ನೆಹರೂ ಮೈದಾನ ಅಭಿವೃದ್ಧಿಗೆ ಮೊರೆ

ಸೋಮವಾರ, ಏಪ್ರಿಲ್ 22, 2019
32 °C
ಕ್ರೀಡಾಪಟುಗಳು, ವಾಯು ವಿಹಾರಿಗಳ ಮತಯಾಚಿಸಿದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ

ನೆಹರೂ ಮೈದಾನ ಅಭಿವೃದ್ಧಿಗೆ ಮೊರೆ

Published:
Updated:
Prajavani

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಬುಧವಾರ ಬೆಳಿಗ್ಗೆ ನಗರದ ನೆಹರೂ ಮೈದಾನದಲ್ಲಿ ಕ್ರೀಡಾಪಟುಗಳು, ವಾಯು ವಿಹಾರಿಗಳ ಮತಯಾಚಿಸಿದರು.

ಕ್ರಿಕೆಟ್‌, ವಾಲಿಬಾಲ್‌, ಶಟಲ್‌ ಬ್ಯಾಡ್ಮಿಂಟನ್‌ ಮತ್ತು ಫುಟ್‌ಬಾಲ್‌ ಆಟದಲ್ಲಿ ನಿರತವಾಗಿದ್ದ ಆಟಗಾರರೊಂದಿಗೆ ಕೆಲ ಹೊತ್ತು ಆಟವಾಡಿದ ಬಳಿಕ ಆಹವಾಲು ಆಲಿಸಿದರು.

‘ಮೈದಾನ ಸಂಪೂರ್ಣ ಹಾಳಾಗಿದೆ, ದೂಳು ಏಳುತ್ತದೆ. ಸಮರ್ಪಕ ನೀರಿನ ವ್ಯವಸ್ಥೆ ಇಲ್ಲ. ಮಹಿಳೆಯರಿಗೆ ಸರಿಯಾದ ಶೌಚಾಲಯವಿಲ್ಲ. ಇಲ್ಲಿನ ಜಿಮ್‌ನಲ್ಲಿದ್ದ ಸಲಕರಣೆಗಳು ಹಾಗೂ ಮೈದಾನದಲ್ಲಿ ಇದ್ದ ರೋಲರ್‌ ಕಳುವಾಗಿದೆ. ಯಾರೂ ಗಮನ ಹರಿಸುತ್ತಿಲ್ಲ. ಈ ಮೈದಾನದಲ್ಲಿ ರಾಜಕೀಯ ಸೇರಿದಂತೆ ಬೇರಾವ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಅವಕಾಶ ನೀಡಬೇಡಿ. ಮೂಲಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಮಗ್ರವಾಗಿ ಅಭಿವೃದ್ಧಿಪಡಿಸಿ’ ಎಂದು ಅಥ್ಲೀಟ್‌ ಕೋಚ್‌ ಮನೋಹರ ಬಡಿಗೇರ, ಕ್ರಿಕೆಟ್‌ ಆಟಗಾರ ಮಹಾದೇವ ಶಿಂಧೆ, ವಾಲಿಬಾಲ್‌ ಆಟಗಾರ ರವಿ ನಾಯ್ಕರ್‌ ಮತ್ತಿತರರು ಜೋಶಿ ಅವರಿಗೆ ಮನವಿ ಮಾಡಿದರು.

ಆಟಗಾರರ ಮನವಿಗೆ ಪ್ರತಿಕ್ರಿಯಿಸಿದ ಜೋಶಿ, ‘ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆಯಡಿ ನೆಹರೂ ಮೈದಾನದ ಸಮಗ್ರ ಅಭಿವೃದ್ಧಿ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಮೂಲಸೌಲಭ್ಯ ಕಲ್ಪಿಸುವುದಕ್ಕಾಗಿ ಟೆಂಡರ್‌ ಸಹ ಕರೆಯಲಾಗಿದೆ. ಆದರೆ, ರಾಜ್ಯ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸದ ಕಾರಣ ಕಾಮಗಾರಿಗಳು ವಿಳಂಬವಾಗಿವೆ. ಚುನಾವಣೆ ಮುಗಿದ ಬಳಿಕ ಈ ಬಗ್ಗೆ ಗಮನಹರಿಸಲಾಗುವುದು’ ಎಂದು ಅವರು ಹೇಳಿದರು.

ಗೆಲುವು ನಿಶ್ಚಿತ: ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜೋಶಿ, ‘ಈ ಬಾರಿಯ ಚುನಾವಣೆಯಲ್ಲಿ ದಾಖಲೆ ಮತಗಳ ಅಂತರದಿಂದ ಐತಿಹಾಸಿಕ ಗೆಲುವು ಸಾಧಿಸುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮೂರು ಬಾರಿ ಸಂಸದನಾಗಿ ಜಿಲ್ಲೆಗೆ ಹಲವು ಯೋಜನೆಗಳನ್ನು ಕೇಂದ್ರದಿಂದ ತಂದಿದ್ದೇನೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜಿಲ್ಲೆಯ ಜನರಿಗಿರುವ ಅಭಿಮಾನವು ನನ್ನ ಗೆಲುವಿಗೆ ಪೂರಕವಾಗಲಿದೆ’ ಹೇಳಿದರು.

‘ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ವಿರುದ್ಧ ಎಫ್‌ಐಆರ್‌ ದಾಖಲಾಗುವುದಲ್ಲಿ ನಿಮ್ಮ ಪಾತ್ರ ಇದೆ’ ಎಂಬ ಆರೋಪ ಕೇಳಿಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಶಿ, ‘ವಿನಯ ವಿರುದ್ಧ ಎಫ್‌ಐಆರ್‌ ಆಗುವುದಕ್ಕೂ, ನನಗೂ ಸಂಬಂಧವಿಲ್ಲ. ಹೈಕೋರ್ಟ್‌ ನಿರ್ದೇಶನದ ಮೇರೆಗೆ ಕೇಸು ದಾಖಲಾಗಿದೆ. ಆದರೂ ಸಹ ಇದರಲ್ಲಿ ನನ್ನ ಕೈವಾಡವಿದೆ ಎಂದು ಹೇಳುವ ಮೂಲಕ ರಾಜಕೀಯ ಲಾಭ ಪಡೆಯಲು ಅವರು ಹವಣಿಸುತ್ತಿದ್ದಾರೆ. ಈ ಮೂಲಕ ನ್ಯಾಯಾಧೀಶರಿಗೆ ಅಗೌರವ ತೋರಿದ್ದಾರೆ’ ಎಂದು ಆರೋಪಿಸಿದರು.‌‌‌ 

ಲಿಂಗಾಯತ ಮುಖಂಡರೆಲ್ಲ ನಿಮ್ಮ ವಿರುದ್ಧ ಒಂದಾಗಿ ಕಾಂಗ್ರೆಸ್‌ ಅಭ್ಯರ್ಥಿ ಬೆಂಬಲಿಸುತ್ತಾರೆ ಎಂಬ ಎಂಬ ಸುದ್ದಿ ಹರಡಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕ್ಷೇತ್ರದ ಜನರು ಜಾತಿವಾದಿಗಳಲ್ಲ. ಒಂದು ವೇಳೆ ಜಾತಿವಾದಿಗಳಾಗಿದ್ದರೇ ನಾನು ಮೂರು ಬಾರಿ ಗೆಲ್ಲುತ್ತಿರಲಿಲ್ಲ. ಜಾತಿ ಆಧಾರದ ಮೇಲೆ ವೋಟಿಂಗ್‌ ಆಗುವುದಿಲ್ಲ’ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಬಸವರಾಜ ಕುಂದಗೋಳಮಠ, ಹನುಮಂತಪ್ಪ ದೊಡ್ಡಮನಿ, ಉಮೇಶ ದುಶಿ, ರಾಜು ಕೋರ್ಯಾಣಮಠ, ಮಹೇಂದ್ರ ಕೌತಾಳ, ಅಣ್ಣಪ್ಪ ಗೋಕಾಕ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !