ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಿಹಾಳ ಕಾರ್ಖಾನೆಯಲ್ಲಿ ಬಾಂಬ್‌ ತಯಾರಿಸುವ ರಾಸಾಯನಿಕ ಪತ್ತೆ?

ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿ ರವಾನೆ; ತೀವ್ರಗೊಂಡ ತನಿಖೆ
Last Updated 26 ಜುಲೈ 2022, 19:31 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಯುದ್ಧ ಹಾಗೂ ಗಣಿಗಾರಿಕೆಯಲ್ಲಿ ಬಳಸುವ ಸ್ಫೋಟದ ವಸ್ತು ತಯಾರಿಕೆಯಲ್ಲಿ ಬಳಕೆ ಮಾಡುವ ರಾಸಾಯನಿಕ ಪದಾರ್ಥವನ್ನು ತಾರಿಹಾಳ ಕೈಗಾರಿಕಾ ಪ್ರದೇಶದ ಮೆ. ಐ.ಸಿ. ಫ್ಲೇಮ್‌ ಸ್ಪಾರ್ಕಲ್‌ ಕ್ಯಾಂಡಲ್‌ ತಯಾರಿಕಾ ಕಾರ್ಖಾನೆಯಲ್ಲಿ ಉಪಯೋಗಿಸುತ್ತಿದ್ದರು ಎನ್ನುವ ಸಂಶಯ ಕೈಗಾರಿಕಾ ಅಧಿಕಾರಿಗಳಲ್ಲಿ ಮೂಡಿದೆ.

ಕಾರ್ಖಾನೆಗಳ ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳುಸ್ಫೋಟಗೊಂಡ ಕಾರ್ಖಾನೆಗೆ ಭೇಟಿ ನೀಡಿ, ಸುಟ್ಟು ಕರಕಲಾಗಿದ್ದ ರಾಸಾಯನಿಕ ಹಾಗೂ ಅರೆಬರೆ ಸುಟ್ಟಿರುವ ರಾಸಾಯನಿಕಗಳ ಮಾದರಿ ಸಂಗ್ರಹಿಸಿದ್ದಾರೆ. ಮುಂಜಾಗ್ರತೆಯಿಲ್ಲದೆ ಸಂಗ್ರಹಿಸಿಟ್ಟಿದ್ದ ರಾಸಾಯನಿಕಗಳ ಬ್ಯಾರೆಲ್‌ಗಳಲ್ಲಿ ಹಾಗೂ ಕೆಲವು ಸುಟ್ಟ ವಸ್ತುಗಳಲ್ಲಿ ಅಪಾಯಕಾರಿ ಬ್ಯುಟೊನಾಲ್‌ ಮತ್ತು ನೈಟ್ರೋ ಸೆಲಿಲೋಸ್‌ ರಾಸಾಯನಿಕ ಪದಾರ್ಥ ಕಂಡು ಬಂದಿದೆ. ಇವುಗಳ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಗನ್‌ಪೌಡರ್‌, ಬಾಂಬ್‌, ರಾಕೆಟ್‌, ಗಣಿಗಾರಿಕೆ, ಯುದ್ಧದಲ್ಲಿ ಸ್ಫೋಟಕ ವಸ್ತು ತಯಾರಿಸಲು ಈ ರಾಸಾಯನಿಕಗಳನ್ನು ಬಳಸಲು ಅವಕಾಶವಿದೆ. ಅವುಗಳ ಬಳಕೆಗೂ ನಿರ್ದಿಷ್ಟ ಪ್ರಮಾಣ, ಸಂಗ್ರಹ ಸ್ಥಳ, ಕೈಗೊಂಡ ಮುಂಜಾಗ್ರತೆ, ಬಳಕೆಯ ಉದ್ದೇಶ, ಕಾರ್ಮಿಕರ ಸುರಕ್ಷತೆ ಪರಿಶೀಲಿಸಿ ಅನುಮತಿ ನೀಡಲಾಗುತ್ತದೆ. ಪರಿಸರ ಇಲಾಖೆ, ಕೈಗಾರಿಕೆ ಸುರಕ್ಷತಾ ಇಲಾಖೆ, ಪೊಲೀಸ್‌ ಇಲಾಖೆ, ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಪ್ರಮಾಣ ಪತ್ರ ನೀಡುತ್ತಾರೆ. ಆದರೆ, ಸ್ಪಾರ್ಕಲ್‌ ಕ್ಯಾಂಡಲ್‌ ಕಾರ್ಖಾನೆ ಮಾಲೀಕರು ಇದ್ಯಾವುದೇ ಪ್ರಮಾಣ ಪತ್ರ ಪಡೆಯದೆ, ಅನಧಿಕೃತವಾಗಿ ಅಪಾಯಕಾರಿ ರಾಸಾಯನಿಕ ಬಳಕೆ ಮಾಡಿರುವುದು ಕಂಡುಬಂದಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾರ್ಖಾನೆ ಸುರಕ್ಷತೆ ಜಂಟಿ ನಿರ್ದೇಶಕ ರವೀಂದ್ರನಾಥ ರಾಥೋಡ, ‘ಅಗ್ನಿ ಅವಘಡ ನಡೆದ ಕಾರ್ಖಾನೆಯಲ್ಲಿ ಅಪಾಯಕಾರಿ ರಾಸಾಯನಿಕ ಬಳಕೆ ಮಾಡುತ್ತಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಅವಘಡ ನಡೆದ ಸ್ಥಳದಲ್ಲಿ ಬ್ಯುಟೊನಾಲ್‌ ರಾಸಾಯನಿಕ ಹೆಸರಿರುವ ಬ್ಯಾರೆಲ್‌ ದೊರಕಿದೆ. ಇತರ ರಾಸಾಯನಿಕಗಳ ಮಾದರಿಗಳನ್ನು ಸಹ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಬ್ಯುಟೊನಾಲ್‌ ಬಳಸುತ್ತಿದ್ದರೆ ಅದು ಅಪರಾಧ. ವರದಿ ಬಂದ ನಂತರವೇ ಸತ್ಯ ತಿಳಿಯಲಿದೆ’ ಎಂದರು.

ರಾಸಾಯನಿಕ ಮಾಫಿಯಾ ನಂಟು?

ಕಟ್ಟಡ ಬಾಡಿಗೆ ಪಡೆದು ಕಾರ್ಖಾನೆ ನಡೆಸುತ್ತಿದ್ದ ಮುಂಬೈ ಮೂಲದ ಮಾಲೀಕ, ಪ್ರಮುಖ ಆರೋಪಿ ಅಬ್ದುಲ್‌ ಶೇಕ್‌ ಇನ್ನೂ ಪತ್ತೆಯಾಗಿಲ್ಲ. ಆದರೆ, ಕಾರ್ಖಾನೆ ವ್ಯವಸ್ಥಾಪಕ ಮಂಜುನಾಥ ಹರಿಜನ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಕೆಲವು ಅಚ್ಚರಿಯ ಮಾಹಿತಿಗಳು ದೊರೆತಿವೆ.

‘ಕಾರ್ಖಾನೆಗೆ ಸಂಬಂಧಿಸಿದ್ದ ಎಲ್ಲ ವ್ಯವಹಾರಗಳನ್ನು ಮಂಜುನಾಥ ನೋಡಿಕೊಳ್ಳುತ್ತಿದ್ದ. ಸ್ಪಾರ್ಕಲ್‌ ತಯಾರಿಕೆಗೆ ಅಗತ್ಯವಿದ್ದ ರಾಸಾಯನಿಕಗಳನ್ನು ಮುಂಬೈ, ಕೋಲ್ಕತ್ತಾ, ದೆಹಲಿ, ಚೆನ್ನೈಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಕಡಿಮೆ ಬೆಲೆಗೆ ಸಿಗುವ ಅಪಾಯಕಾರಿ ರಾಸಾಯನಿಕಗಳನ್ನೇ ಸ್ಪಾರ್ಕಲ್‌ ತಯಾರಿಸಲು ಬಳಸುತ್ತಿದ್ದರು. ರಾಸಾಯನಿಕ ತರುವ ವಾಹನಗಳು ಕಾರ್ಖಾನೆಗೆ ಹೆಚ್ಚಾಗಿ ರಾತ್ರಿಯೇ ಬರುತ್ತಿದ್ದವು ಎನ್ನುವ ಮಾಹಿತಿ ಲಭ್ಯವಾಗಿದೆ. ಇದರ ಹಿಂದೆ ರಾಸಾಯನಿಕ ಮಾಫಿಯಾ ಇದೆಯೇ ಎನ್ನುವ ಸಂಶಯ ಸಹ ವ್ಯಕ್ತವಾಗುತ್ತಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT