ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಆಕ್ರೋಶ; ಸಾರ್ವಜನಿಕರಿಗೆ ಬಿಸಿ

Last Updated 31 ಅಕ್ಟೋಬರ್ 2022, 16:31 IST
ಅಕ್ಷರ ಗಾತ್ರ

ಧಾರವಾಡ: ಮಹಿಳಾ ವಕೀಲರೊಬ್ಬರ ಜತೆ ಅನುಚಿತವಾಗಿ ವರ್ತಿಸಿದ ಪೊಲೀಸ್ ಅಧಿಕಾರಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ವಕೀಲರ ಸಂಘದ ಸದಸ್ಯರು ಜ್ಯುಬಿಲಿ ವೃತ್ತದಲ್ಲಿ ಸೋಮವಾರ ಏಕಾಏಕಿ ಪ್ರತಿಭಟನೆ ನಡೆಸಿದ್ದರಿಂದ ಸಾರ್ವಜನಿಕರು ತೀವ್ರವಾಗಿ ಪರದಾಡುವಂತಾಯಿತು.

ಸುಮಾರು ಮೂರುಗಂಟೆಗೂ ಹೆಚ್ಚು ಕಾಲ ನಡೆದ ಪ್ರತಿಭಟನೆಯಿಂದಾಗಿ ನಗರದ ಸಂಚಾರ ಅಸ್ತವ್ಯಸ್ತಗೊಂಡಿತು. ತುರ್ತು ಕೆಲಸಕ್ಕೆ ಹೊರಟವರನ್ನು ಪ್ರತಿಭಟನಾಕಾರರು ತಡೆದರು. ಇದನ್ನು ಪ್ರಶ್ನಿಸಿದ ಕೆಲವರನ್ನು ಹಿಗ್ಗಾಮುಗ್ಗಾ ಥಳಿಸಿದರು. ಇನ್ನೂ ಕೆಲವರಿಗೆ ಬೆದರಿಕೆ ಹಾಕಿದರು ಎಂದು ಸಾರ್ವಜನಿಕರು ತೀವ್ರ ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕರನ್ನು ಥಳಿಸುವ ಮತ್ತು ಬೆದರಿಕೆ ಹಾಕುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಘಟನೆ ಹಿನ್ನೆಲೆ: ಅ.28 ರಂದು ಪ್ರಕರಣವೊಂದರ ಮಾಹಿತಿಗಾಗಿ ವಕೀಲೆಯೊಬ್ಬರು ಗ್ರಾಮೀಣ ಠಾಣೆಯ ಸಿಪಿಐ ಕಚೇರಿಗೆ ತೆರಳಿದ್ದರು. ಆಗ ಅಲ್ಲಿ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ಸಿಪಿಐ ಮಂಜುನಾಥ ಕುಸುಗಲ್ ಅವರು ಅನುಚಿತವಾಗಿ ವರ್ತಿಸಿ, ದೌರ್ಜನ್ಯ ಎಸಗಿದ್ದಾರೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿ, ಕೂಡಲೇ ಅವರನ್ನು ಬಂಧಿಸಬೇಕು ಎಂದು ವಕೀಲರು ಆಗ್ರಹಿಸಿದರು.

ಈಗಾಗಲೇ ಉಪನಗರ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಪ್ರತಿಭಟನಾನಿರತರು ವಕೀಲರ ಸಂಘದ ಸದಸ್ಯರು ಪಟ್ಟುಹಿಡಿದರು. ಸ್ಥಳಕ್ಕೆ ಬಂದ ಡಿಸಿಪಿ ಸಾಹಿಲ್ ಬಾಗ್ಲಾ, ತಪ್ಪಿತಸ್ಥ ಅಧಿಕಾರಿ ವಿರುದ್ಧ ಕಾನೂನು ರೀತಿ ಕ್ರಮ ಕೈಕೊಳ್ಳುವುದಾಗಿ ವಕೀಲರ ಮನವೊಲಿಸಲು ಯತ್ನಿಸಿದರು. ಆದರೆ, ಪಟ್ಟು ಸಡಿಲಿಸದ ವಕೀಲರು, ಕ್ರಮ ಜರುಗಿಸಿದ ನಂತರವೇ ಪ್ರತಿಭಟನೆ ಹಿಂಪಡೆಯುವುದಾಗಿ ಪಟ್ಟುಹಿಡಿದರು.

ನಗರದ ಹೃದಯ ಭಾಗದಲ್ಲಿ ವಕೀಲರು ಏಕಾಏಕಿ ರಸ್ತೆ ತಡೆ ನಡೆಸಿದ್ದರಿಂದ ಪೊಲೀಸರು ಮಾತ್ರವಲ್ಲದೇ ಸಾರ್ವಜನಿಕರು ಹೈರಾಣಾದರು. ಮುಖ್ಯ ರಸ್ತೆಗಳು ಬಂದ ಆಗಿದ್ದರಿಂದ ಹುಬ್ಬಳ್ಳಿ, ಆಳ್ನಾವರ, ಹಳಿಯಾಳ, ಬೆಳಗಾವಿ ಸೇರಿದಂತೆ ಗ್ರಾಮಾಂತರ ಪ್ರದೇಶಕ್ಕೆ ಹೊರಟಿದ್ದ ಪ್ರಯಾಣಿಕರು ಪರದಾಡಿದರು. ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಇದರಿಂದ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಅಲ್ಲಿಂದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ ವಕೀಲರು, ಸಿಪಿಐ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಪರಿಶೀಲಿಸಿ ಕ್ರಮ ವಹಿಸುವುದಾಗಿ ಎಸ್‌ಪಿ ಲೋಕೇಶ ಬಿ. ಜಗಲಾಸರ್ ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಪೊಲೀಸ್ ಪಾಟೀಲ ಹಾಗೂ ಇತರರು ಪಾಲ್ಗೊಂಡರು.

***

ಠಾಣೆಯಲ್ಲಿ ಅಂದು ನಡೆದ ಪ್ರತಿ ಕ್ಷಣದ ಸಿಸಿಟಿವಿ ದೃಶ್ಯಾವಳಿಯನ್ನು ವಕೀಲರ ಸಂಘದ ಪದಾಧಿಕಾರಿಗಳಿಗೆ ತೋರಿಸಲಾಗಿದೆ. ಆರೋಪ ಮಾಡಿರುವ ಯಾವುದೇ ಸಂಗತಿ ನಡೆದಿಲ್ಲ.
– ಲೋಕೇಶ ಬಿ. ಜಗಲಾಸರ್, ಪೊಲೀಸ್ ವರಿಷ್ಠಾಧಿಕಾರಿ, ಧಾರವಾಡ

***

ಪ್ರತಿಭಟನೆ ಏಕಾಏಕಿ ನಡೆದಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದ್ದರಿಂದ ಅದನ್ನು ಬಗೆಹರಿಸಲು ಪೊಲೀಸರು ಸಾಕಷ್ಟು ಪ್ರಯತ್ನಿಸಿದರು.ಪ್ರತಿಭಟನೆ ಸಂದರ್ಭದಲ್ಲಿ ಹಲ್ಲೆಗೆ ಒಳಗಾದವರು ದೂರು ನೀಡಿದರೆ ಕ್ರಮ ವಹಿಸಲಾಗುವುದು.
ಸಾಹಿಲ್ ಬಾಗ್ಲಾ, ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ. ಕಮಿಷನರೇಟ್

***

ಸಿಪಿಐ ಅಮಾನತಿಗೆ ಒತ್ತಾಯಿಸಲಾಗಿದೆ. ಪ್ರತಿಭಟನೆ ಸಂದರ್ಭದಲ್ಲಿ ಸಾರ್ವಜನಿಕರು ವಕೀಲರ ವಿರುದ್ಧ ಹರಿಹಾಯ್ದಿದ್ದರಿಂದ, ವಕೀಲರು ಕುಪಿತರಾಗಿ ಘಟನೆ ನಡೆದಿದೆಯಷ್ಟೇ.

ಸಿ.ಎಸ್.ಪೊಲೀಸ್ ಪಾಟೀಲ, ಅಧ್ಯಕ್ಷ, ಧಾರವಾಡ ವಕೀಲರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT