ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ನಾಯಕನ ಏಳಿಗೆ ಸಹಿಸದೆ ಕುತಂತ್ರ: ಕಾಂಗ್ರೆಸ್ ನಾಯಕರ ಟೀಕೆ

ರಾಜಕೀಯ ಹಗೆತನಕ್ಕೆ ಬಂಧನ
Last Updated 6 ನವೆಂಬರ್ 2020, 4:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿನಯ ಕುಲಕರ್ಣಿ ಅವರನ್ನು ಸಿಬಿಐ ಮೂಲಕ ಬಂಧಿಸಿ ಬಿಜೆಪಿ ನಾಯಕರು ರಾಜಕೀಯ ಹಗೆತನ ಸಾಧಿಸಲು ಕುತಂತ್ರ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹುಸೇನ ಹಳ್ಳೂರ ಆರೋಪಿಸಿದ್ದಾರೆ.

‘ವಿನಯ ಬಂಧನ ರಾಜಕೀಯ ಪ್ರೇರಿತರಾಗಿದ್ದು, ಸಿಬಿಐ ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಅವರು ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮಾಜದ ಪ್ರಭಾವಿ ನಾಯಕರಾಗಿ ಬೆಳೆಯುವುದನ್ನು ಸಹಿಸಲಾಗದೆ ಹೀಗೆ ಮಾಡಿದ್ದಾರೆ’ ಎಂದು ಟೀಕಿಸಿದ್ದಾರೆ.

ಯೋಗೀಶ ಗೌಡ ಗೌಡರ್‌ ಕೊಲೆ ಪ್ರಕರಣದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದೂರು ಕೊಟ್ಟವರಿಂದ ಬಲವಂತವಾಗಿ ಹೇಳಿಕೆಗಳನ್ನು ಪಡೆಯಲಾಗುತ್ತಿದೆ. ಯಾರು ಏನೇ ಮಾಡಿದರೂ, ನಮಗೆ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಪಾರ ನಂಬಿಕೆಯಿದೆ. ಅಲ್ಲಿ ನಮಗೆ ನ್ಯಾಯ ಸಿಗುತ್ತದೆ’ ಎಂದರು.

ರಾಜಕೀಯ ಮಾಡಬಾರದು: ಈ ಹಿಂದೆ ಬಿಜೆಪಿಯವರು ಸಿಬಿಐ ಅನ್ನು ಕಾಂಗ್ರೆಸ್‌ನ ‌ಕೈಗೊಂಬೆ ಎಂದು ಆಪಾದಿಸುತ್ತಿದ್ದರು, ಈಗ ಕಾಂಗ್ರೆಸ್‌ನವರು ಈ ಮಾತು ಹೇಳುತ್ತಿದ್ದಾರೆ. ವಿನಯ ಕುಲಕರ್ಣಿ ತನಿಖಾ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಹೊರಟ್ಟಿ ‘ಸಿಬಿಐ ವಿಚಾರಣೆ ಮತ್ತು ವಶಕ್ಕೆ ಪಡೆಯುವುದು ರಾಜಕೀಯ ಪ್ರೇರಿತವಾಗಬಾರದು. ಕಾನೂನು ಎಲ್ಲರಿಗೂ ಒಂದೇ ಇರಬೇಕು. ತನಿಖಾ ಸಂಸ್ಥೆಗಳನ್ನು ಯಾರೂ ದುರಪಯೋಗ ಮಾಡಿಕೊಳ್ಳಬಾರದು’ ಎಂದರು.

ಜೋಶಿ, ಶೆಟ್ಟರ್‌ ಮನೆಗೆ ಭದ್ರತೆ ಹೆಚ್ಚಳ

ವಿನಯ ಕುಲಕರ್ಣಿ ಬಂಧನ ರಾಜಕೀಯ ವಾಕ್ಸಮರಕ್ಕೆ ಕಾರಣವಾಗುತ್ತಿದ್ದಂತೆ ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರ ಮನೆಗೆ ಭದ್ರತೆ ಹೆಚ್ಚಿಸಲಾಗಿದೆ.

ವಿನಯ ಬಂಧನ ಖಂಡಿಸಿ ಜಿಲ್ಲೆಯ ಕೆಲವು ಕಡೆ ಪ್ರತಿಭಟನೆಗಳು ನಡೆದಿದ್ದವು. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT