ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮೂರ ಮೆರಿ ಕ್ರಿಸ್‌ಮಸ್...

Last Updated 25 ಡಿಸೆಂಬರ್ 2011, 12:05 IST
ಅಕ್ಷರ ಗಾತ್ರ

ಹರಿಹರ ಚರ್ಚ್ ಹಾಗೂ ಕ್ರೈಸ್ತ ಬಾಂಧವರಲ್ಲಿ ಡಿಸೆಂಬರ್ ತಿಂಗಳು ಪ್ರಾರಂಭದಿಂದಲೇ ಕ್ರಿಸ್‌ಮಸ್ ಹಬ್ಬದ ಸಡಗರ ಒಡಮೂಡುತ್ತದೆ. ಮಾಗಿ ಕಾಲದ ಚುಮು-ಚುಮು ಚಳಿ ಅವರ ಹಬ್ಬದ ಆಸಕ್ತಿಗೆ ತಣ್ಣೀರೆಚದೇ, ಇನ್ನಷ್ಟು ಉತ್ಸಾಹ ತುಂಬುತ್ತದೆ. ಹಿರಿಯರು ಮನೆಯವರಿಗಾಗಿ ಹೊಸ ಉಡಿಗೆ ಹಾಗೂ ಉಡುಗೊರೆಗಳನ್ನು ಖರೀದಿಸುವ ಧಾವಂತದಲ್ಲೇ ಸಂತಸ ಪಡುತ್ತಾರೆ.

ಮಹಿಳೆಯರು ಮನೆಯನ್ನು ಸ್ವಚ್ಛಗೊಳಿಸಿ ಹಬ್ಬಕ್ಕಾಗಿ ಸಜ್ಜುಗೊಳಿಸುವುದು, ರುಚಿಕರವಾದ ಕುರುಕಲು ತಿಂಡಿಗಳನ್ನು ತಯಾರಿಸುವ ಜತೆಗೆ ಮನೆಯಲ್ಲೊಂದು ಸುಂದರವಾದ ಗೋದಲಿ ನಿರ್ಮಿಸುವ ಕಾರ್ಯದಲ್ಲಿ ತಮ್ಮನ್ನೇ ಮರೆತಿರುತ್ತಾರೆ. ಮನೆಯ ಹೊರಗೆ ವಿದ್ಯುತ್ ದೀಪವುಳ್ಳ ಸುಂದರವಾದ ನಕ್ಷತ್ರ ನೇತಾಡುತ್ತಿರುವುದು ಕ್ರಿಸ್‌ಮಸ್ ಆಚರಣೆಯ ಶುಭ ಸಂಕೇತವಾಗಿದೆ.

ಸಾಂತಾಕ್ಲಾಸ್ ಬರುತ್ತಾನೆ ಬೇಡಿದ ಉಡುಗೊರೆ ನೀಡುತ್ತಾನೆ ಎಂಬುದು ಕ್ರೈಸ್ತ ಜನಾಂಗದ ಮಕ್ಕಳ ತಲತಲಾಂತರದ ನಂಬಿಕೆ. ಅದಕ್ಕೆ ಪೂರಕವಾಗಿ ಮನೆಯ ಹಿರಿಯರು ಮಕ್ಕಳ ಇಷ್ಟಾನಿಷ್ಟಗಳನ್ನು ಅರಿತು ಅದಕ್ಕೆ ತಕ್ಕಂತೆ ಸಾಂತಾಕ್ಲಾಸ್‌ನ ರೂಪದಲ್ಲಿ ಉಡುಗೊರೆಗಳನ್ನು ನೀಡಿ ಮಕ್ಕಳ ನಂಬಿಕೆಗೆ ಇಂಬು ನೀಡುತ್ತಾರೆ. ಆದ್ದರಿಂದಲೇ ಮಕ್ಕಳು ಕ್ರಿಸ್‌ಮಸ್ ಹಬ್ಬವನ್ನು ಇಷ್ಟಪಡುತ್ತಾರೆ.

ಪ್ರತಿ ಬಾರಿ  ಕ್ರಿಸ್‌ಮಸ್‌ಗಾಗಿ ನಗರದ ಆರೋಗ್ಯಮಾತೆ ಚರ್ಚ್‌ನ ಒಳಾಂಗಣದಲ್ಲಿ ಗೋದಲಿ ನಿರ್ಮಿಸುತ್ತಿದ್ದರು. ಈ ಬಾರಿ ಚರ್ಚ್‌ನ ಆವರಣದಲ್ಲಿ ಶಾಶ್ವತವಾಗಿ ಇರುವಂತೆ ಕಾಂಕ್ರೀಟ್‌ನಲ್ಲಿ ಏಸು ಕ್ರಿಸ್ತ ಜನಿಸಿದ ಗೋದಲಿ ಹಾಗೂ ಅಂದಿನ ಸನ್ನಿವೇಶವನ್ನು ಅತ್ಯಂತ ಸುಂದರವಾಗಿ ನಿರ್ಮಿಸಿದ್ದಾರೆ. ಎಲ್ಲಾ ಪ್ರತಿಮೆಗಳಲ್ಲೂ ಜೀವಂತಿಕೆ ಬಿಂಬಿಸುತ್ತದೆ.

ಕ್ರಿಸ್ತ ಜಯಂತಿಯ ಅಂಗವಾಗಿ ಚರ್ಚ್‌ನಲ್ಲಿ ಡಿ. 24ರ ಮಧ್ಯ ರಾತ್ರಿಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ, ವಿಶ್ವ ಶಾಂತಿ ಹಾಗೂ ನಾಡಿನ ಒಳಿತಿಗಾಗಿ ಸಾಮೂಹಿಕ ಪ್ರಾರ್ಥನೆಗಳು ನಡೆಯುತ್ತವೆ.

ಭಾನುವಾರ ಸಂಜೆ ಸೌಹಾರ್ದ ಕೂಟ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಹೊಸಳ್ಳಿ ಗ್ರಾಮದ ವೇಮನಾನಂದ ಪೀಠದ ವೇಮನಾನಂದಪುರಿ ಸ್ವಾಮೀಜಿ ಹಾಗೂ ಎಂ.ಆರ್. ಅಲಿಖಾನ್ ಭಾಗವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರಿಸ್ತನ ಜನ್ಮದಿಂದ ಪುನರುತ್ಥಾನದ ವರೆಗಿನ ಎಲ್ಲಾ ಘಟನೆಗಳ ಚಿತ್ರಪಟಗಳ ಪ್ರದರ್ಶನ ಏರ್ಪಡಿಸಲಾಗಿದೆ.

`ವಿಶ್ವದ ಸಮಸ್ತ ಜನರಿಗೆ ಶಾಂತಿ, ನೆಮ್ಮದಿ ಹಾಗೂ ಆರೋಗ್ಯ ದೊರೆಯಲಿ. ದೇಶದ ಭವಿಷ್ಯವನ್ನು ಆಪೋಷನ ತೆಗೆದುಕೊಳ್ಳುತ್ತಿರುವ ಭ್ರಷ್ಟಾಚಾರ ಭೂತದ ಧಮನವಾಗಲಿ. ಉತ್ತಮ ಆಡಳಿತ ದೊರೆಯುವಂತಾಗಲಿ~ ಎಂಬ ಸಂದೇಶವನ್ನು ಚರ್ಚ್‌ನ ಪೂಜ್ಯ ಪಾದ್ರಿ ಸ್ಟ್ಯಾನಿ ಡಿ~ಸೋಜಾ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT