ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿಗೆ ಆಗಮಿಸಿದ ಸಿಐಡಿ ತಂಡ

ಎಸ್‌ಪಿ ವೆಂಕಟೇಶ್ ನೇತೃತ್ವ; ಸ್ಥಳಕ್ಕೆ ಭೇಟಿ, ಮಾಹಿತಿ ಸಂಗ್ರಹ ಇಂದು
Published 21 ಮೇ 2024, 16:19 IST
Last Updated 21 ಮೇ 2024, 16:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ವೀರಾಪುರ ಓಣಿಯಲ್ಲಿ ನಡೆದ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ತನಿಖೆಗಾಗಿ ಸಿಐಡಿ ಎಸ್‌ಪಿ ವೆಂಕಟೇಶ್ ಎನ್‌. ನೇತೃತ್ವದ ಡಿವೈಎಸ್‌ಪಿ ದರ್ಜೆಯ ಅಧಿಕಾರಿ ಸೇರಿದಂತೆ ಎಂಟು ಸಿಬ್ಬಂದಿ ಇರುವ ತಂಡ ಮಂಗಳವಾರ ಹುಬ್ಬಳ್ಳಿಗೆ ಬಂದಿತು.

ಬೆಂಡಿಗೇರಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ತಂಡ, ಈವರೆಗೆ ನಡೆಸಿದ ತನಿಖೆಯ ಮಾಹಿತಿ, ಕಡತಗಳನ್ನು ಹಸ್ತಾಂತರ ಮಾಡಿಕೊಂಡಿದೆ. ಬುಧವಾರ ಬೆಳಿಗ್ಗೆ ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಲಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಗಿರೀಶ ಸಾವಂತ್ ಆರೋಗ್ಯ ಸುಧಾರಣೆಯಾದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ, ತಮ್ಮ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿ, ಶೀಘ್ರದಲ್ಲೇ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ ಎಂದೂ ತಿಳಿದುಬಂದಿದೆ.

ಹಲ್ಲೆ: ವಿದ್ಯಾನಗರದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ, ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಕುರಿತು ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರೂ ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮಂಗಳವಾರ ವಿದ್ಯಾರ್ಥಿನಿ ಕಾಲೇಜು ಮುಗಿಸಿ ಮನೆಗೆ ಹೋಗುವಾಗ ಚುಡಾಯಿಸಿದ್ದಾನೆ. ತನ್ನೊಂದಿಗೆ ಮಾತನಾಡಲು ಒಪ್ಪದ ಕಾರಣ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಣ ಕಳವು: ಕೆ.ಬಿ. ನಗರದ ಮನೆಯೊಂದರ ಬೀಗ ಮುರಿದು, ₹30,000 ನಗದು ಕಳವು ಮಾಡಲಾಗಿದೆ.

ನೂರ್‌ಜಾನ್‌ ಬಾಗಲಕೋಟ ಎಂಬುವರ ಮನೆಯಲ್ಲಿ ಯಾರೂ ಇಲ್ಲದಾಗ ಕಳವು ನಡೆದಿದ್ದು, ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಡಿಲು ಬಡಿದು ಸಾವು: ತಾರಿಹಾಳದಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳೀಯ ನಿವಾಸಿ ಅರುಣ್ ಚುರುಮುರಿ ಮೃತರು. ಜೋಡಳ್ಳಿ ರಸ್ತೆಯಲ್ಲಿ ಜಾನುವಾರುಗಳನ್ನು ಮೇಯಿಸಲು ಹೊಲಕ್ಕೆ ಹೋದಾಗ ಸಿಡಿಲು ಬಡಿದಿದೆ ಎಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೇಣು ಬಿಗಿದ ಸ್ಥಿತಿಯಲ್ಲಿ ಶವಗಳು ಪತ್ತೆ

ಹುಬ್ಬಳ್ಳಿ: ನವನಗರದ ಗಂಗಾಧರ ನಗರದ ಮನೆಯೊಂದರಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ.

ಧಾರವಾಡ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಮಹೇಶ ಹೆಸರೂರ (35) ಹಾಗೂ ಲಕ್ಷ್ಮೀ ವಾಲಿ (35) ಮೃತರು. ಮೂರ್ನಾಲ್ಕು ದಿನಗಳ ಹಿಂದೆಯೇ ಇಬ್ಬರು ಮೃತಪಟ್ಟಿರಬಹುದು ಎಂದು ಪೊಲೀಸರು ಹೇಳಿದರು.

ಮಹೇಶ ಮದುವೆಯಾಗಿದ್ದರೂ ಲಕ್ಷ್ಮೀ ಅವರನ್ನು ಪ್ರೀತಿಸಿ ಅವರ ಜೊತೆಯೂ ಜೀವನ ನಡೆಸುತ್ತಿದ್ದರು. ಇಬ್ಬರ ಸಾವು ನಿಗೂಢವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT