ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ರಾಜಕಾಲುವೆ, ಚರಂಡಿ ಸ್ವಚ್ಛತೆಗೆ ಕ್ರಮ

ಮಳೆಹಾನಿ ಸಾಧ್ಯತೆ ಜನವಸತಿ ಪ್ರದೇಶಗಳಿಗೆ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಭೇಟಿ
Published 24 ಮೇ 2024, 16:13 IST
Last Updated 24 ಮೇ 2024, 16:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಳೆಗಾಲ ಆರಂಭವಾಗುತ್ತಿದ್ದು ಹುಬ್ಬಳ್ಳಿ– ಧಾರವಾಡ ನಗರಗಳಲ್ಲಿನ ತಗ್ಗು ಜನವಸತಿ ಪ್ರದೇಶಗಳು ಎಂದಿನಂತೆ ಮಳೆಹಾನಿಗೆ ಒಳಗಾಗುವ ಸಾಧ್ಯತೆ ಇದ್ದು, ಅಂತಹ ಸ್ಥಳಗಳಿಗೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಜನರ ಸಮಸ್ಯೆ ಆಲಿಸುವುದರ ಜೊತೆಗೆ, ಪೌರಕಾರ್ಮಿಕರ ಮೂಲಕ ರಾಜಕಾಲುವೆ, ಚರಂಡಿ ಸ್ವಚ್ಛತೆಗೆ ಕ್ರಮಕೈಗೊಂಡಿದ್ದಾರೆ. 

ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ನೇತೃತ್ವದಲ್ಲಿ ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳ ತಂಡವು ಶುಕ್ರವಾರ ಬೆಳಿಗ್ಗೆ ಹುಬ್ಬಳ್ಳಿ ನಗರದ ದಾಜೀಬಾನ್‌ ಪೇಟೆ, ತುಳಜಾ ಭವಾನಿ ದೇಗುಲದ ರಸ್ತೆ, ದುರ್ಗದ ಬೈಲು, ಇಂಡಿಪಂಪ್‌, ಗಣೇಶ ನಗರ, ಭಾರತ್‌ ಮಿಲ್‌ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಿತು. 

‘ಹಳೇ ಹುಬ್ಬಳ್ಳಿಯ ಗಣೇಶ ನಗರವು ಇಳಿಜಾರು ಪ್ರದೇಶದಲ್ಲಿದ್ದು, ಪ್ರತಿ ಮಳೆಗಾಲದ ವೇಳೆ ಮಳೆ ನೀರು ಹಾಗೂ ರಾಜಕಾಲುವೆಯ ಕೊಳಚೆ ನೀರು ಸರಗವಾಗಿ ಹರಿಯದೇ ನೇರವಾಗಿ ಇಲ್ಲಿನ ಜನವಸತಿ ಪ್ರದೇಶಕ್ಕೆ ನುಗ್ಗುತ್ತದೆ. ಇದರಿಂದಾಗಿ ನಿವಾಸಿಗಳ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ‘ ಎಂದು ಸ್ಥಳೀಯರು ಆಯುಕ್ತರ ಗಮನಕ್ಕೆ ತಂದರು. 

ಜನರ ಸಮಸ್ಯೆ ಆಲಿಸಿದ ಆಯುಕ್ತರು, ಕಿರಿಯ ಎಂಜಿನಿಯರ್‌ ಬೊಮ್ಮಲಿಂಗೇಶ್ವರ ಹಾಗೂ ಆರೋಗ್ಯ ನಿರೀಕ್ಷಕ ಶಿವಕುಮಾರ ಅವರಿಂದ ಗಣೇಶ ನಗರದ ಸಮಸ್ಯೆ ಕುರಿತು ವಿವರವಾದ ಮಾಹಿತಿ ಪಡೆದರು. 

‘ಮಳೆ ನೀರು ಗಣೇಶ ನಗರದೊಳಗೆ ಹರಿಯುವುದನ್ನು ತಡೆಯಲು ನಗರ ಪ್ರವೇಶದ ಭಾಗದಲ್ಲಿ ತಾತ್ಕಾಲಿಕವಾಗಿ ದಿಬ್ಬ ನಿರ್ಮಿಸಿ, ಮಳೆ ನೀರು ನೇರವಾಗಿ ಇಲ್ಲಿನ ರಾಜಕಾಲುವೆ, ಚರಂಡಿಗಳಲ್ಲಿ ಹರಿಯುವಂತೆ ಕ್ರಮಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಗಣೇಶ ನಗರ ಸೇರಿದಂತೆ ಹಳೇ ಹುಬ್ಬಳ್ಳಿಯಲ್ಲಿ ಮಳೆಹಾನಿಗೆ ಒಳಗಾಗುವ ಜನವಸತಿ ಪ್ರದೇಶಗಳನ್ನು ಗುರುತಿಸಿ, ಅಲ್ಲಿನ ರಾಜಕಾಲುವೆ, ಚರಂಡಿಗಳಲ್ಲಿನ ತ್ಯಾಜ್ಯ ವಿಲೇವಾರಿ ಮಾಡಿಸಬೇಕು. ಬೃಹತ್‌ ರಾಜಕಾಲುವೆಗಳ ಸ್ವಚ್ಛತೆಗಾಗಿ ಜೆಸಿಬಿ ಯಂತ್ರಗಳನ್ನು ಬಳಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 

‘ನಿತ್ಯ ನಿಮ್ಮ ವ್ಯಾ‍ಪ್ತಿಯ ವಾರ್ಡ್‌ಗಳಲ್ಲಿ ಸಂಚರಿಸಿ, ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಪ್ರತಿದಿನ ನನಗೆ ಮಾಹಿತಿ ನೀಡಬೇಕು’ ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರು, ಸ್ಥಳದಲ್ಲಿದ್ದ ವಿವಿಧ ವಾರ್ಡ್‌ಗಳ ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದರು. 

‘ಹುಬ್ಬಳ್ಳಿ– ಧಾರವಾಡ ಎರಡೂ ನಗರಗಳಲ್ಲಿನ ರಾಜಕಾಲುವೆ, ಒಳಚರಂಡಿ ಹಾಗೂ ವಾರ್ಡ್‌ಗಳಲ್ಲಿನ ಚರಂಡಿಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಪೌರಕಾರ್ಮಿಕರ ಮೂಲಕ ಅಗತ್ಯವಿರುವೆಡೆ ಜೆಸಿಬಿ ಯಂತ್ರಗಳ ಸಹಾಯದಿಂದ ರಾಜಕಾಲುವೆಯ ಹೂಳು ತೆಗೆಸಬೇಕು’ ಎಂದು ತ್ಯಾಜ್ಯ ವಿಲೇವಾರಿ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಮಲ್ಲಿಕಾರ್ಜುನ ಅವರಿಗೆ ಸೂಚಿಸಿದರು. 

ಹುಬ್ಬಳ್ಳಿಯ ಭೈರದೇವರಕೊಪ್ಪ ಬಳಿಯ ರಾಜಕಾಲುವೆಯಲ್ಲಿನ ಹೂಳು ತೆಗೆಯುತ್ತಿರುವುದು 
ಹುಬ್ಬಳ್ಳಿಯ ಭೈರದೇವರಕೊಪ್ಪ ಬಳಿಯ ರಾಜಕಾಲುವೆಯಲ್ಲಿನ ಹೂಳು ತೆಗೆಯುತ್ತಿರುವುದು 

5 ಜೆಸಿಬಿ ಯಂತ್ರಗಳ ಬಳಕೆ: ‘ಹುಬ್ಬಳ್ಳಿ–ಧಾರವಾಡ ನಗರಗಳಲ್ಲಿನ ರಾಜಕಾಲುವೆಗಳಲ್ಲಿನ ಹೂಳೆತ್ತಲು 5 ಜೆಸಿಬಿ ಯಂತ್ರಗಳನ್ನು ಬಳಸಲಾಗುತ್ತಿದ್ದು, ಜೊತೆಗೆ ರಾಜಕಾಲುವೆಗಳಲ್ಲಿ ಬೆಳೆದಿರುವ ಗಿಡ–ಗಂಟೆಗಳ ತೆರವು ಮಾಡಲಾಗುವುದು. ಈಗಾಗಲೇ ಧಾರವಾಡ ನಗರ ವಲಯ–1 ಹಾಗೂ 2 ಮತ್ತು ಹುಬ್ಬಳ್ಳಿ ನಗರ ವಲಯ 4 ಹಾಗೂ 5ರಲ್ಲಿ ರಾಜಕಾಲುವೆ, ಚರಂಡಿಗಳ ಸ್ವಚ್ಛತೆಗೆ ಕ್ರಮಕೈಗೊಳ್ಳಲಾಗಿದೆ‘ ಎಂದು ಎಂಜಿನಿಯರ್‌ ಮಲ್ಲಿಕಾರ್ಜುನ ಮಾಹಿತಿ ನೀಡಿದರು. 

ಪಾಲಿಕೆಯ ಪರಿಸರ ವಿಭಾಗದ ಎಂಜಿನಿಯರ್‌ ಯುವರಾಜ್, ಕಿರಿಯ ಎಂಜಿನಿಯರ್‌ ಬೊಮ್ಮಲಿಂಗೇಶ್ವರ, ಆರೋಗ್ಯ ನಿರೀಕ್ಷಕ ಶಿವಕುಮಾರ, ಸಂಜಯ್, ರಾಘವೇಂದ್ರ ಉಳ್ಳಿಕಾಶಿ, ಮಾರುತಿ, ಯಲ್ಲಪ್ಪ ಯರಗುಂಡಿ ಹಾಗೂ ಸುಭಾಷ್‌ ಸೇರಿದಂತೆ ಪಾಲಿಕೆಯ ವಿವಿಧ ವಿವಿಧ ವಿಭಾಗಗಳ ಅಧಿಕಾರಿಗಳು ಇದ್ದರು. 

ಹಳೇ ಹುಬ್ಬಳ್ಳಿಯ ಗಣೇಶನಗರಕ್ಕೆ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸಿದರು
ಹಳೇ ಹುಬ್ಬಳ್ಳಿಯ ಗಣೇಶನಗರಕ್ಕೆ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸಿದರು
ಮಳೆಹಾನಿಗೆ ಒಳಗಾಗುವ ಹುಬ್ಬಳ್ಳಿಯ ಜನವಸತಿ ವಾಣಿಜ್ಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು ಈಗಾಗಲೇ ರಾಜಕಾಲುವೆ ಚರಂಡಿಗಳ ಸ್ವಚ್ಛತೆಗೆ ಕ್ರಮಕೈಗೊಳ್ಳಲಾಗಿದೆ.
ಈಶ್ವರ ಉಳ್ಳಾಗಡ್ಡಿ ಪಾಲಿಕೆ ಆಯುಕ್ತರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT