ಮಂಗಳವಾರ, ಜನವರಿ 26, 2021
24 °C

PV Web Exclusive | ಅವಳಿನಗರದ ಬಿಆರ್‌ಟಿಎಸ್‌ಗೆ ದೇಶದಲ್ಲಿಯೇ ಅಗ್ರಸ್ಥಾನ !

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ– ಧಾರವಾಡ ಅವಳಿ ನಗರದ ಪ್ರಯಾಣಿಕರು ನೀಡಿದ ಅಭೂತಪೂರ್ವ ಪ್ರೋತ್ಸಾಹದಿಂದ ಬಿಆರ್‌ಟಿಎಸ್‌ ಸಾರಿಗೆ ವ್ಯವಸ್ಥೆ ದೇಶದಲ್ಲಿಯೇ ಅತ್ಯುತ್ತಮ ಸಾರಿಗೆ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಕೊರೊನಾ ನಂತರ ಚೇತರಿಸಿಕೊಳ್ಳುವುದರಲ್ಲಿಯೂ ಮುಂಚೂಣಿಯಲ್ಲಿದ್ದು, ದೇಶದ ಪ್ರಮುಖ 2ನೇ ಹಂತದ ಮಹಾನಗರಗಳಾದ ಪುಣೆ, ಅಹಮದಾಬಾದ್‌, ಸೂರತ್, ವಡೋದರ ನಗರದಲ್ಲಿರುವ ಬಿಆರ್‌ಟಿಎಸ್‌ ಅನ್ನು ಹಿಂದಿಕ್ಕಿದೆ. ಪ್ರಯಾಣಿಕರ ದಟ್ಟಣೆ ಆಧಾರದ ಮೇಲೆ ಹೇಳುವುದಾದರೆ ಸದ್ಯಕ್ಕೆ ದೇಶದಲ್ಲಿಯೇ ಅಗ್ರಸ್ಥಾನಕ್ಕೇರಿದೆ.

ಪ್ರಯಾಣಿಕರಿಗೆ ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ವಿಶ್ವ ಬ್ಯಾಂಕ್‌, ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ  ಬಿಆರ್‌ಟಿಎಸ್‌ (ಬಸ್‌ ರ‍್ಯಾಪಿಡ್‌ ಟ್ರಾನ್ಸಿಟ್‌ ಸಿಸ್ಟಂ) 2018ರಲ್ಲಿ ಆರಂಭಿಸಿತ್ತು. ವೇಗವಾಗಿ ಓಡುವ ಈ ಬಸ್‌ಗಳಿಗೆ ‘ಚಿಗರಿ’ ಎಂತಲೂ ಹೆಸರಿಟ್ಟಿದ್ದಾರೆ. ವಿಶಿಷ್ಟ ವಿನ್ಯಾಸದ ಇಂತಹ 100 ಬಸ್‌ಗಳಿವೆ. ಕೊರೊನಾ ನಂತರ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದ್ದರಿಂದ ಈಗ 80 ಬಸ್‌ಗಳು ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಇನ್ನುಳಿದ ಬಸ್‌ಗಳನ್ನೂ ರಸ್ತೆಗೆ ಇಳಿಸಲು ಬಿಆರ್‌ಟಿಎಸ್‌ ಸಿದ್ಧವಾಗಿದೆ.  

ಕೊರೊನಾಕ್ಕಿಂತ ಮುಂಚೆ ಪ್ರತಿದಿನ ಸರಾಸರಿ 80 ಸಾವಿರ ಜನರು (ವಿದ್ಯಾರ್ಥಿಗಳು ಸೇರಿ) ಪ್ರಯಾಣಿಸುತ್ತಿದ್ದರು. ₹ 9 ಲಕ್ಷ ಆದಾಯ ಬರುತ್ತಿತ್ತು. ಲಾಕ್‌ಡೌನ್‌ ಅವಧಿಯಲ್ಲಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಎರಡು ತಿಂಗಳ ನಂತರ ಸಂಚಾರ ಪುನರಾರಂಭಗೊಂಡಿತು. ಹಂತ ಹಂತವಾಗಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ. ಈಗ ಪ್ರತಿದಿನ 26 ಸಾವಿರ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಸರಾಸರಿ ₹ 7 ಲಕ್ಷ ಆದಾಯ ಬರುತ್ತಿದೆ. ಕಾಲೇಜುಗಳು ಈಗಷ್ಟೇ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳೂ ಪ್ರಯಾಣಿಸಲು ಆರಂಭಿಸಿದರೆ ಒಟ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಬಹುದು.  

