ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಳ್ನಾವರ: ಗಣೇಶ ಹಬ್ಬ,ಈದ್ ಮಿಲಾದ್ ಸೌಹಾರ್ದದಿಂದ ಆಚರಿಸಿ-ಪೊಲೀಸ್‌ ವರಿಷ್ಠಾಧಿಕಾರಿ

Published 27 ಆಗಸ್ಟ್ 2024, 14:18 IST
Last Updated 27 ಆಗಸ್ಟ್ 2024, 14:18 IST
ಅಕ್ಷರ ಗಾತ್ರ

ಅಳ್ನಾವರ: ‘ಹಬ್ಬಗಳ ಆಚರಣೆಯಲ್ಲಿ ದುಂದು ವೆಚ್ಚಗಳಿಗೆ ಅವಕಾಶ ನೀಡದೆ ಧಾರ್ಮಿಕತೆ ಸಾರುವಂತಿರಬೇಕು. ಭಾವೈಕ್ಯ ಬಿತ್ತುವ ಮೂಲಕ ಇತರರಿಗೆ ಮಾದರಿಯಾಗುವ ರೀತಿಯಲ್ಲಿಆಚರಣೆ ಮಾಡಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಹೇಳಿದರು.

ಇಲ್ಲಿನ ವೀರಶೈವ ಸಭಾಭವನದಲ್ಲಿ ಸೋಮವಾರ ನಡೆದ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ನಿಷೇಧಿತ ಧ್ವನಿವರ್ಧಕಗಳ ಬಳಕೆ ಮಾಡುವ ಬದಲು ಗ್ರಾಮೀಣ ಕಲೆ ಸಂಸ್ಕೃತಿ ಬಿಂಬಿಸುವ
ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಸಾಂಸ್ಕೃತಿಕ ಚಟುವಟಿಕೆ ಹಮ್ಮಿಕೊಳ್ಳಬೇಕು. ಸ್ಥಳಿಯ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು’ ಎಂದರು.

‘ಸುವ್ಯವಸ್ಥಿತವಾಗಿ ನಿರ್ವಹಣೆ ಮಾಡಿದ ಮೂರು ಗಣೇಶ ಮಂಡಳಿಗೆ ಸೂಕ್ತ ಬಹುಮಾನವನ್ನು ನೀಡಲಾಗುವುದು ಜೊತೆಗೆ ಶಾಂತಿ ಕದಡಲು ಪ್ರಯತ್ನಿಸುವ ಕಿಡಿಗೇಡಿಗಳ ಮೇಲೆ ನಿಗಾ ವಹಿಸಲಾಗುತ್ತದೆ. ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು. ವಾಹನ ಸವಾರರರು ಎಚ್ಚರಿಕೆಯ ನಡೆ ಅನುಸರಿಸಬೇಕು’ ಎಂದರು.

ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಮಾತನಾಡಿ, ‘ ಸಾರ್ವಜನಿಕ ಗಣೇಶನ ಮೂರ್ತಿಗಳನ್ನು ನಿಗದಿತ ಸ್ಥಳದಲ್ಲಿ ಯಾರಿಗೂ ತೊಂದರೆಯಾಗದಂತೆ ಪ್ರತಿಷ್ಠಾಪಿಸಬೇಕು. ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆಯುವುದು ಕಡ್ಡಾಯ. ಅಲೆದಾಟ ತಪ್ಪಿಸಲು ಏಕ ಗವಾಕ್ಸಿ ಪದ್ದತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ನಿಗದಿತ ಸಮಯದೊಳಗೆ ಪರಿಶೀಲನೆ ಮಾಡಿ ಅನುಮತಿ ನೀಡಲು ಕ್ರಮ ಕೈಕೊಳ್ಳಲಾಗುವುದು ಮತ್ತು ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗಣೇಶ ಮೂರ್ತಿಗಳ ಬಳಕೆ ಮಾಡಬಾರದು. ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು’ ಎಂದರು.

ಸಭೆಯಲ್ಲಿ ವಿವಿಧ ಸಮಾಜದ ಮುಖಂಡರು ಅಭಿಪ್ರಾಯಗಳನ್ನು ಹಂಚಿಕೊಂಡರು. ಹೆಚ್ಚುವರಿ ವರಿಷ್ಠಾಧಿಕಾರಿ ನಾರಾಯಣ ಭರಮನಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪ್ರಕಾಶ ಮಗದಮು, ಸಿ.ಪಿ.ಐ. ಟಿ.ಮುರುಗೇಶ, ಪಿ.ಎಸ್.ಐ, ಪ್ರವೀಣ ನೇಸರಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT