ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಕ್ಯಾನ್ಸರ್‌ ಜಾಗೃತಿಗೆ ಕೈ ಜೋಡಿಸಿದ ಯುವಪಡೆ

‘ಪ್ರಜಾವಾಣಿ’ ಅಮೃತಮಹೋತ್ಸವ l ವಿಶ್ವ ಕ್ಯಾನ್ಸರ್‌ ದಿನಾಚರಣೆ l ಎಸ್‌ಪಿ ಸಿ.ಬಿ. ರಿಷ್ಯಂತ್‌ ಚಾಲನೆ
Last Updated 5 ಫೆಬ್ರುವರಿ 2023, 5:44 IST
ಅಕ್ಷರ ಗಾತ್ರ

ದಾವಣಗೆರೆ: ಬೀದಿ ಬೀದಿಗಳಲ್ಲಿ ಮೆರವಣಿಗೆ. ರಾರಾಜಿಸಿದ ಫಲಕಗಳು. ‌ಯುವಜನರ ಕಲರವ. ಚಿತ್ರತಂಡಗಳ ಸದಸ್ಯರ ಸಾಥ್‌.

‘ಪ್ರಜಾವಾಣಿ’ ಅಮೃತ ಮಹೋತ್ಸವ ಹಾಗೂ ವಿಶ್ವ ಕ್ಯಾನ್ಸರ್‌ ಜಾಗೃತಿ ದಿನಾಚರಣೆ ಅಂಗವಾಗಿ ಶನಿವಾರ ನಗರದಲ್ಲಿ ಯಶಸ್ವಿಯಾಗಿ ನಡೆದ ‘ಕ್ಯಾನ್ಸರ್‌ ಜಾಗೃತಿ ಜಾಥಾ’ದ ಕೆಲವು ದೃಶ್ಯಗಳು ಇವು.

ಹೈಸ್ಕೂಲ್‌ ಫೀಲ್ಡ್‌ನಲ್ಲಿ ಮುಂಜಾನೆಯೇ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಶೇ 80ಕ್ಕೂ ಅಧಿಕ ಮಂದಿ ಭಾಗವಹಿಸಿ ಈ ಕಾರ್ಯಕ್ರಮಕ್ಕೆ ಮೆರುಗು ತುಂಬಿದರು. ತಮ್ಮ ತಮ್ಮ ವಿದ್ಯಾಸಂಸ್ಥೆಯ ಬ್ಯಾನರ್‌, ಎನ್‌ಎಸ್‌ಎಸ್‌ ಇನ್ನಿತರ ಘಟಕಗಳ ಬ್ಯಾನರ್‌, ವಿವಿಧ ಸಂಘ ಸಂಸ್ಥೆಗಳ ಬ್ಯಾನರ್‌ಗಳನ್ನು ಹಿಡಿದು ಸಂಸ್ಥೆಯ ಗುರುತನ್ನು ಸಾರಿದರು.

ಹೈಸ್ಕೂಲ್‌ ಫೀಲ್ಡ್‌ನಿಂದ ‘ಜಾಗೃತಿ ಜಾಥಾ’ವು ಜಯದೇವ ಸರ್ಕಲ್‌ಗೆ ಹೊರಟಿತು.. ಜಾಥಾದ ಒಂದು ತುದಿ ಜಯದೇವ ಸರ್ಕಲ್‌ನಲ್ಲಿದ್ದರೆ ಇನ್ನೊಂದು ತುದಿ ಹೈಸ್ಕೂಲ್‌ ಮೈದಾನದಲ್ಲಿತ್ತು. ರಸ್ತೆಯ ತುಂಬೆಲ್ಲ ಜಾಥಾ ತುಂಬಿ ಹೋಗಿತ್ತು. ಜಯದೇವ ಸರ್ಕಲ್‌ನಲ್ಲಿ ಬೃಹತ್‌ ಮಾನವ ಸರಪಳಿ ನಿರ್ಮಿಸಲಾಯಿತು.

‘ನಮ್ಮ ದನಿಗಳನ್ನು ಕೂಡಿಸೋಣ ಮತ್ತು ಕ್ರಮ ಕೈಗೊಳ್ಳೋಣ’ ಎಂಬ ಈ ವರ್ಷದ ವಿಶ್ವ ಕ್ಯಾನ್ಸರ್‌ ದಿನದ ಘೋಷ ವಾಕ್ಯವು ಮೊಳಗಿತು. ಕ್ಯಾನ್ಸರ್‌ ನಿಯಂತ್ರಣದ ಬಗ್ಗೆ ಫಲಕಗಳಲ್ಲದೇ ಮೈಕ್‌ ಮೂಲಕವೂ ಘೋಷಣೆಗಳನ್ನು ಕೂಗಲಾಯಿತು. ನಡಿಗೆಯಲ್ಲಿ ಪಾಲ್ಗೊಂಡವರೂ ದನಿಗಳನ್ನು ಕೂಡಿಸಿದರು.

ಅಲ್ಲಿಂದ ಮುಂದೆ ಸಾಗಿ ಶಿವಪ್ಪಯ್ಯ ಸರ್ಕಲ್‌, ಡಾಂಗೆ ಪಾರ್ಕ್‌, ಹಳೇ ಕೆಇಬಿ ರಸ್ತೆಗಾಗಿ ಹದಡಿ ರಸ್ತೆಯನ್ನು ತಲುಪಿತು. ಹದಡಿ ರಸ್ತೆಯಲ್ಲಿ ಬರುತ್ತಿದ್ದ ವಾಹನಗಳನ್ನು ಎರಡೂ ಕಡೆಯೂ ಸ್ವಲ್ಪ ಹೊತ್ತು ಸ್ಥಗಿತಗೊಳಿಸಿ ಮೆರವಣಿಗೆ ಸಾಗಬೇಕಾಯಿತು. ಜಿಲ್ಲಾ ಕ್ರೀಡಾಂಗಣ ರಸ್ತೆ, ಬಾಪೂಜಿ ರಸ್ತೆ, ಡೆಂಟಲ್‌ ಕಾಲೇಜು ರಸ್ತೆಗಾಗಿ ಗುಂಡಿ ಸರ್ಕಲ್‌ಗೆ ಮೆರವಣಿಗೆ ಬಂತು. ಅಲ್ಲಿ ‘ಹೊಂದಿಸಿ ಬರೆಯಿರಿ’, ‘ದಿ’, ಪದವಿ ಪೂರ್ವ ಚಿತ್ರ ತಂಡಗಳ ಜತೆಗೆ ವಿದ್ಯಾರ್ಥಿಗಳು ಸೇರಿ ಮಾನವ ಸರಪಳಿ ನಿರ್ಮಿಸಿದರು. ಮೋದಿ ರಸ್ತೆ, ಚರ್ಚ್‌ ರಸ್ತೆಗಾಗಿ ರಾಂ ಆ್ಯಂಡ್‌ ಕೊ ವೃತ್ತಕ್ಕೆ ಬಂತು. ಅಲ್ಲಿಂದ ಎವಿಕೆ ರಸ್ತೆ ದಾಟಿ ಗುರುಭವನದ ಬಳಿ ಸಮಾಪನಗೊಂಡಿತು.

ಪೊಲೀಸರಿಂದ ಅಚ್ಚುಕಟ್ಟು ವ್ಯವಸ್ಥೆ

ಕ್ಯಾನ್ಸರ್‌ ಜಾಗೃತಿ ಜಾಥಾದ ಉದ್ಘಾಟನಾ ಸಮಾರಂಭ, ಜಾಥಾ ಸಾಗಿದ ಎಲ್ಲ ರಸ್ತೆಗಳು ಮತ್ತು ವೃತ್ತಗಳಲ್ಲಿ ಪೊಲೀಸರ ಅಚ್ಚುಕಟ್ಟು ವ್ಯವಸ್ಥೆ ಗಮನ ಸೆಳೆಯಿತು. ಜಾಥಾ ಮುಂದೆ ಸಾಗುತ್ತಿದ್ದಂತೆ ವಾಹನಗಳನ್ನು ಪರ್ಯಾಯ ರಸ್ತೆಯಲ್ಲಿ ಸಾಗುವಂತೆ ಮಾಡಿ ಎಲ್ಲಿಯೂ ತೊಂದರೆಯಾಗದಂತೆ ನೋಡಿಕೊಂಡರು. ಬಡಾವಣೆ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಧನಂಜಯ್‌, ದಕ್ಷಿಣ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌ ಜಯಪ್ಪ ನಾಯ್ಕ್‌, ಎಎಸ್‌ಐ ದ್ಯಾಮಣ್ಣ, ಎಎಸ್‌ಐ ರಾಮಚಂದ್ರ, ಎಎಸ್‌ಐ ವೀರಣ್ಣ, ಮಲ್ಲಿಕಾರ್ಜುನ, ಮಹಾಂತೇಶ್‌, ಶ್ರೀನಿವಾಸ್‌, ಕೆಂಚಪ್ಪ, ಚಾಲಕ ಹರೀಶ್‌ ಸಹಿತ ಅನೇಕ ಸಿಬ್ಬಂದಿ ಕೈಜೋಡಿಸಿದ್ದರು.

ವಿತರಕರ ಸಹಕಾರ

‘ಪ್ರಜಾವಾಣಿ’ ಪತ್ರಿಕೆಯ ವಿತರಕರು ಬೆಳಿಗ್ಗೆ ಮನೆ ಮನೆಗಳಿಗೆ ಪತ್ರಿಕೆ ವಿತರಿಸಿದ ಬಳಿಕ ಕ್ಯಾನ್ಸರ್‌ ಜಾಗೃತಿ ಜಾಥಾದಲ್ಲಿಯೂ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿರುವುದು ಮೆಚ್ಚುಗೆಗೆ ಪಾತ್ರವಾಯಿತು. ಜಾಥಾಕ್ಕೆ ಬಂದವರಿಗೆಲ್ಲ ‘ಪ್ರಜಾವಾಣಿ’ಯನ್ನು ವಿತರಿಸಿದರು. ಬಳಿಕ ಮೆರವಣಿಗೆಯಲ್ಲಿಯೂ ಸಾಗಿದರು. ಅರುಣ್ ಕುಮಾರ್‌, ರಮೇಶ್‌ ಜೆ. ವತ್ತನ್‌, ನಿಂಗರಾಜ್‌, ಆನಂದ್‌, ಬಸವರಾಜ್‌, ಶಂಕರ್‌, ಸೂರಜ್‌, ಗಣೇಶ್‌, ನಾಗರಾಜ ಆಚಾರ್‌, ನಂದಕುಮಾರ್‌ ಭಾಗವಹಿಸಿದ್ದರು.

ಕ್ಯಾನ್ಸರ್‌ ಜಾಗೃತಿ ಜಾಥಾದ ಯಶಸ್ವಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು: ಕ್ಯಾನ್ಸರ್‌ ವಿರುದ್ಧ ಜಯಸಿರುವ ಆರ್‌.ಟಿ. ಅರುಣ್‌ಕುಮಾರ್‌. ಅವರ ಜತೆಗೆಡಾ. ಜಿ.ಡಿ. ರಾಘವನ್‌, ಕೆ. ಪ್ರಸನ್ನ ಕುಮಾರ್‌, ಎಂ.ಜಿ. ಶ್ರೀಕಾಂತ್‌, ಶ್ರೀಕಾಂತ್‌ ಬಗಾರೆ, ಶಿವಕುಮಾರ್‌ ಮೇಗಳಮನೆ, ಡಿಟಿಡಿಸಿ ಕೊರಿಯರ್‌ನ ಸಿದ್ದೇಶ್‌, ಪಾಲಿಕೆಯ ಆರೋಗ್ಯ ನಿರೀಕ್ಷಕ ನಿಖಿಲ್‌ ಮತ್ತು ಸಿಬ್ಬಂದಿ, ಜ್ಯೋತಿ ಗ್ಯಾಸ್ ಏಜೆನ್ಸಿ ಮಾಲೀಕರಾದ ಆನಂದ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸರ್ಕಾರಿ ಹೈಸ್ಕೂಲ್‌ ಪ್ರಾಂಶುಪಾಲರು ಮತ್ತು ಸಹಶಿಕ್ಷಕರು, ‘ಪ್ರಜಾವಾಣಿ’ ಪತ್ರಿಕಾ ಬಳಗದವರು.

ಸರ್‌ ಎಂ.ವಿ. ಕಾಲೇಜಿನ ಕಾರ್ಯದರ್ಶಿ ಶ್ರೀಧರ್‌ ಉಪಾಹಾರ ವ್ಯವಸ್ಥೆ ಮಾಡಿದ್ದರು. ಲೈಫ್‌ಲೈನ್‌ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದ ಸದಸ್ಯರು ಮತ್ತು ಸರ್‌ಎಂವಿ ಕಾಲೇಜಿನ ಸಿಬ್ಬಂದಿ ಗುರುಭವನದ ಬಳಿ ಅಚ್ಚುಕಟ್ಟಾಗಿ ಉಪಾಹಾರ ವಿತರಿಸಿದರು. ನ್ಯೂಟ್ರಿಸುಕನ್ ಬಯೋಟೆಕ್ ಸಂಸ್ಥೆಯು ನ್ಯೂಟ್ರಿಸುಕನ್ ಸಿರಿಧಾನ್ಯ ಪಾನೀಯ ನೀಡಿತು. ಸಂಸ್ಥೆಯ ಸಂಸ್ಥಾಪಕ ವಿಜ್ಞಾನಿ ಸುಕನ್ಯಾ ಮತ್ತು ಡಾ. ರಾಘವೇಂದ್ರ ಶೆಟ್ಟಿ ಮಿಲ್ಲೆಟ್ ಹೆಲ್ತ್ ಮಿಕ್ಸ್ ಪಾನೀಯದ ಮಹತ್ವವನ್ನು ವಿವರಿಸಿದರು. ವಿಶ್ವಾರಾಧ್ಯ ಕ್ಯಾನ್ಸರ್‌ ಆಸ್ಪತ್ರೆಯ ಇಬ್ರಾಹಿಂ ನಾಗನೂರು ನೇತೃತ್ವದ ತಂಡ, ಯುರೋಕಿಡ್ಸ್‌ನ ನಾಗರಾಜ ಶೆಟ್ಟಿ ತಂಡ, ನಂಜಪ್ಪ ಆಸ್ಪತ್ರೆ, ವಿಜಯ ಕ್ಲಾತ್‌ ಸೆಂಟರ್‌, ವಾಸುದೇವ ರಾಯ್ಕರ್‌, ವಿಶ್ವನಾಥ್‌ ಸಹಿತ ಅನೇಕರು ಕೈ ಜೋಡಿಸಿದ್ದರಿಂದ ನಡಿಗೆ ಯಶಸ್ವಿಯಾಗಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT