ಹುಬ್ಬಳ್ಳಿ: ‘ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಭ್ರಷ್ಟ ಆಡಳಿತದಿಂದ ಬೇಸತ್ತಿರುವ ಕರ್ನಾಟಕಕ್ಕೆ ಪರ್ಯಾಯ ವ್ಯವಸ್ಥೆ ಅನಿವಾರ್ಯವಾಗಿದೆ. ದೇಶ ಮತ್ತು ರಾಜ್ಯ ರಾಜಕಾರಣಕ್ಕೆ ಆಮ್ ಆದ್ಮಿ ಪಕ್ಷವು ಹೊಸ ಭರವಸೆಯಾಗಿದೆ’ ಎಂದು ಎಎಪಿ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರ ರಹಿತ ಅಭಿವೃದ್ಧಿ ರಾಜಕಾರಣ ನಮ್ಮ ಧ್ಯೇಯ. ಇದುವರೆಗೆ ದೇಶ ಮತ್ತು ರಾಜ್ಯವಾಳಿರುವ ಪಕ್ಷಗಳು, ಅಭಿವೃದ್ಧಿ ಬಿಟ್ಟು ಉಳಿದೆಲ್ಲಾ ರೀತಿಯ ರಾಜಕಾರಣ ಮಾಡುತ್ತಾ ಬಂದಿವೆ’ ಎಂದರು.
‘ಭ್ರಷ್ಟರು, ಕೊಲೆಗಡುಕರು, ಅತ್ಯಾಚಾರಿಗಳು, ದರೋಡೆಕೋರರು ಹಾಗೂ ಕುಟುಂಬದವರೇ ತುಂಬಿರುವ ಮೂರು ಪಕ್ಷಗಳು ತೊಲಗಬೇಕಿದೆ. ಬೂದಿ ಮುಚ್ಚಿದಂತಿರುವ ಸದ್ಯದ ಪರಿಸ್ಥಿತಿಯಲ್ಲಿ ಪಕ್ಷವು ಅನಿರೀಕ್ಷಿತ ಫಲಿತಾಂಶ ಪಡೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ಗಿಮಿಕ್: ‘ಒಳ ಮೀಸಲಾತಿ ಜಾರಿ, 2ಬಿ ಮೀಸಲಾತಿ ರದ್ದು, ಹೊಸ ಪ್ರವರ್ಗಗಳ ಸೃಷ್ಟಿ, ಲಿಂಗಾಯತರು ಮತ್ತು ಒಕ್ಕಲಿಗರ ಮೀಸಲಾತಿ ಹೆಚ್ಚಳ ಇವೆಲ್ಲವೂ ಬಿಜೆಪಿಯ ಚುನಾವಣೆಯ ಗಿಮಕ್ ಆಗಿವೆ. ಯಾವುದೇ ಮಾನದಂಡವಿಲ್ಲದ ಈ ಮೀಸಲಾತಿ ಕೋರ್ಟ್‌ನಲ್ಲಿ ನಿಲ್ಲುವುದಿಲ್ಲ. ಜಾರಿಯೂ ಆಗುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಜನಗಣತಿ ಬದಲು ಜಾತಿ ಗಣತಿ ಆಧಾರದ ಮೇಲೆ ಮೀಸಲಾತಿ ಕೊಡಬೇಕು. ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕಾಂತರಾಜ ಆಯೋಗ ಅಂತಹ ಗಣತಿ ಮಾಡಿತ್ತು. ರಾಜಕೀಯ ಕಾರಣಕ್ಕಾಗಿ ಸರ್ಕಾರ ವರದಿ ಸ್ವೀಕರಿಸಲಿಲ್ಲ. ನಾವು ಅಧಿಕಾರಕ್ಕೆ ಬಂದರೆ, ಆಯೋಗದ ವರದಿಯನ್ನು ಬಹಿರಂಗಪಡಿಸಿ ಸಾರ್ವಜನಿಕ ಚರ್ಚೆಗೊಳಪಡಿಸಿ ಸದನದಲ್ಲಿ ಮಂಡಿಸುತ್ತೇವೆ. ವರದಿ ಪ್ರಕಾರ, ಮೀಸಲಾತಿ ಜಾರಿಗೆ ತರುತ್ತೇವೆ’ ಎಂದರು.
ಭರ್ಜರಿ ಪ್ರಚಾರ: ಇದಕ್ಕೂ ಮುಂಚೆ ಪೂರ್ವ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪರವಾಗಿ ಹಳೇ ಹುಬ್ಬಳ್ಳಿ, ದುರ್ಗದ ಬೈಲ್, ದಾಜಿಬಾನ ಪೇಟೆ ಸೇರಿದಂತೆ ವಿವಿಧೆಡೆ ಮುಖ್ಯಮಂತ್ರಿ ಚಂದ್ರು ಹಾಗೂ ಇತರ ಮುಖಂಡರು ರೋಡ್ ಷೋ ನಡೆಸಿ ಪ್ರಚಾರ ನಡೆಸಿದರು.
ಪಕ್ಷದ ಮುಖಂಡರಾದ ರವಿಚಂದ್ರ ನೆರಬೆಂಚಿ, ಮಲ್ಲಿಕಾರ್ಜುನಯ್ಯ ಹಿರೇಮಠ, ಅನಂತಕುಮಾರ ಬುಗಡಿ, ರೋಹನ ಐನಾಪುರಿ, ಬಸವರಾಜ ತೇರದಾಳ, ವಿಕಾಸ ಸೊಪ್ಪಿನ ಹಾಗೂ ಇತರರು ಇದ್ದರು.
ಹಲವು ಸೌಲಭ್ಯಗಳ ಗ್ಯಾರಂಟಿ
‘ಶೂನ್ಯ ಭ್ರಷ್ಟಾಚಾರ, ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ, ಉಚಿತ ನೀರು, ವಿದ್ಯುತ್, ಶಿಕ್ಷಣ, ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ನಗರ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ, ಗುತ್ತಿಗೆ ಶಿಕ್ಷಕರಿಗೆ ನೌಕರಿ ಕಾಯಂ, ಆರೋಗ್ಯ ಖಾತ್ರಿ, ವರ್ಷಕ್ಕೆ 2 ಲಕ್ಷ ಉದ್ಯೋಗ ಸೃಷ್ಟಿ, ಯುವಜನರಿಗೆ ಕೆಲಸ ಸಿಗುವವರೆಗೆ ₹3 ಸಾವಿರ ಸಹಾಯಧನ, ಸ್ವಾಮಿನಾಥನ್ ವರದಿ ಅನ್ವಯ ಬೆಳೆಗಳಿಗೆ ಬೆಂಬಲ ಬೆಲೆ, ಕೃಷಿಗೆ ಉಚಿತ ವಿದ್ಯುತ್, ವೃದ್ಧಾಪ್ಯ– ವಿಧವಾ ವೇತನ ಹಾಗೂ ಅಂಗವಿಕಲರ ಮಾಸಾಶನ ಹೆಚ್ಚಳ. ಮನೆ ಬಾಗಿಲಿಗೆ ಪಡಿತರ ಹಾಗೂ ಆಡಳಿತದಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆಯ ಗ್ಯಾರಂಟಿಯನ್ನು ಎಎಪಿ ನೀಡಲಿದೆ‘ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
‘ನಾವು ಹೇಳುವುದನ್ನೇ ಮಾಡುತ್ತೇವೆ, ಮಾಡುವುದನ್ನೇ ಹೇಳುತ್ತೇವೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಮಾಡಿ ತೋರಿಸಿದ್ದೇವೆ. ಕಾಂಗ್ರೆಸ್‌ನವರು ನಮ್ಮನ್ನು ನಕಲು ಮಾಡಿ ಗ್ಯಾರಂಟಿ ಕಾರ್ಡ್ ಹಂಚುತ್ತಿದೆ. ಅದರಿಂದ ಏನೂ ಉಪಯೋಗವಾಗದು’ ಎಂದು ಪ್ರಶ್ನೆಯೊಂದಕ್ಕೆ ವ್ಯಂಗ್ಯವಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.