ರೊ. ಕೆ.ಬಿ.ರಂಗಪ್ಪ, ಪ್ರೊ. ಎಚ್.ಎಸ್.ರವೀಂದ್ರ, ಸಿರಿಗೆರೆ ನಾಗರಾಜ ಭಾಗವಹಿಸಿದ್ದರು. ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದರು. ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಡಾ.ಶಿವಕುಮಾರ ಕಣಸೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಎಂ.ವಿನಯ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು