ಗುರುವಾರ , ಸೆಪ್ಟೆಂಬರ್ 23, 2021
28 °C

ಕೇಂದ್ರದ ಅನುದಾನದ ಲೆಕ್ಕ ಕೊಡಿ: ಕುಮಾರಸ್ವಾಮಿ,ಸಿದ್ದರಾಮಯ್ಯಗೆ ಲಿಂಬಾವಳಿ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಕೊಟ್ಟರೂ, ರಾಜ್ಯ ಸರ್ಕಾರ ಅದನ್ನು ಸರಿಯಾಗಿ ಬಳಸಿಕೊಂಡಿಲ್ಲ. ಕೇಂದ್ರ ಕೊಟ್ಟ ಹಣಕ್ಕೆ ಸಿದ್ದರಾಮಯ್ಯ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಲೆಕ್ಕ ಕೊಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನಿ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಆಗ್ರಹಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೇಂದ್ರ ಸರ್ಕಾರ ಕುಡಿಯುವ ನೀರಿಗೆ ₹1,762 ಕೋಟಿ, ಬರ ನಿರ್ವಹಣೆಗೆ ಎನ್‌ಆರ್‌ಡಿಎಫ್‌ ಅನುದಾನದಲ್ಲಿ ₹ 7,170 ಕೋಟಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ₹ 1,755 ಕೋಟಿ, 14ನೇ ಹಣಕಾಸು ಯೋಜನೆಯಡಿ ₹ 2 ಲಕ್ಷ ಕೋಟಿ ನೀಡಿದೆ. ನಿರ್ಭಯಾ ಯೋಜನೆಗೆ ಕೊಟ್ಟ ಹಣ ಸರಿಯಾಗಿ ಬಳಕೆಯಾಗಿಲ್ಲ. ರೈಲ್ವೆ ಯೋಜನೆಗೂ ಕೇಂದ್ರ ಸಾಕಷ್ಟು ಹಣ ನೀಡಿದೆ’ ಎಂದರು.

‘ಐದು ವರ್ಷಗಳಲ್ಲಿ ನರೇಂದ್ರ ಮೋದಿ ಅವರ ಸಾಧನೆ, ರಾಜ್ಯದ ಸಮ್ಮಿಶ್ರ ಸರ್ಕಾರದ ವೈಫಲ್ಯ ಮತ್ತು ಬಿಜೆಪಿ ಶಕ್ತಿ ಈ ಮೂರು ವಿಷಯಗಳನ್ನು ಎದುರಿಗಿಟ್ಟು ಪ್ರಚಾರ ಮಾಡಿದ್ದೇವೆ. ಕೇಂದ್ರದಿಂದ ಇಷ್ಟೆಲ್ಲ ಸೌಲಭ್ಯ ಪಡೆದ ಮೇಲೂ ಮೋದಿ ಸರ್ಕಾರ ಏನೂ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ. ಅವರಿಬ್ಬರೂ ಮೊದಲು ಕೇಂದ್ರದ ಅನುದಾನಕ್ಕೆ ಲೆಕ್ಕ ಕೊಡಲಿ; ಯಾರು ಸುಳ್ಳುಗಾರರು ಎಂಬುದು ಗೊತ್ತಾಗುತ್ತದೆ’ ಎಂದರು.

‘ಕುಮಾರಸ್ವಾಮಿಗೆ ಎಚ್‌ಎಂಟಿ (ಹಾಸನ, ಮಂಡ್ಯ, ತುಮಕೂರು) ಗೆಲುವಿನ ಬಗ್ಗೆ ಮಾತ್ರ ಚಿಂತೆಯಿದೆ. ದೇವೇಗೌಡರ ಕುಟುಂಬದವರು ತಮ್ಮ ಎದುರಾಳಿ ಅಭ್ಯರ್ಥಿಗಳಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ನಮ್ಮ ಅಭ್ಯರ್ಥಿ ಜಿ.ಎಸ್. ಬಸವರಾಜು ಅವರಿಗೆ ರಕ್ಷಣೆ ನೀಡಬೇಕು. ಎ. ಮಂಜು ತಮ್ಮ ರಕ್ಷಣೆಗಾಗಿ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಲಿ. ಇಲ್ಲವಾದರೆ ರೇವಣ್ಣ ಅವರ ಲಿಂಬೆಹಣ್ಣಿನ ಶಾಪ ತಟ್ಟಿಬಿಡುವ ಅಪಾಯವಿದೆ’ ಎಂದು ವ್ಯಂಗ್ಯವಾಡಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾ. ನಾಗರಾಜ, ಶಾಸಕ ರಘುಪತಿ ಭಟ್‌, ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಾಧ್ಯಮ ಸಂಚಾಲಕ ಎ.ಎಚ್‌. ಆನಂದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು