ಬುಧವಾರ, ಆಗಸ್ಟ್ 17, 2022
24 °C

₹5.98 ಲಕ್ಷ ವಂಚನೆಗೊಳಗಾದ ಉದ್ಯೋಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಎಸ್‌ಬಿಐ ಬ್ಯಾಂಕ್‌ ಖಾತೆಯ ದಾಖಲೆ ಪರಿಶೀಲನೆ ಮಾಡಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉದ್ಯೋಗಿ ಅಕ್ಬರಸಾಬ್‌ ಡಾಂಬರಮಟ್ಟೂರು ಅವರ ಮೊಬೈಲ್‌ಗೆ ಲಿಂಕ್‌ ಕಳುಹಿಸಿದ ವಂಚಕ, ಅವರ ಬ್ಯಾಂಕ್‌ ಖಾತೆಯಿಂದ ₹5.98 ಲಕ್ಷ ವರ್ಗಾಯಿಸಿಕೊಂಡಿದ್ದಾನೆ.

ಅಕ್ಬರಸಾಬ್‌ ಅವರ ಮೊಬೈಲ್‌ಗೆ ‘ಎಎಸ್‌ಬಿಐ ಬ್ಯಾಂಕ್‌ನಿಂದ ಪ್ರಮುಖ ಸಂದೇಶ. ಕ್ಲಿಕ್‌ ಮಾಡಿ’ ಎಂದು ವಂಚಕ ಲಿಂಕ್‌ ಕಳುಹಿಸಿದ್ದ. ಅದನ್ನು ಕ್ಲಿಕ್‌ ಮಾಡಿದಾಗ ದಾಖಲೆ ಪರಿಶೀಲನೆಗೆ ಮತ್ತೊಂದು ಲಿಂಕ್‌ ಕಳುಹಿಸಿ ಕ್ಲಿಕ್‌ ಮಾಡಲು ಹೇಳಿದ್ದಾನೆ. ಅದನ್ನು ಕ್ಲಿಕ್‌ ಮಾಡಿದ ತಕ್ಷಣ, ಎಸ್‌ಬಿಐ ಮುಂಬೈ ಕೇಂದ್ರ ಕಚೇರಿಯಿಂದ ವ್ಯವಸ್ಥಾಪಕ ಮಾತನಾಡುತ್ತಿರುವುದಾಗಿ ಹೇಳಿದ ವಂಚಕ, ಅವರ ಮೊಬೈಲ್‌ಗೆ ಬಂದ ಒಟಿಪಿ ಪಡೆದಿದ್ದಾನೆ. ನಂತರ ಆ ಒಟಿಪಿ ಕಾಲಮಿತಿ ಮುಗಿದಿದೆ, ಮತ್ತೊಂದು ಒಟಿಪಿ ತಿಳಿಸಿ ಎಂದಿದ್ದಾನೆ. ಹೀಗೆ ಎರಡು ಒಟಿಪಿ ಪಡೆದು ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹48 ಸಾವಿರ ವಂಚನೆ: ಗೂಗಲ್‌ ಸರ್ಚ್‌ನಲ್ಲಿ ದೊರೆತ ಫೋನ್‌ಪೇ ಸಹಾಯ ವಾಣಿ ನಂಬರ್‌ಗೆ ಕರೆ ಮಾಡಿದ ಗೋಪನಕೊಪ್ಪದ ಶಶಿಕಲಾ ವೈದ್ಯರಾಜ, ಆನ್‌ಲೈನ್‌ನಲ್ಲಿ ₹48 ಸಾವಿರ ಕಳೆದುಕೊಂಡಿದ್ದಾರೆ.

ಶಶಿಕಲಾ ಅವರು ತಮ್ಮ ಯೂನಿಯನ್‌ ಬ್ಯಾಂಕ್‌ ಫೋನ್‌ ಪೇ ಖಾತೆಯಿಂದ ಇಂಡಿಯನ್‌ ಬ್ಯಾಂಕ್‌ ಫೋನ್‌ ಪೇ ಖಾತೆಗೆ ₹10 ಸಾವಿರ ವರ್ಗಾಯಿಸಿದ್ದರು. ಹಣ ಕಡಿತವಾಗಿದ್ದೂ, ವರ್ಗಾವಣೆಯಾಗಿರಲಿಲ್ಲ. ಗೂಗಲ್‌ನಲ್ಲಿ ದೊರೆತ ಸಹಾಯವಾಣಿಗೆ ಕರೆ ಮಾಡಿದಾಗ, ಹಣ ಮರಳಿಸುವುದಾಗಿ ಹೇಳಿದ ವಂಚಕ, ಹಣ ವರ್ಗಾವಣೆಯಾದ ಐಡಿ ಹಾಗೂ ಬ್ಯಾಂಕ್‌ ಖಾತೆಗೆ ನೊಂದಣಿಯಾದ ಮೊಬೈಲ್‌ ನಂಬರ್‌ ಪಡೆದು ಲಿಂಕ್‌ ಕಳುಹಿಸಿದ್ದಾನೆ. ಅದನ್ನು ಕ್ಲಿಕ್‌ ಮಾಡಲು ಹೇಳಿ, ಯುಪಿಐ ಪಿನ್‌ ಹಾಕಿ ಸಬ್‌ಮೀಟ್‌ ಮಾಡಲು ಹೇಳಿ, ತನ್ನ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾನೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜು; ಒಂಬತ್ತು ಮಂದಿ ಬಂಧನ: ಕೇಶ್ವಾಪುರ ಠಾಣೆಯಲ್ಲಿ ಜೂಜಾಟದ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಒಟ್ಟು ಒಂಬತ್ತು ಮಂದಿ ಬಂಧಿಸಲಾಗಿದೆ.

ಪ್ರಕರಣವೊಂದರಲ್ಲಿ ಏಳು ಮಂದಿ ಆರೋಪಿ ಬಂಧಿಸಿ ₹13,120 ನಗದು, ಮತ್ತೊಂದು ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ, ₹11,300 ನಗದು ವಶಪಡಿಸಿಕೊಳ್ಳಲಾಗಿದೆ.

ಮದ್ಯ ಮಾರಾಟ; ಬಂಧನ: ತಾಲ್ಲೂಕಿನ ಅಂಚಟಗೇರಿ ಗ್ರಾಮದ ಶಾಲೆಯ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ ಚಂದ್ರಪ್ಪ ಕಲ್ಲನ್ನವರ ಬಂಧಿಸಿ, ₹1,272 ನಗದು ವಶಪಡಿಸಿಕೊಳ್ಳಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು