ಗುಡಗೇರಿ: ಕುಂದಗೋಳ ತಾಲ್ಲೂಕಿನಲ್ಲಿ ಬಹುತೇಕರು ಕೃಷಿಯನ್ನೆ ನಂಬಿಕೊಂಡು ಜೀವನ ಕಟ್ಟಿಕೊಂಡಿದ್ದು, ಸಮರ್ಪಕವಾಗಿ ಮಾಹಿತಿ ನೀಡಬೇಕಾದ ಕೃಷಿ ಇಲಾಖೆಯಲ್ಲಿ ಅಧಿಕಾರಿ ಹುದ್ದೆ ಖಾಲಿ ಇರುವುದರಿಂದ ಈ ಇಲಾಖೆ ಇದ್ದುಇಲ್ಲದಂತೆ ಆಗಿದೆ.
ತಾಲ್ಲೂಕಿನಲ್ಲಿ ಒಟ್ಟು 58 ಸಾವಿರ ಹೆಕ್ಟೇರ್ ಸಾಗುವಳಿ ಕ್ಷೇತ್ರವಿದೆ. ಆದರೆ ಕೃಷಿಗೆ ಪೂರಕವಾದ ಮಾಹಿತಿ ಕೂರತೆಯಿಂದಾಗಿ ರೈತರು ಲಾಭದಾಯಕ ಬೆಳೆ ಬೆಳೆಯಲು ವಿಫಲರಾಗುತ್ತಿದ್ದಾರೆ, ಮೆಣಸಿನಕಾಯಿ ಈ ಭಾಗದಲ್ಲಿ ಪ್ರಸಿದ್ದಿ ಬೆಳೆ. ಆದರೆ ಇಳುವರಿ ಕುಂಠಿತದಿಂದ ರೈತರು ಬೆಳೆ ಬೆಳೆಯದೇ ಕೈಬಿಟ್ಟಿದ್ದಾರೆ ಎಂದು ಬಾಹುಬಲಿ ಸೋಮಾಪೂರ ಬೇಸರ ವ್ಯಕ್ತಪಡಿಸಿದರು.
‘ಸುಧಾರಿತ ಕೃಷಿ ಪದ್ದತಿ ಅಳವಡಿಸಿಕೊಳ್ಳಿ ಎಂದು ಕೃಷಿ ವಿಶ್ವವಿದ್ಯಾನಿಲಯ, ಸರ್ಕಾರ ಅನೇಕ ತರಹದ ತಾಂತ್ರಿಕತೆಯ ಮೂಲಕ ಪ್ರಚಾರ ಮಾಡುತ್ತಿದೆ. ಭೌತಿಕವಾಗಿ ರೈತರಿಗೆ ಹೊಲದಲ್ಲಿ ತರಬೇತಿ ನೀಡುವ ಕೃಷಿ ಸಹಾಯಕರು ಇಲ್ಲದೆ ಇರುವುದರಿಂದ ರೈತರಿಗೆ ಸೂಕ್ತ ಮಾಹಿತಿ ದೊರೆಯದೇ ಕೈಸುಟ್ಟಿಕೊಳ್ಳುವಂತಾಗಿದೆ’ ಎಂದು ಗಂಗಾಧರ ಗಿರಮಲ್ಲ ಹೇಳುತ್ತಾರೆ.
‘ಮೊದಲು ನಮ್ಮ ಹಿರಿಯರು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಬದುಕು ಸಾಗಿಸುತ್ತಿದ್ದರು. ಆದರೆ ಕೃಷಿ ಇಲಾಖೆ ಮೂಲಕ ಸುಧಾರಿತ ಬೀಜೋಪಚಾರಗಳೂಂದಿಗೆ ಹೆಚ್ಚಿನ ಇಳುವರಿ ಬರುವಂತಹ ತಳಿಗಳನ್ನು ಅವಿಷ್ಕರಿಸಿದೆ. ಆದರೆ ಇದರಿಂದ ಬೆಳೆ ಹಂತದಲ್ಲಿ ಅನೇಕ ರೋಗಕ್ಕೆ ತುತ್ತಾಗುತ್ತಿದ್ದು ಔಷಧಿ ಉಪಚಾರದ ರೈತರಿಗೆ ಮಾಹಿತಿ ನೀಡುವ ಅಧಿಕಾರಿಗಳು ಇಲ್ಲದಂತಾಗಿದೆ’ ಎಂದು ತಾಲ್ಲೂಕಿನ ಪ್ರಗತಿಪರ ಕೃಷಿಕರು ವಿಷಾದದಿಂದ ಹೇಳುತ್ತಾರೆ.
‘ಸುಮಾರು ಒಂದು ದಶಕದ ಹಿಂದೆ ಕೃಷಿ ಇಲಾಖೆಯಲ್ಲಿ ನಾಲ್ಕು ಆಧಾರ ಸ್ಥಂಭಗಳ ಅಧಿಕಾರಿ ವರ್ಗ ರೈತರಿಗೆ ಸಮರ್ಪಕವಾದ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಬ್ಬ ಈ ಅಧಿಕಾರಿಗಳು ಕಾರ್ಯನಿರ್ವಹಿಸಿ ರೈತರ ಹೊಲಗಳಿಗೆ ತೆರೆಳಿ ಸಮರ್ಪಕವಾದ ಮಾಹಿತಿ ದೊರೆಯಲಿದೆ’ ಎನ್ನುತ್ತಾರೆ ರೈತ ಮಂಜುನಾಥ ಅಣ್ಣಿಗೇರಿ.
ಈ ಕುರಿತು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ ಅವರನ್ನು ಸಂಪರ್ಕಿಸಿದಾಗ, ‘ಕೃಷಿ ಸಹಾಯಕ ಅಧಿಕಾರಿ ಹುದ್ದೆ ಸೇರಿದಂತೆ ಅನೇಕ ಹುದ್ದೆಗಳು ಖಾಲಿ ಇವೆ. ಸರ್ಕಾರದ ಮಟ್ಟದಲ್ಲಿ ನೇಮಕಾತಿ ನಡೆಯಬೇಕಿದೆ. ಸೀಮಿತ ಸಿಬ್ಬಂದಿ ಬಳಸಿಕೊಂಡು ಕೃಷಿ ಸಂಪರ್ಕ ಕೇಂದ್ರದ ಮೂಲಕ ಸಕಾಲಕ್ಕೆ ಮಾಹಿತಿ ತಲುಪಿಸುತ್ತಿದ್ದೇವೆ’ ಎಂದರು.
ಬೆರೆಳಿಕೆ ಜನ ಮಾತ್ರ ಕಾರ್ಯನಿರ್ವಹಣೆ ಕೃಷಿ ಮೇಳದ ಯಶಸ್ಸು ರೈತರಿಗೆ ದೊರೆಯಲಿ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಸೌಲಭ್ಯ ಕೊರತೆ
ಮೊದಲು ಗ್ರಾಮ ಮಟ್ಟದಲ್ಲಿಯೇ ಕೃಷಿ ಸಹಾಯಕರು ಹೊಲದವರೆಗೆ ಬಂದು ಬೆಳೆಗಳ ಬಗ್ಗೆ ರೈತರಲ್ಲಿ ಮಾಹಿತಿ ನೀಡುತ್ತಿದ್ದರು. ಈಗ ಆ ಅಧಿಕಾರಿಗಳೇ ಇಲ್ಲವಿಜಯಕುಮಾರ ಹಾಲಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.