ಹುಬ್ಬಳ್ಳಿ: ‘ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆ, ಕಾಲೇಜುಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಪ್ರತಿ ವರ್ಷ ದಾಖಲೆಗಳನ್ನು ಕೇಳುವುದು ಸರಿಯಾದ ಕ್ರಮವಲ್ಲ. ಈ ಅವೈಜ್ಞಾನಿಕ ಪದ್ಧತಿಯನ್ನು ಸರಿಪಡಿಸಬೇಕು’ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
‘ಪ್ರತಿ ವರ್ಷ ಮಾನ್ಯತೆ ನವೀಕರಣಕ್ಕಾಗಿ ಸಲ್ಲಿಸಲಾಗುತ್ತಿರುವ ಪ್ರಸ್ತಾವನೆಯಲ್ಲಿ ಹಲವು ಷರತ್ತುಗಳನ್ನು ವಿಧಿಸಲಾಗುತ್ತಿದೆ. ಉದಾಹರಣೆಗೆ ಲೋಕೋಪಯೋಗಿ ಇಲಾಖೆಗಳಿಂದ ಕಟ್ಟಡ ಸುರಕ್ಷಾ ಪ್ರಮಾಣಪತ್ರ ಹಾಗೂ ಅಗ್ನಿನಂದಕ ಅಳವಡಿಸಿರುವ ಕುರಿತು ಅಗ್ನಿಶಾಮಕ ಇಲಾಖೆ ಪ್ರಮಾಣಪತ್ರ ಮೊದಲಾದವುಗಳನ್ನು ಕೇಳುತ್ತಿರುವುದು ಸರಿಯಾದ ಕ್ರಮವಲ್ಲ. ಹಳೆಯ ಕಟ್ಟಡಗಳಿಗೆ ಮಾಹಿತಿಯನ್ನು ಮೊದಲೇ ಸಲ್ಲಿಸಲಾಗಿರುತ್ತದೆ. ಮತ್ತೆ ಅದೇ ಮಾಹಿತಿಯನ್ನು ಸಲ್ಲಿಸುವಂತೆ ಕೇಳುವುದು ಸಮಂಜಸವಲ್ಲ. ಸರ್ಕಾರಿ ಶಾಲೆಗಳಿಗೆ ಇಲ್ಲದ ನಿಯಮಗಳು ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೆ ವಿಧಿಸುತ್ತಿರುವುದು ಸರಿಯಾದ ಪದ್ಧತಿ ಅಲ್ಲ’ ಎಂದು ತಿಳಿಸಿದ್ದಾರೆ.
‘2006–07ರಲ್ಲಿ ನಾನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವನಾಗಿದ್ದಾಗ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆದೇಶವನ್ನೂ ಹೊರಡಿಸಿದ್ದೆ. ಪ್ರತಿ 5 ವರ್ಷಕ್ಕೊಮ್ಮೆ, 10 ವರ್ಷಕ್ಕೊಮ್ಮೆ, 15 ವರ್ಷಕ್ಕೊಮ್ಮೆ ನಂತರ ಶಾಶ್ವತ ಮಾನ್ಯತೆ ನವೀಕರಣ ನೀಡುವ ಕುರಿತು ಈ ಆದೇಶದಲ್ಲಿ ತಿಳಿಸಲಾಗಿತ್ತು. ಕೆಲ ವರ್ಷ ಆ ಆದೇಶವನ್ನು ಪಾಲಿಸಿದ ಶಿಕ್ಷಣ ಇಲಾಖೆ ನಂತರ ಮತ್ತೆ ಪ್ರತಿ ವರ್ಷ ಮಾನ್ಯತೆ ನವೀಕರಣಕ್ಕಾಗಿ ಪ್ರಸ್ತಾವ ಸಲ್ಲಿಸಲು ಸೂಚಿಸುತ್ತಿರುವುದು ಸರಿಯಲ್ಲ. ಸಚಿವರು ಸಭೆ ಕರೆದು, ಈ ವಿಷಯ ಮತ್ತೊಮ್ಮೆ ಚರ್ಚಿಸಿ 2006–07ರ ಆದೇಶವನ್ನು ಜಾರಿಮಾಡಲು ಸೂಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.