ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಿಮ್ಸ್‌ ಆವರಣದಲ್ಲಿ ಚಪ್ಪಲಿ ರಾಶಿ: ಪಾದರಕ್ಷೆಗಳ ವಿಲೇವಾರಿಯೇ ದೊಡ್ಡ ಸವಾಲು

Published 11 ಜುಲೈ 2024, 4:25 IST
Last Updated 11 ಜುಲೈ 2024, 4:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಿಮ್ಸ್‌ ಆಸ್ಪತ್ರೆ ಹಿಂಭಾಗದಲ್ಲಿರುವ ಕಿಮ್ಸ್‌ ಮೈದಾನದ ಏರಿ ಮೇಲೆ, ಶೌಚಾಲಯ ಮತ್ತು ಸ್ನಾನದ ಗೃಹದ ಎದುರು ಗುಡ್ಡೆ ಬಿದ್ದ ಚಪ್ಪಲಿಗಳ ರಾಶಿ ನೋಡುಗರಲ್ಲಿ ಅಚ್ಚರಿ ಮೂಡಿಸುತ್ತದೆ.

ಉತ್ತರ ಕರ್ನಾಟಕದ ಪ್ರಮುಖ ಮತ್ತು ದೊಡ್ಡ ಆಸ್ಪತ್ರೆಗಳಲ್ಲಿ ಕಿಮ್ಸ್‌ (ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ) ಕೂಡ ಒಂದು. ಇಲ್ಲಿಗೆ ನಿತ್ಯ ಬಂದು ಹೋಗುವ ರೋಗಿಗಳು ಮತ್ತು ಅವರ ಸಂಬಂಧಿಕರ ಸಂಖ್ಯೆ ಸಾವಿರಕ್ಕೂ ಹೆಚ್ಚು. ಚಪ್ಪಲಿ, ಬೂಟು ಧರಿಸಿಕೊಂಡು ಬಂದವರು, ಅವುಗಳ ಸಮೇತ ಮನೆಗೆ ಹೋಗುತ್ತಾರೆ ಎಂಬುದು ಖಾತ್ರಿಯಿಲ್ಲ. ಕೆಲವರು ಪಾದರಕ್ಷೆಗಳನ್ನು ಉದ್ದೇಶಪೂರ್ವಕವಾಗಿ ಬಿಟ್ಟು ಹೋದರೆ, ಇನ್ನೂ ಕೆಲವರು ಮರೆತು ಬರಿಗಾಲಲ್ಲಿ ಮನೆಗೆ ಮರಳುತ್ತಾರೆ!

‘ಕಿಮ್ಸ್‌ಗೆ ಬರುವ ರೋಗಿಗಳಲ್ಲಿ ಹೆಚ್ಚಿನವರು, ಪೀಡೆ ತೊಲಗಲಿಯೆಂದು ಚಪ್ಪಲಿ ಆಸ್ಪತ್ರೆಯಲ್ಲೇ ಬಿಟ್ಟು ಹೋಗುತ್ತಾರೆ. ಅದು ಅವರ ನಂಬಿಕೆ. ಕೆಲ ಸಂದರ್ಭದಲ್ಲಿ ರೋಗಿಗಳನ್ನು ಅಥವಾ ಗಾಯಾಳುಗಳನ್ನು ತುರ್ತಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತಂದಾಗ, ಚಪ್ಪಲಿಗಳನ್ನು ಎಲ್ಲಿ ಬಿಡಲಾಗಿದೆ ಎಂಬುದನ್ನು ಸಂಬಂಧಿಕರು ಮರೆತಿರುತ್ತಾರೆ. ಹೀಗಾಗಿ ಚಪ್ಪಲಿಗಳು ಎಲ್ಲಿ ಬೇಕೆಂದಲ್ಲಿ ಉಳಿಯುತ್ತವೆ. ಅವು ಎಲ್ಲವನ್ನೂ ಪೇರಿಸಿ, ಒಂದು ಕಡೆ ಇಟ್ಟಾಗ ಚಪ್ಪಲಿಗಳ ರಾಶಿಯೇ ನಿರ್ಮಾಣವಾಗುತ್ತದೆ’ ಎಂದು ಕಿಮ್ಸ್‌ ಕ್ಷೇತ್ರ ಅಧಿಕಾರಿ ಉದಯಕುಮಾರ ಆರ್‌.ಹೊನವಾಡಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು

‘ಕಿಮ್ಸ್ ಹಿಂಭಾಗದಲ್ಲಿ ರಾಶಿ ಬೀಳುವ ಚಪ್ಪಲಿಗಳಲ್ಲಿ ಗಟ್ಟಿಮುಟ್ಟಾದ ಸೋಲ್‌ (ಪಾದರಕ್ಷೆಯಲ್ಲಿನ ಗಟ್ಟಿವಸ್ತು) ಒಯ್ಯುವವರೂ ಇದ್ದಾರೆ. ಬಹುಶಃ ಅವುಗಳನ್ನು ಚಪ್ಪಲಿ ಸಿದ್ಧಪಡಿಸುವವರು ಬಳಸಬಹುದು. ಹಾಗಾದರೂ ಅವು ಬಳಕೆಯಾದರೆ, ಉಪಯುಕ್ತ. ಒಂದು ವೇಳೆ ಅದಕ್ಕೂ ಬಳಕೆಯಾಗದಿದ್ದರೆ, ಅದು ನಿಷ್ಪ್ರಯೋಜಕವಾಗುತ್ತದೆ’ ಎಂದು ರೋಗಿಯ ಸಂಬಂಧಿಕ ಎಂ.ಎಸ್.ರಮೇಶ ತಿಳಿಸಿದರು.

ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ ಹಿಂಭಾಗದಲ್ಲಿ ಚಪ್ಪಲಿಗಳ ರಾಶಿ         
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ ಹಿಂಭಾಗದಲ್ಲಿ ಚಪ್ಪಲಿಗಳ ರಾಶಿ          ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಚಪ್ಪಲಿಗಳನ್ನು ಒಂದೆಡೆ ರಾಶಿ ಹಾಕಿ ತಿಂಗಳಿಗೊಮ್ಮೆ ಎರಡು ಟ್ರ್ಯಾಕ್ಟರ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿಲೇವಾರಿ ಮಾಡುತ್ತೇವೆ. ಅದಕ್ಕಾಗಿ ಟೆಂಡರ್ ಕರೆಯುವ ಆಲೋಚನೆ ಇದೆ.
ಉದುಕುಮಾರ ಆರ್‌. ಹೊನವಾಡಕರ್‌ ಕ್ಷೇತ್ರ ಅಧಿಕಾರಿ ಕಿಮ್ಸ್‌ ಹುಬ್ಬಳ್ಳಿ
ಆಸ್ಪತ್ರೆಯಲ್ಲೇ ಪಾದರಕ್ಷೆಗಳನ್ನು ಬಿಟ್ಟು ಹೋಗುವ ಮನೋಭಾವ ಜನರು ಕೈಬಿಡಬೇಕು. ಅವುಗಳನ್ನು ಧರಿಸುವುದರು ಇಷ್ಟವಿಲ್ಲದಿದ್ದರೆ ಸೂಕ್ತ ರೀತಿ ವಿಲೇವಾರಿ ಮಾಡಬೇಕು.
–ಹರ್ಷವರ್ಧನ ಶೀಲವಂತ ಕಾರ್ಯಾಧ್ಯಕ್ಷಪ್ರಕೃತಿ ಸಂಶೋಧನಾ ಕೇಂದ್ರ ಧಾರವಾಡ

‘ವಿಲೇವಾರಿ ಸಮರ್ಪಕವಿರಲಿ’

’ಬಳಸಿ ಬಿಡುವ ಪಾದರಕ್ಷೆಗಳನ್ನು ಸೂಕ್ತಕ್ರಮದಲ್ಲಿ ವಿಲೇವಾರಿ ಮಾಡದಿದ್ದಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಪಾದರಕ್ಷೆ ಚರ್ಮದಿಂದ ಮಾಡಿದ್ದರೆ ಅವು ಮಣ್ಣಿನಲ್ಲಿ ಬೆರೆತು ಮಣ್ಣಾಗುತ್ತದೆ. ಆದರೆ ಹೆಚ್ಚಿನ ಪಾದರಕ್ಷೆಗಳನ್ನು ಪ್ಲಾಸ್ಟಿಕ್‌ ರಬ್ಬರ್‌ಗಳಿಂದ ಮಾಡುವುದರಿಂದ ಅವು ಮಣ್ಣಿನಲ್ಲಿ ಜೈವಿಕವಾಗಿ ಕರಗುವುದಿಲ್ಲ’ ಎಂದು ಧಾರವಾಡದ ಪ್ರಕೃತಿ ಸಂಶೋಧನಾ ಕೇಂದ್ರದ ಕಾರ್ಯಾಧ್ಯಕ್ಷ ಹರ್ಷವರ್ಧನ ಶೀಲವಂತ ತಿಳಿಸಿದರು.

‘ತ್ಯಾಜ್ಯವು ಸಮರ್ಪಕವಾಗಿ ವಿಲೇವಾರಿ ಆಗದೇ ಅಂತರ್ಜಲದಲ್ಲಿ ಬೆರೆತು ಜಲಮಾಲಿನ್ಯವಾಗುತ್ತದೆ. ಪಾದರಕ್ಷೆಗಳಿಗೆ ಬೆಂಕಿ ಹಚ್ಚಿದರೆ ಅದರಿಂದ ಹೊರಸೂಸುವ ವಿಷಕಾರಿ ಅನಿಲಗಳು ಗಾಳಿಯೊಂದಿಗೆ ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT