ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ತಡೆದು ಪೊಲೀಸರ ವಿರುದ್ಧ ವಕೀಲರ ಧರಣಿ

Last Updated 9 ಮಾರ್ಚ್ 2020, 10:49 IST
ಅಕ್ಷರ ಗಾತ್ರ

ಧಾರವಾಡ: ಸರ್ಕಾರಿ ವಕೀಲರೊಂದಿಗೆ ಗ್ರಾಮೀಣ ಠಾಣೆ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ರಸ್ತೆ ತಡೆ ನಡೆಸಿದ ಧಾರವಾಡ ವಕೀಲರ ಸಂಘದ ಸದಸ್ಯರು, ತಪ್ಪೆಸಗಿದವರ ಅಮಾನತಿಗೆ ಆಗ್ರಹಿಸಿದರು.

ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರು ಅನಗತ್ಯವಾಗಿ ಪ್ರವೇಶಿಸುತ್ತಿದ್ದು, ಇದನ್ನು ಪ್ರಶ್ನಿಸಲು ಗ್ರಾಮೀಣ ಠಾಣೆಗೆ ಭಾನುವಾರ ಹೋಗಿದ್ದ ಸುನೀಲ ಗುಡಿ ಅವರು ಕರ್ತವ್ಯದ ಮೇಲೆ ಹೋಗಿದ್ದಾಗ ಪೊಲೀಸರು ಗೌರವ ನೀಡದೆ ಅನುಚಿತವಾಗಿ ವರ್ತಿಸಿದ್ದಾರೆ. ಇದರಿಂದ ನ್ಯಾಯಾಂಗದ ಘನತೆಗೆ ದಕ್ಕೆ ಉಂಟು ಮಾಡಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಒಂದಲ್ಲಾ ಒಂದು ಕಾರಣದಿಂದ ಸಾರ್ವಜನಿಕರಲ್ಲಿ ಅಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವುದಕ್ಕೆ ಇವರೇ ಕಾರಣ ಎಂದು ವಕೀಲರು ಆರೋಪಿಸಿದರು.

‘ಕೆಲಸದ ಮೇಲೆ ಠಾಣೆಗೆ ಹೋಗಿದ್ದ ಸುನೀಲ ಗುಡಿ ಅವರ ಅಂಗಿ ಹಿಡಿದು ಪೊಲೀಸರು ಎಳೆದಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹೀಗಾಗಿ ಇಂಥ ಕೃತ್ಯ ಎಸಗಿದವರ ವಿರುದ್ಧ ಅಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕು. ಅವರನ್ನು ಅಮಾನತುಗೊಳಿಸಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ವಕೀಲರು, ನಂತರ ಇಲ್ಲಿನ ಕೋರ್ಟ್ ವೃತ್ತದಲ್ಲಿರುವ ಸಿವಿಲ್ ನ್ಯಾಯಾಲಯದ ಮುಂಭಾಗದ ರಸ್ತೆಯನ್ನು ತಡೆದು ಪ್ರತಿಭಟಿಸಿದರು. ಇದರಿಂದಾಗಿ ಕೆಲ ಕಾಲ ಸಂಚಾರ ಅಸ್ತವ್ಯಸ್ಥಗೊಂಡಿತು. ಬಿಆರ್‌ಟಿಎಸ್ ಬಸ್ಸುಗಳು ಸಂಚರಿಸಲಾಗದೆ ಸಾಲುಗಟ್ಟಿ ನಿಂತವು. ಕೆಲ ಬಸ್ಸುಗಳು ಜ್ಯುಬಿಲಿ ವೃತ್ತದಿಂದ ಲೈನ್‌ಬಜಾರ್ ಆಂಜನೇಯ ದೇವಸ್ಥಾನದ ಮುಂಭಾಗದಿಂದ ಹಾದು ಎನ್‌ಟಿಟಿಎಫ್‌ ಮೂಲಕ ಸಂಚರಿಸಿದವು.

ಧರಣಿಯಲ್ಲಿ ಸುನೀಲ್ ಗುಡಿ ಅವರೊಂದಿಗೆ ಬಿ.ಎಸ್.ಗೋಡ್ಸೆ, ಎನ್.ಆರ್.ಮಟ್ಟಿ, ಕೆ.ಎಚ್.ಪಾಟೀಲ, ಎನ್.ಬಿ.ಖೈರನ್ನವರ, ಆಶೀಷ ಮಗುದಮ್, ಎಂ.ಎನ್.ತಾರೀಹಾಳ, ಸಂತೋಷ ಎಸ್.ಭಾವಿಹಾಳ, ಕೃಷ್ಣಾಜಿ ಎಸ್.ಪವಾರ್, ಪ್ರಕಾಶ ಬಿ.ಭಾವಿಕಟ್ಟಿ, ರಾಹುಲ್ ಆರ್.ಆರ್ವಡೆ, ಕಲ್ಮೇಶ ಟಿ. ನಿಂಗಣ್ಣವರ, ರೂಪಾ ಕೆಂಗಾನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT