ಗೌರಮ್ಮ ಕಟ್ಟಿಮನಿ
ಹುಬ್ಬಳ್ಳಿ: ಮೊಮ್ಮಗ ಸಾಲಿಯಿಂದ ಇನ್ನೇನ ಬರೋ ಹೊತ್ತಾತು ಅವನ ಸಮಂದ ಕಾಯಾಕತ್ತೇನಿ, ದವಾಖಾನಿಗ ಹೋಗೋದ ಬಿಟ್ಟ...ಮೊನ್ನೆ ಒಂದ ಹುಡುಗಿ ಈ ಕಟ್ಟಿಗೆ ಮೇಲಿಂದ ಆ ಕಡೆ ದಾಟಾಕ ಹೋಗಿ ನಾಲಾದಾಗ ಬಿದ್ದಬಿಡ್ತ ಪುಣ್ಯಕ ಹೆಚ್ಚ ಪೆಟ್ಟ ಆಗಿಲ್ಲ...ಈ ಕೆಲಸ ಪೂರ್ತಿ ಆಗೋತನಾ ದಿನಾ ಹಿಂಗ ಕಾಯಬೇಕಾದ ಪರಿಸ್ಥಿತಿ ಐತ್ರಿ.
ಹುಬ್ಬಳ್ಳಿಯ ವಾರ್ಡ್ ಸಂಖ್ಯೆ 54ರ ಹೆಗ್ಗೇರಿ ಸಿದ್ಧಾರೂಢ ನಗರದ ನಿವಾಸಿ ಭಾರತಮ್ಮ ಗೋಲಪತ್ರಿ ಮನೆ ಮುಂದೆ ನಡೆಯುತ್ತಿರುವ ನಾಲಾ ಕಾಮಗಾರಿ ಕುರಿತು ಹೇಳಿದ ಮಾತುಗಳಿವು.
ಇಂಡಿ ಪಂಪ್‌ನಿಂದ ದ್ಯಾಮವ್ವ ದೇವಿ ಗುಡಿವರೆಗಿನ ಹಳೆಯ ನಾಲಾ ದುರಸ್ತಿ ಕಾರ್ಯವನ್ನು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಕೈಗೊಂಡಿದ್ದು, ಮಂದಗಾತಿಯಲ್ಲಿ ಸಾಗಿದೆ. ವರ್ಷದ ಹಿಂದೆ ಭೂಮಿ ಪೂಜೆಯಾಗಿದ್ದರೂ ಕಾಮಗಾರಿ ಆರಂಭವಾಗಿದ್ದು ಎರಡು ತಿಂಗಳ ಹಿಂದೆ. ಸುತ್ತಮುತ್ತಲೂ ಅಂಗಡಿ ಮುಂಗಟ್ಟುಗಳಿವೆ.
‘ಕಾಮಗಾರಿ ಸ್ಥಳದ ಸುತ್ತಮುತ್ತ ಯಾವುದೇ ಯಾವುದೇ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿಲ್ಲ. ಸ್ಥಳೀಯರಿಗೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆಯೂ ಸಮರ್ಪಕವಾಗಿ ತಿಳಿಸಿಲ್ಲ. ಮಳೆ ಬಂದಾಗಲೆಲ್ಲ, ನಾಲಾದಲ್ಲಿ ನೀರಿನ ಹರಿವು ಹೆಚ್ಚಿರುತ್ತದೆ. ಎಷ್ಟೇ ಎಚ್ಚರಿಕೆ ವಹಿಸಿದರೂ ಅಪಾಯವಾಗುವ ಹೆದರಿಕೆ ಇರುತ್ತದೆ’ ಎಂದು ನಿವಾಸಿಗಳು ಹೇಳುತ್ತಾರೆ.
‘ಕಾಮಗಾರಿ ಮಾಡುವುದರ ಜೊತೆಗೆ ಜನರ ಸುಗಮ ಓಡಾಟಕ್ಕೆ ಪಿಡಬ್ಲ್ಯೂಡಿ ಇಲಾಖೆಯವರು ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಅವರು ಪೂರಕ ಕೆಲಸಗಳನ್ನು ಮಾಡದ ಕಾರಣ ನಾವೇ ತಾತ್ಕಾಲಿಕ ಸೇತುವೆ ಸೌಲಭ್ಯ ಕಲ್ಪಿಸಿಕೊಂಡಿದ್ದೇವೆ. ಅದರ ಮೇಲೆ ಕಾಲಿಟ್ಟರೆ, ಅದು ಮುರಿದು ಬೀಳುವುದೆಂದು ಹೆದರಿಕೆ ಆಗುತ್ತದೆ. ಅದರ ಮೇಲೆ ನಡೆಯುವಾಗ, ಕೆಲವರು ಆಯ ತಪ್ಪಿ ಕೆಳಗಡೆ ಬಿದ್ದು ಗಾಯಗೊಂಡಿದ್ದಾರೆ’ ಎಂದು ಸ್ಥಳೀಯರು ತಿಳಿಸಿದರು.
‘ಇಲ್ಲಿ 1,200ಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಆದರೆ, ವಾಸಿಸಲು ಯೋಗ್ಯ ವಾತಾವರಣ ಇಲ್ಲ. ಮೂಲಸೌಕರ್ಯಗಳಿಲ್ಲ. ಏಳು ದಿನಕ್ಕೊಮ್ಮೆ ರಾತ್ರಿ 9 ಅಥವಾ 10ಕ್ಕೆ ಕುಡಿಯುವ ನೀರು ಪೂರೈಸಲಾಗುತ್ತದೆ. ಕೆಲವರು ಹೊರಗಡೆ ಕೆಲಸ ಮಾಡಿದರೆ, ಇನ್ನೂ ಕೆಲವರು ಹೊರಗಡೆ ಮಾಡಿಕೊಂಡು ಬಂದು ದಣಿದಿರುತ್ತಾರೆ. ಎಲ್ಲಾ ಸುಸ್ತು ಮರೆತು ನೀರು ತುಂಬಿಸಿಕೊಳ್ಳಬೇಕು. ಇಲ್ಲದಿದ್ದರೆ, ಕುಡಿಯಲು ಮತ್ತು ಸಂಗ್ರಹಿಸಿ ಇಟ್ಟುಕೊಳ್ಳಲು ನೀರೇ ಇರುವುದಿಲ್ಲ’ ಎಂದು ನಿವಾಸಿ ಮೀರಾ ಗಚ್ಚಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಚರಂಡಿಯಲ್ಲಿ ನಿಲ್ಲುವ ನೀರನ್ನು ಸರಾಗವಾಗಿ ಹರಿಯುವಂತೆ ಮಾಡಲು ಮತ್ತು ತ್ಯಾಜ್ಯ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಪದೇ ಪದೇ ಮನವಿ ಮಾಡಿಕೊಂಡಿದ್ದೇವೆ. ಆದರೆ, ಅವರಿಂದ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಇಕ್ಕಟ್ಟಾದ ಜಾಗದಲ್ಲಿ ನಮ್ಮ ಮನೆಗಳಿವೆ. ಚರಂಡಿ ತುಂಬಿದರೆ ಗಲೀಜು ನೀರು ಮನೆಯೊಳಗೆ ನುಗ್ಗುತ್ತದೆ. ದುರ್ವಾಸನೆ ಹೆಚ್ಚುತ್ತದೆ. ಜೊತೆಗೆ ಸೊಳ್ಳೆಗಳ ಕಾಟವೂ ಸಹಿಸಲು ಆಗಲ್ಲ’ ಎಂದು ನಿವಾಸಿ ರೇಣುಕಾ ಚಿನಗುಂಟಿಪಲ್ಲಿ ಹೇಳಿದರು.
ಇದರ ಬಗ್ಗೆ ಪ್ರತಿಕ್ರಿಯೆ ಪಡೆಯಲು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅವರು ಲಭ್ಯವಾಗಿಲ್ಲ.
ನಾಲಾ ಕಾಮಗಾರಿಯಿಂದ ಸುತ್ತಿ ಬಳಸಿ ಓಡಾಡಬೇಕಾಗಿದೆ ಸಮಯ ವ್ಯರ್ಥವಾಗುತ್ತದೆ. ಮಕ್ಕಳಿಗೆ ಶಾಲೆಗೆ ಹೋಗಲು ತೊಂದರೆಯಾಗುತ್ತಿದೆ. ಶೀಘ್ರ ಕಾಮಗಾರಿ ಮುಗಿಸಲಿ.ಶಶಿಕಲಾ ದೊಡ್ಡಮನಿ ಗೃಹಿಣಿ ಹೆಗ್ಗೇರಿ ಸಿದ್ಧಾರೂಢ ನಗರ
‘ಒಳಚರಂಡಿ ಸಮಸ್ಯೆಯಿಂದ ಮಂದ ಕಾಮಗಾರಿ’ ‘ಹೆಗ್ಗೇರಿ ಸಿದ್ಧಾರೂಢ ನಗರ ದೇವರಾಜ ನಗರ ಮಧ್ಯೆ 220 ಮೀಟರ್ ಉದ್ದದ ನಾಲಾ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ಜನರಿಗೆ ತೊಂದರೆ ಆಗುತ್ತಿದ್ದು ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಒತ್ತಡ ಹೇರುತ್ತಿದ್ದೇವೆ. ಆದರೆ ಒಳಚರಂಡಿ ಸಂಪರ್ಕ ಸಂಬಂಧಿಸಿದ ಸಮಸ್ಯೆಯಿಂದ ಕಾಮಗಾರಿ ಮಂದವಾಗಿರುವುದಾಗಿ ಗುತ್ತಿಗೆದಾರರು ಹೇಳಿದ್ದಾರೆ’ ಎಂದು ವಾರ್ಡ್ ಸದಸ್ಯೆ ಸರಸ್ವತಿ ವಿನಾಯಕ ದೊಂಗಡೆ ‘ಪ್ರಜಾವಾಣಿ’ಗೆ ತಿಳಿಸಿದರು. ‘ಹೊಸ ಸರ್ಕಾರ ಈ ಹಿಂದಿನ ಕಾಮಗಾರಿಗಳಿಗೆ ಬಿಲ್ ಪಾವತಿಗೆ ತಡೆಯಾಜ್ಞೆ ನೀಡಿದ್ದರಿಂದ ನಡುವೆ ಕಾಮಗಾರಿ ಸ್ಥಗಿತವಾಗಿತ್ತು. ನಿತ್ಯ ಗುತ್ತಿಗೆದಾರರ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿದ್ದೇನೆ. ವಾರ್ಡ್ ಜನರು ಯಾವುದೇ ಸಮಸ್ಯೆ ನನ್ನ ಗಮನಕ್ಕೆ ತಂದಲ್ಲಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ’ ಎಂದರು.
24 ಗಂಟೆ ಬೆಳಗುವ ಬೀದಿ ದೀಪ ‘ಇಲ್ಲಿಯ ಓಣಿಯ ಒಳಗಡೆ 6 ತಿಂಗಳಿನಿಂದ ಎರಡು ಬೀದಿ ದೀಪಗಳು ದಿನದ 24 ಗಂಟೆಯೂ ಬೆಳಗುತ್ತಲೇ ಇರುತ್ತವೆ. ಇದರ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ನಿವಾಸಿಗಳು ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.