ಮಂಗಳವಾರ, ಮೇ 18, 2021
30 °C
ಸಮಾಜ ವಿಜ್ಞಾನ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರದಲ್ಲಿ ವಿಧಾನ ಪರಿಷತ್ ಸಭಾಪತಿ ಬೇಸರ

ಸರ್ಕಾರಿ ಶಾಲೆಗಳಲ್ಲಿ ‍ಪ್ರವೇಶ ಕುಂಠಿತ : ಬಸವರಾಜ ಹೊರಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹುಬ್ಬಳ್ಳಿ: ‘ಖಾಸಗಿ ಶಾಲೆಗಳಿಂದ ಸಾಕಷ್ಟು ಪೈಪೋಟಿ ಎದುರಾಗುತ್ತಿರುವ ಕಾರಣ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಬೇಕು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದರು.

ಆದರ್ಶನಗರದಲ್ಲಿರುವ ಡಾ. ಜಿ.ವಿ. ಜೋಶಿ ರೋಟರಿ ಶಾಲೆಯಲ್ಲಿ ಸೋಮವಾರ ನಡೆದ ಹುಬ್ಬಳ್ಳಿ ಶಹರ ಹಾಗೂ ಗ್ರಾಮೀಣ ಪ್ರೌಢಶಾಲೆಗಳ ಸಮಾಜ ವಿಜ್ಞಾನ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ವರ್ಷದಿಂದ ವರ್ಷಕ್ಕೆ ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ಶಿಕ್ಷಣ ಇಲಾಖೆ ಮತ್ತು ಹಣಕಾಸು ಇಲಾಖೆ ಜಂಟಿಯಾಗಿ ‘ಕೆಲಸ ಮಾಡಿದರಷ್ಟೇ ವೇತನ’ ನಿಯಮ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಿವೆ’ ಎಂದರು.

‘ಹೆಚ್ಚುವರಿ ಶಿಕ್ಷಕರು ಇರುವ ಶಾಲೆಗಳ ಬೋಧಕರನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ರಾಜ್ಯದ 28 ಸಾವಿರ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಪ್ರೌಢಶಾಲೆಗಳ ಮೇಲೂ ಇದರ ಪರಿಣಾಮವಾಗುತ್ತಿದೆ. ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಬೆಂಗಳೂರಿನಲ್ಲಿ ಶಿಕ್ಷಣ ಸಚಿವರ, ಅಧಿಕಾರಿಗಳ ಮತ್ತು ಶಿಕ್ಷಕರ ಸಭೆ ಕರೆಯಲಾಗಿದೆ’ ಎಂದೂ ತಿಳಿಸಿದರು.

‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ನನ್ನನ್ನು ಪ್ರಾಥಮಿಕ, ಪ್ರೌಢಶಾಲೆ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಚಿವರನ್ನಾಗಿ ಮಾಡಬೇಕೆನ್ನುವ ಆಸೆಯಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಿಂದ ಸಾಧ್ಯವಾಗಲಿಲ್ಲ. ಶಿಕ್ಷಕರ ಸಮಸ್ಯೆಗಳು ಏನೇ ಇದ್ದರೂ ಪರಿಹರಿಸಲಾಗುವುದು, ಶಿಕ್ಷಕರು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಬೇಕು’ ಎಂದು ಹೊರಟ್ಟಿ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್‌. ಎಸ್‌. ಮಳ್ಳೂರ ಮಾತನಾಡಿ ‘ಶಿಕ್ಷಕರು ಸದಾ ಕಾಲ ಕ್ರಿಯಾಶೀಲರಾಗಿರಬೇಕು, ಮಕ್ಕಳ ಬೆಳವಣಿಗೆಗೆ ಪೂರಕವಾಗುವ ಯೋಜನೆಗಳನ್ನು ರೂಪಿಸಬೇಕು’ ಎಂದರು.

ಎನ್.ಎಲ್‌.ಇ. ಸಂಸ್ಥೆ ಕಾರ್ಯದರ್ಶಿ ರಾಜಾ ದೇಸಾಯಿ, ಹುಬ್ಬಳ್ಳಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಂ. ಹುಡೇದಮನಿ, ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕುಂಬಾರ, ಮಂಟೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಫ್‌.ಸಿ. ಸೊರಟೂರು, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಬಿ.ಬಿ. ದುಬ್ಬನಮರಡಿ, ಸಮಾಜ ವಿಜ್ಞಾನ ಪರಿವಾರದ ಅಧ್ಯಕ್ಷ ಎಸ್‌.ಐ. ಅಂಕಲಿ, ಕಾರ್ಯದರ್ಶಿ ಎಸ್‌.ವಿ. ಪಟ್ಟಣಶೆಟ್ಟಿ ಮತ್ತು ರೋಟರಿ ಶಾಲೆಯ ಮುಖ್ಯ ಗುರು ನರೇಶ ಪಾಟೀಲ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು