ಶನಿವಾರ, ಜುಲೈ 2, 2022
25 °C

ಬೇಡ ಜಂಗಮ ಹಕ್ಕೊತ್ತಾಯ; ಮಠಾಧೀಶರಿಂದ ಪ್ರತಿಭಟನೆ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: 'ಬೇಡ ಜಂಗಮ ಸಮುದಾಯಕ್ಕೆ ಸಂವಿಧಾನ ಬದ್ಧವಾಗಿ ದೊರೆಯಬೇಕಾದ ಮೀಸಲಾತಿ ಸೌಲಭ್ಯ ಸರ್ಕಾರ ಕಲ್ಪಿಸಬೇಕು. ಹಾಗೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ದಾಖಲಾದ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯಬೇಕು' ಎಂದು ತಿಪಟೂರು ರುದ್ರಮುನಿ ಸ್ವಾಮೀಜಿ ಆಗ್ರಹಿಸಿದರು.

ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ಇಲ್ಲಿನ ಮೂರುಸಾವಿರ ಮಠದ ಸಭಾಭವನದಲ್ಲಿ ವಿವಿಧ ಮಠಾಧೀಶರೊಂದಿಗೆ ಸಭೆ ನಡೆಸಿ, ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

'ರಾಜ್ಯದ ಎಲ್ಲ ಜಿಲ್ಲೆಗಳ ಜಂಗಮ ಸಮುದಾಯ ಮಠಾಧೀಶರ ಜೊತೆ ಇಂದು ಸಭೆ ನಡೆಸಿ ಚರ್ಚಿಸಿದ್ದೇವೆ. ನಾವೇ ಜಂಗಮರು, ನಾವೇ ಬೇಡ ಜಂಗಮರು. ನಮ್ಮಲ್ಲಿ ಯಾವುದೇ ಬೇಧವಿಲ್ಲ. ಈ ಹಿನ್ನೆಲೆಯಲ್ಲಿ ಸಂವಿಧಾನದಲ್ಲಿ ನೀಡಿರುವ ಪರಿಶಿಷ್ಟ ಜಾತಿ ಮೀಸಲಾತಿ ಸೌಲಭ್ಯ ನ್ಯಾಯಯುತವಾಗಿ ನೀಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಸಮುದಾಯದವರು ಮಠಾಧೀಶರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ' ಎಂದು ಎಚ್ಚರಿಸಿದರು.

'ಎಂಟು-ಹತ್ತು ಮಂದಿ ಬೇಡ ಜಂಗಮರು ಪರಿಶಿಷ್ಟ ಜಾತಿ ಪ್ರಮಾಣ ಪಡೆದು ಉದ್ಯೋಗದಲ್ಲಿದ್ದಾರೆ. ಆದರೆ, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ. ಕಾನೂನಾತ್ಮಕವಾಗಿ ಪಡೆದ ಹಕ್ಕನ್ನು ಹತ್ತಿಕ್ಕುವ ಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ' ಎಂದು ಆರೋಪಿಸಿದರು.

ಚಳಗೇರಿ ವೀರಸಂಗಮೇಶ್ವರ ಸ್ವಾಮೀಜಿ‌ ಮಾತನಾಡಿ, 'ಸಂವಿಧಾನದಲ್ಲಿ ಉಲ್ಲೇಖಿಸಿರುವ 101 ಪರಿಶಿಷ್ಟರ ಪಟ್ಟಿಯಲ್ಲಿ ಬೇಡ ಜಂಗಮ ಹೆಸರು 19 ನೇ ಸ್ಥಾನದಲ್ಲಿದೆ. ಸಂವಿಧಾನ ರಚನೆಯಾಗಿ 73 ವರ್ಷ ಕಳೆದರೂ ದೊರೆಯಬೇಕಾದ ಸೌಲಭ್ಯ ಇನ್ನೂ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮಠಾಧೀಶರೆಲ್ಲ ಒಂದುಗೂಡಿ ಹೋರಾಟ ನಡೆಸಲು ನಿರ್ಧರಿಸಿದ್ದೇವೆ. ಇದು ಯಾವುದೇ ಜಾತಿ, ಸಮುದಾಯದ ವಿರುದ್ಧದ ಹೋರಾಟವಲ್ಲ. ಸಂವಿಧಾನಬದ್ಧ ಹಕ್ಕಿಗೆ ಹೋರಾಟ' ಎಂದರು.

'ಚುನಾವಣಾ ಕಣಕ್ಕೆ ಮಠಾಧೀಶರು'

'ಸಮಾಜದ ಹಿತಕ್ಕಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಮಠಾಧೀಶರು ಆಯ್ದ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದ್ದಾರೆ' ಎಂದು ರುದ್ರಮುನಿ ಸ್ವಾಮೀಜಿ ಹೇಳಿದರು.

'ಬೇಡ ಜಂಗಮ ಸಮುದಾಯದ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗಿ ಉತ್ತರ ಪ್ರದೇಶದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ರಾಜಕೀಯಕ್ಕೆ ಮಠಾಧೀಶರು ಬಂದರೆ ಸಮಾಜದಲ್ಲಿ ಮತ್ತಷ್ಟು ಉತ್ತಮ ಕಾರ್ಯ ಮಾಡಲು ಸಾಧ್ಯ. ಆರ್ಥಿಕವಾಗಿ, ಆಡಳಿತಾತ್ಮಕವಾಗಿ ಶಕ್ತಿ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಆಯ್ದ ಕ್ಷೇತ್ರಗಳಲ್ಲಿ ಮಠಾಧೀಶರು ಸ್ಪರ್ಧೆ ನಡೆಸಲು ನಿರ್ಧರಿಸಿದ್ದಾರೆ. ಯಾವ್ಯಾವ ಕ್ಷೇತ್ರ ಎನ್ನುವುದನ್ನು ಚುನಾವಣೆ ಸಂದರ್ಭದಲ್ಲಿ ತಿಳಿಸಲಾಗುವುದು' ಎಂದ ಸ್ವಾಮೀಜಿ', 'ನಾನು ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮೊದಲಿನಿಂದಲೂ ಇಚ್ಛಿಸಿದ್ದೇನೆ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು