ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ: ಚೆಂದದ ಮತಗಟ್ಟೆಗಳು ಸಜ್ಜು

ಮತದಾರರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ
ಎಲ್.ಮಂಜುನಾಥ
Published 3 ಮೇ 2024, 5:24 IST
Last Updated 3 ಮೇ 2024, 5:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮೇ 7ರಂದು ನಡೆಯುವ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತ ಚಲಾಯಿಸಲು ಬರುವ ಮತದಾರರಿಗೆ ಸ್ವಾಗತಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಸಜ್ಜಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿ, ಶೇ100ರಷ್ಟು ಮತದಾನ ಆಗುವಂತೆ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.   

ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ, ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಏಳು ವಿಧಾನಸಭಾ ಕ್ಷೇತ್ರದಲ್ಲಿನ ಒಟ್ಟು 1,660 ಮತಗಟ್ಟೆ ಕೇಂದ್ರಗಳಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ 63 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿದೆ. 

ನವಲಗುಂದ, ಕುಂದಗೋಳ, ಧಾರವಾಡ, ಹುಬ್ಬಳ್ಳಿ–ಧಾರವಾಡ ಪೂರ್ವ, ಹುಬ್ಬಳ್ಳಿ– ಧಾರವಾಡ ಪಶ್ಚಿಮ, ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಹಾಗೂ ಕಲಘಟಗಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ಸಖಿ ಮತಗಟ್ಟೆ ಸೇರಿ ಒಟ್ಟು 35 ಸಖಿ ಮತಗಟ್ಟೆಗಳು ಇವೆ.

ಇವುಗಳ ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಅಂಗವಿಕಲರ ಮತಗಟ್ಟೆ, ಯುವ ಮತಗಟ್ಟೆ, ಥೀಮ್‌ ಮತಗಟ್ಟೆ ಹಾಗೂ ಸಾಂಪ್ರದಾಯಿಕ ಮತಗಟ್ಟೆ ಸೇರಿ 4 ವಿಶೇಷ ಮತಗಟ್ಟೆಗಳಂತೆ ಏಳು ವಿಧಾನಸಭಾ ಕ್ಷೇತ್ರದಲ್ಲಿ 28 ಮತಗಟ್ಟೆಗಳನ್ನೂ ತೆರೆಯಲಾಗಿದೆ. 

ಆಕರ್ಷಕ ಗೋಡೆ ಬರಹ: 

‘ಧಾರವಾಡ ವಿಶೇಷ ಮತಗಟ್ಟೆಯೊಂದರಲ್ಲಿ ‘ಧಾರವಾಡ ಪೇಡಾ’ ಚಿತ್ರ ಬಿಡಿಸಲಾಗಿದೆ. ಕಲಘಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಕೇಂದ್ರಕ್ಕೆ ಲಂಬಾಣಿ ಜನಾಂಗದ ಸಾಂಪ್ರದಾಯಿಕ ಉಡುಪು ಚಿತ್ರ ಬಿಡಿಸಲಾಗಿದೆ. ಹೀಗೆ ಆಯಾ ಸ್ಥಳೀಯ ಆಕರ್ಷಣೀಯ ಸ್ಥಳ, ವಸ್ತುಗಳ ಚಿತ್ರಗಳನ್ನು ರಚಿಸಿ, ಮತಗಟ್ಟೆಗಳ ಅಂದವನ್ನು ಹೆಚ್ಚಿಸಲಾಗಿದೆ’ ಎಂದು ಜಿಲ್ಲಾ ಸ್ವೀಪ್‌ ಸಮಿತಿಯ ಚುನಾವಣಾ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮತದಾನ ಜಾಗೃತಿ ಬರಹ:

ಪ್ರತಿ ಮತಗಟ್ಟೆಗಳಲ್ಲಿ ‘ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’, ‘ನನ್ನ ಮತ ನನ್ನ ಧ್ವನಿ’, ‘ನನ್ನ ಮತ ನನ್ನ ಶಕ್ತಿ’ ಹಾಗೂ ‘ಮತದಾನ ನಿಮ್ಮ ಹಕ್ಕು ಹಾಗೂ ನಿಮ್ಮ ಜವಾಬ್ದಾರಿ’ ಎಂಬ ಘೋಷಣೆ ಬರೆದು, ಮತದಾರರಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸಖಿ ಮತಗಟ್ಟೆಗಳನ್ನೂ ಗುಲಾಬಿ ಬಣ್ಣದಿಂದ ವಿವಿಧ ಚಿತ್ತಾರಗಳನ್ನು ಬಿಡಿಸಿ, ಆಕರ್ಷಕವಾಗಿ ಕಾಣುವಂತೆ ಮಾಡಲಾಗಿದೆ.

‘ಚುನಾವಣಾ ಆಯೋಗದ ಸೂಚನೆಯಂತೆ ಪ್ರತಿ ಮತಗಟ್ಟೆಗಳಲ್ಲೂ ಅಂಗವಿಕಲರಿಗೆ ಅನುಕೂಲಕ್ಕೆ ಗಾಲಿಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಕುಡಿಯುವ ನೀರು, ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಸೇರಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಯುವ ಮತಗಟ್ಟೆ
ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಯುವ ಮತಗಟ್ಟೆ
ಹುಬ್ಬಳ್ಳಿ ನಗರದಲ್ಲಿನ ಸೈಂಟ್‌ ಅಂಟೋನಿ ಶಾಲೆಯಲ್ಲಿ ಸ್ಥಾಪಿಸಿರುವ ಆಕರ್ಷಕ ಮತಗಟ್ಟೆ
ಹುಬ್ಬಳ್ಳಿ ನಗರದಲ್ಲಿನ ಸೈಂಟ್‌ ಅಂಟೋನಿ ಶಾಲೆಯಲ್ಲಿ ಸ್ಥಾಪಿಸಿರುವ ಆಕರ್ಷಕ ಮತಗಟ್ಟೆ
ದಿವ್ಯ ಪ್ರಭು
ದಿವ್ಯ ಪ್ರಭು

- ಯುವ ಮತದಾರರಿಗೆ ಆಮಂತ್ರಣ ಪತ್ರ...

‘ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 40 ಸಾವಿರ ಯುವ ಮತದಾರರಿದ್ದು ಅವರಿಗೆ ಮತದಾನದ ಮಹತ್ವ ತಿಳಿಸುವಂತಹ ‘ಆಮಂತ್ರಣ ಪತ್ರ’ವನ್ನು ವಿತರಿಸುವ ಮೂಲಕ ಕಡ್ಡಾಯವಾಗಿ ಮತದಾನ ಮಾಡುವಂತೆ ಅವರಲ್ಲಿ ಕೋರಲಾಗಿದೆ’ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ದಿವ್ಯ ಪ್ರಭು ತಿಳಿಸಿದರು. ‘ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನ ನಡೆದ ಕ್ಷೇತ್ರಗಳಲ್ಲಿಯೂ ಈ ಬಾರಿ ಹೆಚ್ಚು ಮತದಾನದ ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲಾ ಸ್ವೀಪ್‌ ಸಮಿತಿಯಿಂದ ಹಮ್ಮಿಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT