ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಅಮೃತ ಸರೋವರ ಯೋಜನೆ: ಗಡುವು ಮುಗಿದರೂ ಸಾಧನೆ ಅಪೂರ್ಣ

Published 7 ಮೇ 2024, 4:29 IST
Last Updated 7 ಮೇ 2024, 4:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 2022ರಂದು ಜಾರಿಗೊಳಿಸಿದ ಅಮೃತ ಸರೋವರ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ 99 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. 2023ರ ಆಗಸ್ಟ್‌ 15ಕ್ಕೆ ಗಡುವು ನೀಡಲಾಗಿದ್ದರೂ ನಿಗದಿಪಡಿಸಿದ್ದ ಗುರಿ ಪೂರ್ಣಗೊಂಡಿಲ್ಲ.

ಪ್ರತಿ ಜಿಲ್ಲೆಯಲ್ಲಿ 150 ಕೆರೆಗಳ ಅಭಿವೃದ್ಧಿ ಗುರಿ ಇತ್ತು. ಧಾರವಾಡ ಜಿಲ್ಲೆಯಲ್ಲಿ 130 ಕೆರೆಗಳ ಅಭಿವೃದ್ಧಿ ಗುರಿ ಇಟ್ಟುಕೊಳ್ಳಲಾಗಿತ್ತು. ಹಲವು ಕಾರಣಗಳಿಂದ ಇನ್ನೂ 31 ಕೆರೆಗಳ ಅಭಿವೃದ್ಧಿ ಬಾಕಿ ಇದೆ. ರಾಜ್ಯ ಸರ್ಕಾರದ ಸೂಚನೆಯಂತೆ ಇನ್ನೊಂದು ತಿಂಗಳಲ್ಲಿ ಬಾಕಿ ಉಳಿದ ಕೆರೆಗಳ ಅಭಿವೃದ್ಧಿ ಮಾಡಬೇಕಿದೆ. 

‘ಸಣ್ಣ ನೀರಾವರಿ ಇಲಾಖೆ ಹಾಗೂ ಪಂಚಾಯತ್‌ ರಾಜ್ ಇಲಾಖೆ ಅಭಿವೃದ್ಧಿಪಡಿಸಿದ್ದ, ಒತ್ತುವರಿಯಾಗಿದ್ದ ಕೆರೆಗಳ ಹೆಸರು ಸಹ ಪಟ್ಟಿಯಲ್ಲಿ ಇದ್ದಿದ್ದರಿಂದ, ಅವುಗಳನ್ನು ರದ್ದು ಮಾಡಬೇಕಾಯಿತು. ಒಟ್ಟು 130 ಕೆರೆಗಳ ಅಭಿವೃದ್ಧಿ ಗುರಿ ಇಟ್ಟುಕೊಂಡು 99 ಕೆರೆಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಕೆಲವೆಡೆ ನೀರಿನ ಸಮಸ್ಯೆಯಾಯಿತು. ಸರ್ಕಾರದಿಂದ ಅನುಮೋದನೆ ಸಿಗುವುದು ತಡವಾಯಿತು.  ನರೇಗಾ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ವಿಳಂಬವಾಗಿದ್ದರಿಂದ 31 ಕೆರೆಗಳ ಅಭಿವೃದ್ಧಿ ನಿಧಾನವಾಯಿತು. ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ’ ಎಂದು ಹೇಳಿದರು.

‘ಕೆರೆಗಳಲ್ಲಿ ಸಂಗ್ರಹವಾದ ಹೂಳೆತ್ತುವುದು, ಸುತ್ತ ಕಲ್ಲು ಅಳವಡಿಸುವುದು, ಕಾಲುವೆ ಸ್ವಚ್ಛಗೊಳಿಸುವುದು, ಕೆರೆಯ ಸುತ್ತ ದಾರಿ ನಿರ್ಮಿಸಿ, ಸಸಿ ನೆಡುವ ಕೆಲಸಗಳನ್ನು ಮಾಡಲಾಗಿದೆ. ಕಾಮಗಾರಿಯಿಂದ ಬೇಸಿಗೆಯಲ್ಲಿ ಗ್ರಾಮಸ್ಥರಿಗೆ ತಮ್ಮ ಊರಿನಲ್ಲೇ ಕೆಲಸ ಸಿಕ್ಕಿತು. ಕೆರೆಗಳಲ್ಲಿ ಹೆಚ್ಚು ನೀರು ಸಂಗ್ರಹವಾಗಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕಳೆದ ವರ್ಷ ಉತ್ತಮವಾಗಿ ಮಳೆ ಸುರಿಯಲಿಲ್ಲ. ಈ ವರ್ಷ ಉತ್ತಮವಾಗಿ ಮಳೆಯಾದರೆ ಅಭಿವೃದ್ಧಿಗೊಂಡ ಕೆರೆಗಳಿಂದ ಜನರಿಗೆ ಅನುಕೂಲವಾಗಲಿದೆ’ ಎಂದು ವಿವರಿಸಿದರು. 

ಯಾವ ಕೆರೆ ಅಭಿವೃದ್ಧಿಯಾಗಿವೆ ಎಂದು ಹಲವರಿಗೆ ತಿಳಿದಿಲ್ಲ. ಯೋಜನೆಯಡಿ ಹೆಚ್ಚು ಕೆರೆಗಳನ್ನು ಅಭಿವೃದ್ಧಿಪಡಿಸಬೇಕು
ಸಿದ್ದು ತೇಜಿ ರೈತ ಮುಖಂಡ
‘ನೀರಿನ ಸಂಗ್ರಹ ಹೆಚ್ಚಳಕ್ಕೆ ಅನುಕೂಲ’
‘ಅಮೃತ ಸರೋವರ ಯೋಜನೆಯಡಿ ಕೆರಗಳನ್ನು ಅಭಿವೃದ್ಧಿಪಡಿಸಿದ್ದರಿಂದ ಕುಡಿಯುವ ನೀರು ನೀರಾವರಿಗೆ ವ್ಯವಸ್ಥೆಯಾಗಿದೆ. ಕೆರೆಗಳ ಸೌಂದರ್ಯೀಕರಣ ಸಾಧ್ಯವಾಗಿದೆ. ಹೆಚ್ಚು ನೀರು ಸಂಗ್ರಹಗೊಳ್ಳುವುದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ಸುತ್ತಲಿನ ಬೋರ್‌ವೆಲ್‌ಗಳು ಪುನಶ್ಚೇತನಗೊಳ್ಳುತ್ತವೆ. ಬಾಕಿ ಉಳಿದ ಕೆರೆಗಳ ಅಭಿವೃದ್ಧಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ವಿಜಯಕುಮಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT