ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: 15ರವರೆಗೂ ವಿಸ್ತರಣೆ

Last Updated 12 ಅಕ್ಟೋಬರ್ 2019, 8:47 IST
ಅಕ್ಷರ ಗಾತ್ರ

ಶಿವಮೊಗ್ಗ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯವನ್ನು ಅ.15ರವರೆಗೂ ವಿಸ್ತರಿಸಲಾಗಿದೆ. ಜಿಲ್ಲೆಯ ನಾಗರಿಕರು ಈ ಅವಕಾಶ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಕೋರಿದರು.

ನವೆಂಬರ್ 2, 3, 9 ಹಾಗೂ10ರಂದು ವಿಶೇಷ ಮತ್ತೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು. ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆ, ವಿಳಾಸ ಬದಲಾವಣೆ, ಪರಿಶೀಲನೆ, ದೃಢೀಕರಣ, ತೆಗೆದುಹಾಕುವುದು, ತಪ್ಪು ತಿದ್ದುಪಡಿಗೆ ಅವಕಾಶವಿರುತ್ತದೆ. ಅಗತ್ಯ ದಾಖಲೆ ನೀಡಿ, ಪರಿಷ್ಕರಣೆಗೆ ಒಳಗಾಗಬಹುದು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಾಮಾನ್ಯ ಸೇವಾ ಕೇಂದ್ರ, ಮತದಾರರ ನೋಂದಣಿ ಅಧಿಕಾರಿ ಕಚೇರಿಯ ಮತದಾರರ ಪೂರಕ ಕೇಂದ್ರ, ಕರ್ನಾಟಕ ಓನ್, ಅಟಲ್ ಜನಸ್ನೇಹಿ ಕೇಂದ್ರ, ಗ್ರಾಮಪಂಚಾಯಿತಿ ಬಾಪೂಜಿ ಸೇವಾ ಕೇಂದ್ರ, ಮತಗಟ್ಟೆ ಅಧಿಕಾರಿಗಳ ಬಳಿ ವಿವರಗಳನ್ನು ನೀಡಬಹುದು. ಪಟ್ಟಿಯಿಂದ ಹೆಸರು ಬಿಟ್ಟುಹೋಗಿದ್ದರೆ ಮತ್ತೆ ಸೇರಿಸಬಹುದು. ಮರಣ ಹೊಂದಿದ್ದರೆ ಪಟ್ಟಿಯಿಂದ ತೆಗೆದುಹಾಕಲು ಅವಕಾಶವಿದೆ ಎಂದರು.

ಜಿಲ್ಲೆಯಲ್ಲಿ ಪ್ರಸ್ತುತ 14,46,859 ಮತದಾರರು ಇದ್ದಾರೆ. ಈಗಾಗಲೇ ಜಿಲ್ಲಾಡಳಿತ ಸುಮಾರು 3,06,214 ಮತದಾರರನ್ನು ಭೇಟಿಮಾಡಿದೆ. 2.76 ಲಕ್ಷ ಮತದಾರರ ಮಾಹಿತಿ ಸರಿ ಇದೆ. ವಿವಿಧ ಕಾರಣಗಳಿಂದ 29,885 ವಿಳಾಸಗಳು, ಮತ್ತಿತರ ಮಾಹಿತಿ ತಪ್ಪಾಗಿವೆ. 4,922 ಮತದಾರರನ್ನು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವಿವರ ನೀಡಿದರು.

ಯಾವ ಮತದಾರರೂ ಮತದಾನ ಕಾರ್ಯದಿಂದ ಹೊರಗೆ ಉಳಿಯಬಾರದು. ಎಂಬ ಕಾರಣಕ್ಕೆ ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ.1ರಿಂದ ಆರಂಭಿಸಲಾಗಿದ್ದ ಅಭಿಯಾನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೂವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ನಾಗರಿಕರು ವೆಬ್‌ಸೈಟ್‌ನಲ್ಲೂ ಬದಲಾವಣೆ ಮಾಡಿಕೊಳ್ಳಬಹುದು. ಮತದಾರರ ಸಹಾಯವಾಣಿ ಮೊಬೈಲ್ ಆ್ಯಪ್ ಬಳಸಿಕೊಳ್ಳಬಹುದು.ಮತದಾರರ ಸಹಾಯವಾಣಿಗೆ 1950ಕ್ಕೆ ಕರೆಮಾಡಿ ನ್ಯೂನತೆ ತಿಳಿಸಬಹುದು. ಬೂತ್ಮಟ್ಟದ ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ತಿದ್ದುಪಡಿ ಅಥವಾ ಸೇರ್ಪಡೆಗೊಳಿಸುತ್ತಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT