ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ್ರೋಹಿಗಳಿಗೆ ಕಾಂಗ್ರೆಸ್ ಕುಮ್ಮಕ್ಕು: ಬಸವರಾಜ ಬೊಮ್ಮಾಯಿ

Published 28 ಫೆಬ್ರುವರಿ 2024, 16:08 IST
Last Updated 28 ಫೆಬ್ರುವರಿ 2024, 16:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ‌ ಬಳಿಕ ದೇಶದ್ರೋಹಿಗಳಿಗೆ ಹೆಚ್ಚು ಧೈರ್ಯ ಬಂದಿದೆ. ವಿಧಾನಸೌಧಕ್ಕೆ ಬಂದು ದೇಶದ್ರೋಹದ ಘೋಷಣೆ ಕೂಗಲು ಈ ಸರ್ಕಾರ ನೀಡಿರುವ ಪ್ರೋತ್ಸಾಹವೇ ಕಾರಣ. ಇಂಥ ಶಕ್ತಿಗಳನ್ನು ನಮ್ಮ ಸರ್ಕಾರ ಸದೆಬಡಿದಿತ್ತು’ ಎಂದು ಶಾಸಕ‌ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದ ಆವರಣದಲ್ಲಿ ಕಿಡಿಗೇಡಿಯೊಬ್ಬ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ಪ್ರಕರಣದ ಕುರಿತು ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು,‘ಕೇವಲ ಮತಕ್ಕಾಗಿ ದೇಶದ ಭದ್ರತೆಯನ್ನು ಅಡ ಇಡುವ ಕೆಲಸ ರಾಜ್ಯ‌‌ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಮುಖ್ಯಮಂತ್ರಿ ಅವರು ಮತ ಬ್ಯಾಂಕ್ ಓಲೈಕೆ ರಾಜಕಾರಣದ ಮುಸುಕು ಹಾಕಿಕೊಂಡಿದ್ದಾರೆ. ಅದಕ್ಕೆ ಅವರಿಗೆ ಬೇರೆ ಏನೂ ಕಾಣುತ್ತಿಲ್ಲ’ ಎಂದರು.

‘ಕಾಂಗ್ರೆಸ್‌ನವರು ಒಂದೆಡೆ ದೇಶ ಒಡೆಯುವುದು ಮಾತನಾಡಿದರೆ, ಇನ್ನೊಂದೆಡೆ ದೇಶದ್ರೋಹಿ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಾರೆ. ಅವರಿಂದ ಈ ದೇಶ, ನಾಡನ್ನು ಸುರಕ್ಷಿತವಾಗಿಡಲು ಆಗಲ್ಲ. ಅವರು ನೈತಿಕತೆ ಕಳೆದುಕೊಂಡಿದ್ದಾರೆ. ಜನ ಎಚ್ಚೆತ್ತುಕೊಂಡು ಎಷ್ಟು ಬೇಗ ಈ ಸರ್ಕಾರವನ್ನು ಕಿತ್ತೊಗೆಯುತ್ತಾರೋ, ಅಷ್ಟು ಬೇಗ ಈ ನಾಡು ಮತ್ತು ದೇಶಕ್ಕೆ ಒಳ್ಳೆಯದಾಗುತ್ತದೆ’ ಎಂದು ಅವರು ಹೇಳಿದರು.

‘ಭಯೋತ್ಪಾದಕ ಚಟುವಟಿಕೆ ಮಾಡುತ್ತಿದ್ದ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲಾಗಿದೆ‌‌. ಅದು ಈಗ ಬೇರೆ ಬೇರೆ ರೂಪದಲ್ಲಿ ಕೆಲಸ ಮಾಡುತ್ತಿದೆ. ಈಚೆಗೆ ಹಾನಗಲ್‌ನಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಆತಂಕಕಾರಿ ವಾತಾವರಣ ನಿರ್ಮಾಣವಾಗಿದೆ’ ಎಂದರು.

‘ನಮ್ಮ ಸರ್ಕಾರವು 15ಕ್ಕೂ ಹೆಚ್ಚು ಸ್ಲೀಪರ್‌ಸೆಲ್‌ಗಳನ್ನು ಜೈಲಿಗಟ್ಟಿತ್ತು. ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ, ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಈಗ ಅಂತಹ ವಾತಾವರಣ ಇಲ್ಲ. ಬಿಲದಲ್ಲಿ ಅಡಗಿ ಕೂತವರು ಈಗ ಧೈರ್ಯವಾಗಿ ಹೊರಗೆ ಬರುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT