ಭಾನುವಾರ, ಮೇ 29, 2022
20 °C
ಈದ್ಗಾ, ಪಾಲಿಕೆ, ಮಿನಿವಿಧಾನ ಸೌಧ, ನೆಹರೂ ಮೈದಾನದಲ್ಲಿ ಧ್ವಜಾರೋಹಣ

3 ತಿಂಗಳಲ್ಲಿ 15 ಸಾವಿರ ಆಸ್ತಿ ಸರ್ವೆ: ನಗರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ‘ಸ್ವಾಮಿತ್ವ ಯೋಜನೆ’ ಜಾರಿಗೆ ತರಲಾಗಿದ್ದು, ಮುಂದಿನ ಮೂರು ತಿಂಗಳಲ್ಲಿ 15 ಸಾವಿರ ಆಸ್ತಿಗಳ ಸರ್ವೆ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ನಗರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಹೇಳಿದರು.

ನೆಹರೂ ಮೈದಾನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬುಧವಾರ ಧ್ವಜರೋಹಣ ನೆರವೇರಿಸಿ ಮಾತನಾಡಿದ ಅವರು ‘ತಾಲ್ಲೂಕಿನ 35 ಗ್ರಾಮಗಳ ಪೈಕಿ 9 ಗ್ರಾಮಗಳ 5,212 ಆಸ್ತಿಗಳನ್ನು ಡ್ರೋಣ್‌ ಮೂಲಕ ಸರ್ವೆ ಮಾಡಲಾಗಿದೆ. ಉಳಿದ ಕೆಲಸ ಆದಷ್ಟು ಬೇಗ ಮುಗಿಯಲಿದೆ. ಬಳಿಕ ಗ್ರಾಮ ಪಂಚಾಯ್ತಿಗಳ ಮೂಲಕ ಆಸ್ತಿ ದಾಖಲೆಗಳ ಕಾರ್ಡ್‌ಗಳನ್ನು ವಿತರಿಸಲಾಗುವುದು’ ಎಂದರು.

‘ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲ್ಲೂಕಿನಲ್ಲಿ ಕಳೆದ ಎರಡು ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಒಟ್ಟು 52,197 ರೈತರಿಗೆ ₹49.64 ಕೋಟಿ‌ ಬೆಳೆ ಪರಿಹಾರವನ್ನು ಬ್ಯಾಂಕ್‌ಗಳ ಮೂಲಕ ಫಲಾನುಭವಿ ರೈತರ ಖಾತೆಗೆ ಜಮೆ ಮಾಡಲಾಗಿದೆ’ ಎಂದು ತಿಳಿಸಿದರು.

ಶಾಸಕ ಜಗದೀಶ ಶೆಟ್ಟರ್‌ ಮಾತನಾಡಿ ‘ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ವ್ಯಕ್ತಿ ಕೂಡ ಉನ್ನತ ಹುದ್ದೆಗೇರಲು ಸಂವಿಧಾನ ಕಾರಣ’ ಎಂದರು.

’ಕೋವಿಡ್‌ನಿಂದಾಗಿ ಭಾರತ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಈಗ ಎದುರಾಗಿರುವ ಮೂರನೆ ಅಲೆಯ ಸವಾಲು ಎದುರಿಸಲು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು. ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು. ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ’ ಎಂದು ಹೇಳಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ ‘ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನ ಗಣತಂತ್ರ ವ್ಯವಸ್ಥೆಗೆ ಕೈಗನ್ನಡಿಯಂತಿದೆ. ಸರ್ವರಿಗೂ ಸಮಬಾಳು, ಸಮಪಾಲು ಎನ್ನುವ ಆಶಯ ಸಂವಿಧಾನ ಹೊಂದಿದ್ದು, ಇದು ಈಗಲೂ ಸಾಧ್ಯವಾಗಿಲ್ಲ. ಜಾತಿಧರ್ಮಗಳ ಹೆಸರಿನಲ್ಲಿ ಶೋಷಣೆ ನಡೆಯುತ್ತಿದೆ. ಜನರನ್ನು ಛಿದ್ರಗೊಳಿಸುವ ಕೆಲಸವನ್ನು ಈಗಿನ ಸರ್ಕಾರಗಳು ಮಾಡುತ್ತಿವೆ. ಖಾಸಗೀಕರದತ್ತ ಒಲವು ತೋರಿ ಒಂದೇ ವರ್ಗದ ಜನರಲ್ಲಿ ಸಂಪತ್ತು ಉಳಿಯುವಂತೆ ಮಾಡುತ್ತಿದೆ. ಆದ್ದರಿಂದ ಜನ ಜಾಗೃತರಾಗಬೇಕು’ ಎಂದರು.

ಆರ್‌ಎಸ್‌ಐ ಭಾಗಣ್ಣ ವಾಲೀಕಾರ ನೇತೃತ್ವದಲ್ಲಿ ಪೊಲೀಸ್‌, ಜಿ.ಡಿ.ಮುದ್ನೂರ ನೇತೃತ್ವದಲ್ಲಿ ಹೋಂ ಗಾರ್ಡ್ ಹಾಗೂ ಪೊಲೀಸ್ ಬ್ಯಾಂಡ್ ನಡೆಸಿದ ಪಥ ಸಂಚಲನ ಗಮನ ಸೆಳೆಯಿತು.

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್‌ ಪ್ರಕಾಶ ನಾಶಿ, ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರೀಕಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

‘ಜನರ ನಿರೀಕ್ಷೆ ಮೀರಿ ಕೆಲಸ ಮಾಡೋಣ’

ಹುಬ್ಬಳ್ಳಿ: ಅವಳಿ ನಗರಗಳ ಜನ ಮಹಾನಗರ ಪಾಲಿಕೆ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ನಿರೀಕ್ಷೆಗೂ ಮೀರಿ ಎಲ್ಲರೂ ಕೆಲಸ ಮಾಡೋಣ ಎಂದು ಪಾಲಿಕೆ ನೂತನ ಆಯುಕ್ತ ಡಾ. ಗೋಪಾಲಕೃಷ್ಣ ಹೇಳಿದರು.

ಪಾಲಿಕೆ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ ‘ಸಂವಿಧಾನದ ಮೂಲಕ ಮೂಲಭೂತ ಹಕ್ಕುಗಳನ್ನು ಪಡೆದುಕೊಂಡಿದ್ದೇವೆ. ಇದನ್ನು ನಿತ್ಯವೂ ಸ್ಮರಿಸಬೇಕು’ ಎಂದರು.

ಮೊದಲು ಈದ್ಗಾ ಮೈದಾನದಲ್ಲಿ ಗೋಪಾಲಕೃಷ್ಣ, ಮಿನಿವಿಧಾನ ಸೌಧದ ಕಚೇರಿಯಲ್ಲಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಧ್ವಜಾರೋಹಣ ನೆರವೇರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು