ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ವಡ್ಡರ ಯಲ್ಲಣ್ಣ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಆಗ್ರಹಿಸಿ ರಾಜ್ಯ ಭೋವಿ(ವಡ್ಡರ) ಮಹಾಸಭಾ ಸಂಘಟನೆ ಸದಸ್ಯರು ಸೋಮವಾರ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಮಹಾಸಭಾ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಬಾಬು ಭೋಜಗಾರ ಮತ್ತು ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಲಲಿತಾ ಭೋಜಗಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮೇಯರ್ ರಾಮಪ್ಪ ಬಡಿಗೇರ ಮತ್ತು ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
'ಈ ಹಿಂದೆಯೂ ಮನವಿ ಪತ್ರ ಸಲ್ಲಿಸಿ ವಿನಂತಿಸಲಾಗಿತ್ತು. ಪಾಲಿಕೆ ಸದಸ್ಯರ ಗಮನಕ್ಕೆ ತಂದು, ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದೀರಿ. ಆದರೆ, ಈವರೆಗೂ ಆ ಕುರಿತು ಯಾವುದೇ ಪ್ರಕ್ರಿಯೆ ನಡೆದಿಲ್ಲ. ವಡ್ಡರ ಯಲ್ಲಣ್ಣ ಅವರ ಪ್ರತಿಮೆ ಸ್ಥಾಪಿಸುವ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡು, ಅವರಿಗೆ ಗೌರವ ಸಲ್ಲಿಸಬೇಕು' ಎಂದು ಒತ್ತಾಯಿಸಿದರು.
ಪಂಪಣ್ಣ ಐ.ಎ., ದಿನೇಶ ಭೋಜಗಾರ, ಮಂಜುನಾಥ ವಡ್ಡರ, ವಂಗಮ್ಮ ಜಮಖಂಡಿ, ರೋಹಿಣಿ ಬೆನ್ನೂರ, ವಿಶ್ವಾಸ ದೊಡ್ಡಮನಿ, ಅರುಣಕುಮಾರ, ತಿಪ್ಪಣ್ಣ ವಡ್ಡರ, ಕಲಾವತಿ ಕಲಘಟಗಿ, ನಾಗಪ್ಪ ಬಂಡಿ, ರತ್ನವ್ವ ಹುಬ್ಬಳ್ಳಿ, ಸಾಗರ ಬಳ್ಳಾರಿ, ಹನುಮಂತ ಬಂಡಿವಡ್ಡರ, ಸಂಜಯ ಭೋಜಗಾರ ಮತ್ತು ನಾಗರಾಜ ಬತ್ತಲಕರ ಇದ್ದರು.