ಧಾರವಾಡ: ‘ಪ್ರತಿ ವಾರ್ಡ್‌ಗಳಲ್ಲಿನ ಕುಂದುಕೊರತೆಗಳನ್ನು ಪಟ್ಟಿ ಮಾಡಿ, ಪರಿಹರಿಸಲು ಕ್ರಮವಹಿಸಲಾಗುವುದು’ ಎಂದು ಹು–ಧಾ ಮಹಾನಗರಪಾಲಿಕೆ ಮೇಯರ್ ರಾಮಪ್ಪ ಬಡಿಗೇರ ತಿಳಿಸಿದರು.
ಪಾಲಿಕೆಯ ಅಮೃತ ಮಹೋತ್ಸವ ಸಭಾಭವನದಲ್ಲಿ ಮಂಗಳವಾರ ನಡೆದ ಕುಂದುಕೊರತೆ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ‘ವಾರ್ಡ್‌ನಲ್ಲಿನ ಸಮಸ್ಯೆಗಳನ್ನು ಸದಸ್ಯರು ಗಮನಕ್ಕೆ ತಂದಿದ್ದಾರೆ. ಅವುಗಳನ್ನು ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸುವರು. ರಸ್ತೆ ಅಗೆದು ಪೈಪ್ ಅಳವಡಿಸಿದ ನಂತರ, ಆ ಜಾಗದಲ್ಲಿ ಮಣ್ಣು ತುಂಬಿ ಸಮತಟ್ಟು ಮಾಡಬೇಕು. ಕೆಲ ದಿನಗಳ ನಂತರ ಡಾಂಬರು ಹಾಕಬೇಕು’ ಎಂದರು.
‘ಎಲ್ ಆ್ಯಂಡ್ ಟಿ ಕಂಪನಿಯವರು ಒಂದು ಸರ್ವೆ ನಂಬರ್‌ಗೆ ಒಂದೇ ನಳದ ಸಂಪರ್ಕ ಕಲ್ಪಿಸುತ್ತಿರುವುದು ಹಾಗೂ ಹೊಸ ಮೀಟರ್ ಅಳವಡಿಕೆಗೆ ಶುಲ್ಕ ವಸೂಲಿ ಮಾಡುತ್ತಿರುವುದು ಸಮಸ್ಯೆಗೆ ಎಡೆಮಾಡಿದೆ’ ಎಂದು ಸದಸ್ಯ ಮಯೂರ ಮೊರೆ ಹೇಳಿದರು.
‘2020–2021ನೇ ಸಾಲಿನ ನಂತರ ನಿರ್ಮಾಣವಾಗಿರುವ ಮನೆಗಳಿಗೆ ನೀರಿನ ಪೈಪ್ ಅಳವಡಿಸಲು ಎಲ್ ಆ್ಯಂಡ್ ಟಿ ಕಂಪನಿಯವರು ತಕರಾರು ಮಾಡುತ್ತಾರೆ’ ಎಂದು ಸದಸ್ಯೆ ಕವಿತಾ ಕಬ್ಬೇರ ತಿಳಿಸಿದರು.
‘ಕೆಲವು ಮಾರ್ಗಸೂಚಿಗಳಿಂದಾಗಿ ಸಮಸ್ಯೆಯಾಗಿದೆ. ಆದೇಶ ಮಾರ್ಪಾಡು ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಿ, ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಬೇಕು. ಈ ನಿಟ್ಟಿನಲ್ಲಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸಬೇಕು’ ಎಂದು ಪಾಲಿಕೆ ಅಧಿಕಾರಿ ತಿಮ್ಮಪ್ಪ ಸಭೆಗೆ ತಿಳಿಸಿದರು.
‘ಚೈತನ್ಯನಗರದ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಹಲವು ಬಾರಿ ತಿಳಿಸಿದರೂ, ಕ್ರಮ ವಹಿಸಿಲ್ಲ. ಮಹಾಂತನಗರದಲ್ಲಿ ಪೈಪ್‌ನಲ್ಲಿ ನೀರು ಸೋರಿಕೆಯಾಗುತ್ತಿರುವುದನ್ನು ಸಂಬಂಧಪಟ್ಟವರ ಗಮನಕ್ಕೆ ತಂದರೂ ದುರಸ್ತಿ ಮಾಡಿಸಿಲ್ಲ’ ಎಂದು ಸದಸ್ಯರೊಬ್ಬರು ದೂರಿದರು.
ಉಪಮೇಯರ್ ದುರ್ಗಮ್ಮ ಬಿಜವಾಡ, ವಿರೋಧ ಪಕ್ಷದ ನಾಯಕ ರಾಜಶೇಖರ ಕಮತಿ ಪಾಲ್ಗೊಂಡಿದ್ದರು.
‘ಅವಳಿ ನಗರದಲ್ಲಿ 300 ಕಿ.ಮೀ.ಯಲ್ಲಿ ಅಳವಡಿಸಿರುವ ಪೈಪ್‌ಗಳ ಗುಣಮಟ್ಟ ಕಳಪೆಯಾಗಿರುವ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ’ ಎಂದು ಸ್ಮೆಕ್ ಸಂಸ್ಥೆಯ ನೌಕರ ಹೇಮಂತಕುಮಾರ ಸಭೆಗೆ ತಿಳಿಸಿದರು. ‘ಕಲಬುರಗಿ ಮತ್ತು ಬೆಳಗಾವಿಯಲ್ಲಿ ಪೈಪ್ ಸಮಸ್ಯೆಯಾಗಿರುವ ಬಗ್ಗೆ ತಿಳಿಸಲಾಗಿತ್ತು. ಕಾಮಗಾರಿ ಸ್ಥಗಿತಗೊಳಿಸಲು ಸಲಹೆ ನೀಡಲಾಗಿತ್ತು’ ಎಂದರು. ಕಳಪೆ ಪೈಪ್ ಅಳವಡಿಸಿರುವುದಕ್ಕೆ ಜವಾಬ್ಧಾರಿ ಯಾರು ಎಂದು ಹಲವು ಸದಸ್ಯರು ಪ್ರಶ್ನಿಸಿದರು.
‘ಕಸ ಸಂಗ್ರಹ ಸ್ವಚ್ಚತೆಗೆ ನಿಗಾ ವಹಿಸಿಲ್ಲ. ಅಗತ್ಯ ಇರುವಷ್ಟು ಟಿಪ್ಪರ್ ವಾಹನ ಕಾರ್ಮಿಕರನ್ನು ಹಲವು ವಾರ್ಡ್‌ಗಳಿಗೆ ಒದಗಿಸಿಲ್ಲ. ಕೆಲವು ವಾರ್ಡ್‌ಗಳಿಗೆ ಮಹಿಳಾ ಪೌರಕಾರ್ಮಿಕರನ್ನು ಮಾತ್ರ ನೀಡಲಾಗಿದೆ. ಎಲ್ಲ ವಾರ್ಡ್‌ಗಳಿಗೆ ಸಮರ್ಪಕವಾಗಿ ಟಿಪ್ಪರ್ ಹಾಗೂ ಕಾರ್ಮಿಕರನ್ನು ಹಂಚಿಕೆ ಮಾಡಬೇಕು’ ಎಂದು ಹಲವು ಸದಸ್ಯರು ಒತ್ತಾಯಿಸಿದರು. ‘ಕೆಲ ಮನೆಯವರಿಗೆ ನೀರಿನ ಬಿಲ್ ಹೆಚ್ಚು ಬಂದಿದೆ. ಈ ಬಗ್ಗೆ ಪರಿಶೀಲಿಸಬೇಕು. ಪೌರಕಾರ್ಮಿಕರ ಹಾಜರಿಗೆ ವಾರ್ಡ್‌ಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಮಾಡಬೇಕು. ಕೆಲಸಕ್ಕೆ ಹಾಜರಾದಾಗ ಮತ್ತು ಎಂಟು ಗಂಟೆ ಕಾರ್ಯನಿರ್ವಹಣೆ ನಂತರ ಬಯೋಮೆಟ್ರಿಕ್‌ನಲ್ಲಿ ಹಾಜರಿ ನೀಡುವ ವ್ಯವಸ್ಥೆ ಅನುಷ್ಠಾನಗೊಳಿಸಬೇಕು’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.