ಗುರುವಾರ , ಮೇ 26, 2022
23 °C
ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಸಮ್ಮತಿ

ಹುಬ್ಬಳ್ಳಿ: ಅಂಬೇಡ್ಕರ್‌ ಪುತ್ಥಳಿ ತೆರವಿಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಆರ್‌ಜಿಎಸ್ ರೈಲ್ವೆ ಕಾಲೊನಿಯ ವಿನೋಬಾನಗರದ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯ ತೆರವಿಗೆ ಮತ್ತೆ ರೈಲ್ವೆ ರಕ್ಷಣಾ ದಳದ (ಆರ್‌ಪಿಎಫ್‌) ಸಿಬ್ಬಂದಿ ಶನಿವಾರ ಮುಂದಾಗಿದ್ದರು. ಈ ವೇಳೆ, ಸ್ಥಳೀಯರು ಮತ್ತು ಪೊಲೀಸ್‌ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.

ತೆರವು ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿ ಕೆಲವು ಮುಖಂಡರು, ಪೊಲೀಸರ ಕ್ರಮವನ್ನು ಖಂಡಿಸಿದರು.

ಸಮತಾ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಮಾತನಾಡಿ, ‘‍ರೈಲ್ವೆ ಪೊಲೀಸರು ಪುತ್ಥಳಿ ತೆರವುಗೊಳಿಸುವ ಉದ್ದೇಶದಿಂದಲೇ ಸ್ಥಳಕ್ಕೆ ಜೆಸಿಬಿ ಯಂತ್ರವನ್ನು ತಂದಿದ್ದಾರೆ. ತೆರವು ಕಾರ್ಯಕ್ಕೆ ಹಿಂದೆಯೂ ತೀವ್ರ ವಿರೋಧ ವ್ಯಕ್ತಪಡಿಸಿದ್ದೇವೆ. ಆಗ ಮಣಿದಿದ್ದ ಪೊಲೀಸರು ಈಗ ಮತ್ತೆ ತೆರವು ಕಾರ್ಯಕ್ಕೆ ಮುಂದಾಗಿರುವುದು ಖಂಡನೀಯ’ ಎಂದು ತಿಳಿಸಿದರು.

‘ಈ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಅಂಬೇಡ್ಕರ್‌ ಅವರ ಮೇಲೆ ಅಭಿಮಾನದಿಂದ ಯಾರೋ ಪುತ್ಥಳಿ ತಂದು ಸ್ಥಾಪಿಸಿದ್ದಾರೆ. ಅದನ್ನು ತೆರವು ಮಾಡುವುದು ಸರಿಯಲ್ಲ. ಇದೇ ಜಾಗದಲ್ಲಿ ಉದ್ಯಾನವನ್ನೂ ಅಭಿವೃದ್ಧಿಪಡಿಸಬಹುದು. ಇದರಿಂದ ಸ್ಥಳೀಯರಿಗೆ ಅನುಕೂಲವಾಗಲಿದೆ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ಸ್ಥಳೀಯರು ಈಚೆಗೆ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪಿಸಿದ್ದರು. ಪೊಲೀಸರು ಪುತ್ಥಳಿ ತೆರವು ಮಾಡಿದಾಗ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ನಂತರ ಪುತ್ಥಳಿಯನ್ನು ಹಿಂದಿರುಗಿಸಲಾಗಿತ್ತು. ಮತ್ತೆ ಅದೇ ಜಾಗದಲ್ಲಿ ಪುತ್ಥಳಿ ಮರುಸ್ಥಾಪಿಸಲಾಗಿದೆ. ವಿವಾದ ಪರಿಹರಿಸಲು ಸೋಮವಾರ ನೈರುತ್ಯ ರೈಲ್ವೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಎಲ್ಲರೂ ಸಮ್ಮತಿಸಿದರು.

ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಮಹಾನಗರ ಪಾಲಿಕೆ ಸದಸ್ಯ ಸುವರ್ಣಾ ಕಲ್ಲಕುಂಟ್ಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು