ಗುರುವಾರ , ಮಾರ್ಚ್ 4, 2021
29 °C
ಗ್ರಾಮದ ಮೂರು ದಿಕ್ಕನ್ನು ಆವರಿಸಿರುವ ಪ್ರವಾಹದ ನೀರು

ಇಂಗಳಹಳ್ಳಿಗೆ ಮುಳುವಾದ ಬೆಣ್ಣೆಹಳ್ಳ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಬೆಣ್ಣೆಹಳ್ಳದ ತಟದಲ್ಲಿರುವ ಇಂಗಳಹಳ್ಳಿಯ ಮೂರು ದಿಕ್ಕು ಇದೀಗ ಜಲಾವೃತಗೊಂಡಿದ್ದು, ಗ್ರಾಮದ ಜನರ ಬದುಕು  ಮೂರಾಬಟ್ಟೆಯಾಗಿದೆ.ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಊರಿನ ಬಹುತೇಕ ಜಮೀನು ನೀರಿನಲ್ಲಿ ಮುಳುಗಡೆಯಾಗಿದೆ.

ಊರಂಚಿನ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ನಾಲ್ಕೈದು ಮನೆಗಳ ಗೋಡೆ ಕುಸಿದಿದೆ. ರಾತ್ರೊರಾತ್ರಿ ಮನೆಗೆ ನೀರು ನುಗ್ಗಿದ್ದರಿಂದ ಸುಮಾರು 40 ಮಂದಿ ಊರಿನ ದೇವಾಲಯ ಹಾಗೂ ಸಮುದಾಯ ಭವನದಲ್ಲಿ ಮೂರು ದಿನಗಳಿಂದ ಆಶ್ರಯ ಪಡೆದಿದ್ದಾರೆ. ಸದ್ಯ ಗದಗ ರಸ್ತೆಯಿಂದ ಗ್ರಾಮ ಸಂಪರ್ಕಿಸುವ ರಸ್ತೆ ಹೊರತುಪಡಿಸಿದರೆ, ಉಳಿದೆಲ್ಲಾ ರಸ್ತೆಗಳನ್ನು ನೀರು ನುಂಗಿ ಹಾಕಿದೆ.

ಕೇಳುವವರೇ ಇಲ್ಲ:

‘ಮನೆಗೆ ನೀರು ನುಗ್ಗಿದ್ದರಿಂದ ಮೂರು ದಿನದಿಂದ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದೇವೆ. ಆದರೆ, ಇಲ್ಲಿ ನಮ್ಮನ್ನು ಕೇಳುವವರೇ ಇಲ್ಲವಾಗಿದ್ದಾರೆ. ಅಧಿಕಾರಿಗಳು ಗಂಜಿ ಕೇಂದ್ರ ತೆರೆಯುತ್ತೇವೆ ಎಂದು ಹೇಳುತ್ತಿದ್ದಾರೆಯೇ ಹೊರತು, ಇದುವರೆಗೂ ತೆರೆದಿಲ್ಲ. ಮೂರು ದಿನದಿಂದ ಸಂಬಂಧಿಕರು ನಮಗೆ ಊಟೋಪಚಾರ ಮಾಡುತ್ತಿದ್ದಾರೆ’ ಎಂದು ಗ್ರಾಮದ ದೇವಸ್ಥಾನದಲ್ಲಿ ಮಕ್ಕಳೊಂದಿಗೆ ಆಶ್ರಯ ಪಡೆದಿರುವ ವಿಜಯಲಕ್ಷ್ಮಿ ಅಸಮಾಧಾನ ವ್ಯಕ್ತಪಡಿಸಿದರು.

‘ಮೂರು ದಿನದಿಂದ ಮನೆಯ ಸುತ್ತಮುತ್ತ ನೀರು ನಿಂತಿರುವುದರಿಂದ ಗೋಡೆಗಳು ಶಿಥಿಲಗೊಳ್ಳುತ್ತಿವೆ. ಅತ್ತ ಹೊಲದಲ್ಲಿ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಇತ್ತ ಮನೆಯ ಸಾಮಾನುಗಳು ಒದ್ದೆಯಾಗಿ ಹಾನಿಗೊಂಡಿವೆ. ಮುಂದೇನು ಮಾಡುವುದು ಎಂದು ತೋಚದಾಗಿದೆ’ ಎಂದು ಚಂದ್ರಪ್ಪ ಹಡಪದ ಅಳಲು ತೋಡಿಕೊಂಡರು.

ಪರಿಹಾರಕ್ಕೆ ಆಗ್ರಹ:

‘ಮಳೆಯಿಂದಾಗಿ ನಮ್ಮ ಮನೆಗಳು ಕುಸಿದಿವೆ. ಜಮೀನಿನಲ್ಲಿ ಬಿತ್ತಿರುವ ಬೆಳೆಯೂ ನೀರು ಪಾಲಾಗಿದೆ. ನಾವು ಮನೆ ದುರಸ್ತಿ ಮಾಡಿಕೊಳ್ಳಲು ಹಾಗೂ ಬಿತ್ತೆಗಾಗಿ ಮಾಡಿರುವ ಸಾಲ ತೀರಿಸಲು ತಾಲ್ಲೂಕು ಆಡಳಿತ ಅಗತ್ಯ ಪರಿಹಾರ ನೀಡಬೇಕು’ ಎಂದು ಸಂತ್ರಸ್ತರಾದ ಮಂಜವ್ವ ಬಳಿಗೇರ ಆಗ್ರಹಿಸಿದರು.

‘ಹದಿನೈದು ವರ್ಷದ ಹಿಂದೆಯೂ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು. ಆಗಲೂ ಗ್ರಾಮದ ಮೂರೂ ದಿಕ್ಕನ್ನು ಬೆಣ್ಣೆಹಳ್ಳದ ಪ್ರವಾಹ ಆವರಿಸಿತ್ತು. ಹಲವು ಮನೆಗಳು ಹಾನಿಗೊಂಡಿದ್ದು. ಕೆಲ ದಿನ ಹೊರಗಡೆ ಓಡಾಡಲಾಗದೆ ಮನೆಯಲ್ಲೇ ಕೂರಬೇಕಾಗಿತ್ತು’ ಎಂದು ಗ್ರಾಮದ ಹಿರಿಯರಾದ ರುದ್ರಪ್ಪ ಶಾನವಾಡ ಮೆಲುಕು ಹಾಕಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.