ಅತ್ಯುತ್ತಮ ಸಾರಿಗೆ ವ್ಯವಸ್ಥೆಗಾಗಿ ಕೇಂದ್ರ ಸರ್ಕಾರ ನೀಡುವ ‘ಬೆಸ್ಟ್‌ ಅರ್ಬನ್‌ ಮಾಸ್ ಟ್ರಾನ್ಸಿಟ್ ಪ್ರಾಜೆಕ್ಟ್‌– 2019’ ಪ್ರಶಸ್ತಿ ಸಿಕ್ಕಿರುವುದು ‘ಚಿಗರಿ’ಗೆ ‘ಕೊಂಬು’ ಮೂಡಿಸಿದೆ. ಬೆಂಗಳೂರು– ಚೆನ್ನೈನ ಮೆಟ್ರೊ ರೈಲು ಸಾರಿಗೆ ವ್ಯವಸ್ಥೆಯನ್ನು ಹಿಂದಿಕ್ಕಿ ಈ ಪ್ರಶಸ್ತಿ ದಕ್ಕಿಸಿಕೊಂಡಿರುವುದು ಕಡಿಮೆ ಸಾಧನೆ ಏನಲ್ಲ.

ಐಶಾರಾಮಿ ಕಾರಿನಲ್ಲಿದ್ದಂತೆ

‘ನಾನು ಇದೇ ಮೊದಲ ಬಾರಿಗೆ ‘ಚಿಗರಿ’ ಬಸ್‌ನಲ್ಲಿ ಸಂಚರಿಸಿದೆ. ವೇಗ, ಎ.ಸಿ ನೋಡಿದರೆ ಐಶಾರಾಮಿ ಕಾರಿನಲ್ಲಿ ಕುಳಿತಂತೆ ಭಾಸವಾಯಿತು’ ಎಂದು ದೇವರಹುಬ್ಬಳ್ಳಿಯ ಮಂಜುನಾಥ ಅಂಗಡಿ ಪ್ರತಿಕ್ರಿಯಿಸಿದರು.

ಅಗ್ರಸ್ಥಾನ

‘ಕೊರೊನಾ ಲಾಕ್‌ಡೌನ್‌ ನಂತರ ಅವಳಿ ನಗರದ ಬಿಆರ್‌ಟಿಎಸ್‌ ಚೇತರಿಸಿಕೊಂಡಿದೆ. ಇತರ ನಗರಗಳಲ್ಲಿರುವ ಬಿಆರ್‌ಟಿಎಸ್‌ಗಿಂತಲೂ ಹೆಚ್ಚಿನ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಸದ್ಯಕ್ಕೆ ಅಗ್ರಸ್ಥಾನ ಸ್ಥಾನಕ್ಕೇರಿದೆ’ ಎಂದು ಹುಬ್ಬಳ್ಳಿ– ಧಾರವಾಡ ನಗರ ಸಾರಿಗೆ ವಿಭಾಗದ ವಿಭಾಗೀಯ ಸಂಚಾರ ಅಧಿಕಾರಿ ಕೆಂಪಣ್ಣ ಗುಡೆನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಆರ್‌ಟಿಎಸ್‌ ಬಸ್‌ ನಿಲ್ದಾಣಗಳ ಬಳಿ ಪ್ರಯಾಣಿಕರ ಬೈಕ್‌, ಕಾರ್‌ ಪಾರ್ಕಿಂಗ್‌ ಮಾಡಲು ಜಾಗ ಒದಗಿಸುವ ಬಗ್ಗೆ ಚಿಂತನೆ ನಡೆದಿದೆ. ಬಸ್‌ ನಿಲ್ದಾಣಗಳಿಂದ ದೂರ ವಾಸವಿರುವವರು ನಿಲ್ದಾಣಗಳವರೆಗೆ ತಮ್ಮ ವಾಹನಗಳಲ್ಲಿ ಬಂದು, ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿ ಬಸ್‌ ಏರಲು ಅನುಕೂಲ ಮಾಡಿಕೊಡಬೇಕೆನ್ನುವುದು ಇದರ ಉದ್ದೇಶ. ಇದು ಸಾಕಾರವಾದರೆ, ಪ್ರಯಾಣಿಕರ ಸಂಖ್ಯೆ ಇನ್ನೂ ಹೆಚ್ಚಳವಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು