ಸೋಮವಾರ, ಅಕ್ಟೋಬರ್ 26, 2020
23 °C
ಕಾಯ್ದೆ ತಿದ್ದುಪಡಿ ಕುರಿತು ವರ್ತಕರ ಜೊತೆ ಚರ್ಚೆ: ಕರಿಗೌಡ ಅಭಿಮತ

ಎಪಿಎಂಸಿ ನಿರ್ವಹಣೆಗೆ ಸೆಸ್‌ ಅನಿವಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಎಪಿಎಂಸಿ ಪದ್ಧತಿ ಮುಂದುವರಿಸಿಕೊಂಡು ಹೋಗಲು ಮತ್ತು ನಿರ್ವಹಣೆ ಮಾಡಲು ವ್ಯಾಪಾರಿಗಳಿಂದ ಸೆಸ್‌ ಸಂಗ್ರಹ ಅನಿವಾರ್ಯ ಎಂದು’ ಕೃಷಿ ಮಾರಾಟ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ ಹೇಳಿದರು.

ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಶುಕ್ರವಾರ ಎಪಿಎಂಸಿ ತಿದ್ದುಪಡಿ ಕಾಯ್ದೆ ಕುರಿತು ವರ್ತಕರ ಜೊತೆ ಸಂವಾದ ನಡೆಸಿದ ಅವರು ವರ್ತಕರ, ರೈತರ ಮತ್ತು ಮಾಲೀಕರ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದರು.

ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಿಂದ ವರ್ತಕರು ಪಾಲ್ಗೊಂಡಿದ್ದರು. ಇದರಲ್ಲಿ ಬಹುತೇಕ ವರ್ತಕರು ‘ವ್ಯಾಪಾರಿಗಳಿಗೆ ಸೆಸ್‌ ಹೊರೆಯಾಗುತ್ತಿದೆ. ಇದನ್ನು ಕಡಿಮೆ ಮಾಡಬೇಕು’ ಎಂದು ಆಗ್ರಹಿಸಿದರೆ, ಇನ್ನೂ ಕೆಲವರು ‘ಸೆಸ್‌ ಕಟ್ಟಲು ತಯಾರಿದ್ದೇವೆ. ಚೆನ್ನಾಗಿ ನಿರ್ವಹಣೆ ಮಾಡಬೇಕು’ ಎಂದೂ ಕೋರಿದರು.

ಈ ಪ್ರಶ್ನೆಗಳಿಗೆ ಕರಿಗೌಡ, ‘ರಾಜ್ಯದಲ್ಲಿ 162 ಎಪಿಎಂಸಿಗಳಿದ್ದು, 6,400 ಎಕರೆಗಿಂತಲೂ ಹೆಚ್ಚಿನ ಜಾಗವಿದೆ. 30 ಸಾವಿರ ಜನ ವ್ಯಾಪಾರಿಗಳಿದ್ದಾರೆ. ಇಷ್ಟೆಲ್ಲ ನಿರ್ವಹಣೆಗೆ ಸೆಸ್‌ ಸಂಗ್ರಹ ಅನಿವಾರ್ಯ’ ಎಂದರು.

‘ಹಿಂದೆ ಶೇ 1.5ರಷ್ಟು ಸೆಸ್‌ ಸಂಗ್ರಹವಿದ್ದಾಗ ಇದನ್ನು ತೆಗೆದು ಹಾಕಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸೇರಿದಂತೆ ಹಲವಾರು ಸಂಸ್ಥೆಗಳು ಒತ್ತಾಯಿಸಿದ್ದವು. ನಮ್ಮ ಮಂಡಳಿ 50 ಪೈಸೆ ಸೆಸ್‌ ವಿಧಿಸಬೇಕು ಎಂದು ಕೋರಿತ್ತು. ಸರ್ಕಾರ ಅಂತಿಮವಾಗಿ 35 ಪೈಸೆ ಸೆಸ್‌ ವಿಧಿಸಿತ್ತು’ ಎಂದರು.

ಸ್ಥಳೀಯ ಆಡಳಿತ ಸಂಸ್ಥೆಗಳು ಎಪಿಎಂಸಿಗಳಿಗೆ ಸಾಕಷ್ಟು ತೆರಿಗೆ ವಿಧಿಸುತ್ತಿವೆ. ಸೆಸ್‌ ಜೊತೆಗೆ ಈ ತೆರಿಗೆ ಹೊರೆಯಾಗುತ್ತದೆ. ತೆರಿಗೆ ಪಡೆಯುವ ನಗರಸಭೆ, ಪಾಲಿಕೆಗಳು ಎಪಿಎಂಸಿ ಪ್ರಾಂಗಣ ನಿರ್ವಹಣೆ ಮಾಡುವುದಿಲ್ಲ, ಮೂಲ ಸೌಕರ್ಯಗಳನ್ನೂ ಕಲ್ಪಿಸುವುದಿಲ್ಲ. ಹೀಗಾದರೆ ನಾವು ಯಾಕೆ ತೆರಿಗೆ ಕಟ್ಟಬೇಕು? ಎಂದು ಬಹಳಷ್ಟು ವರ್ತಕರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕರಿಗೌಡ ‘ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಜೊತೆ ಈ ಕುರಿತು ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.

ಗದುಗಿನ ರೈತ ದೇಸಾಯಿ ಎಂಬುವರು ‘ಸೆಸ್‌ ನೀಡುವುದು ಎಪಿಎಂಸಿ ನಿರ್ವಹಣೆಗೆ. ಆದ್ದರಿಂದ ಸೆಸ್ ಬದಲು ನಿರ್ವಹಣಾ ಶುಲ್ಕ’ ಎಂದು ಹೆಸರು ಬದಲಿಸಲು ‌ಕೋರಿದರು. ರಾಣೆಬೆನ್ನೂರು ವರ್ತಕರ ಸಂಘದ ಅಧ್ಯಕ್ಷ ಉಪ್ಪಿನ ಅವರು ‘ಸೆಸ್ ಜೊತೆಗೆ ಆವರ್ತ ನಿಧಿಯನ್ನೂ ಯಾಕೆ ಸಂಗ್ರಹಿಸಲಾಗುತ್ತಿದೆ. ಇದರಿಂದ ವರ್ತಕರಿಗೆ ಹೊರೆಯಾಗುತ್ತಿದೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಕರಿಗೌಡ ‘ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದಾಗ ರೈತರಿಗೆ ಬೆಂಬಲ ಬೆಲೆ ನೀಡಲು ಆವರ್ತ ನಿಧಿ ಬಳಸಲಾಗುತ್ತದೆ. ಆಗ ರೈತರಿಗೆ ಬಡ್ಡಿಸಮೇತ ಹಣ ವಾಪಸ್‌ ಸಿಗುತ್ತದೆ’ ಎಂದರು.

ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಪದಾಧಿಕಾರಿಗಳಾದ ಶಂಕರಣ್ಣ ಮುನವಳ್ಳಿ, ಜಿ.ಜಿ. ಹೊಟ್ಟಿಗೌಡರ,  ಅಶೋಕ ಎಸ್‌. ಗಡಾದ, ಉಮೇಶ ಎಂ. ಗಡಾದ, ಅಶೋಕ ಗಡಾದ ಇದ್ದರು.

ರಾಜ್ಯದ ಎರಡು ಮಾರುಕಟ್ಟೆ ಇನಾಮ್‌ಗೆ ಜೋಡಣೆ

ವ್ಯಾಪಾರಿಗಳು ಇನಾಮ್‌ನಲ್ಲಿ (ಇ ರಾಷ್ಟ್ರೀಯ ಕೃಷಿ ಮಾರುಕಟ್ಟೆ) ಹೆಸರು ನೋಂದಾಯಿಸಿದರೆ ದೇಶದಲ್ಲಿ ಎಲ್ಲಿಯಾದರೂ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಕೇಂದ್ರ ಸರ್ಕಾರ ಎಲ್ಲ ಎಪಿಎಂಸಿಗಳನ್ನು ಇನಾಮ್‌ಗೆ ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಿದೆ ಎಂದು ಕರಿಗೌಡ ಹೇಳಿದರು.

ರಾಜ್ಯದಲ್ಲಿ ಈ ಕುರಿತು ಪ್ರಕ್ರಿಯೆ ನಡೆಯುತ್ತಿದ್ದು ಮೊದಲ ಹಂತದಲ್ಲಿ ಕಲಬುರ್ಗಿ ಮತ್ತು ಚಿಂಚೋಳಿ ಮಾರುಕಟ್ಟೆಯನ್ನು ಇನಾಮ್‌ಗೆ ಜೋಡಣೆ ಮಾಡಲಾಗಿದೆ ಎಂದರು.

ಎಪಿಎಂಸಿಯಲ್ಲಿ ದಲ್ಲಾಳಿಗಳ ಮಧ್ಯಸ್ಥಿಕೆಯೇ ಹೆಚ್ಚಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರಲ್ಲ ಎನ್ನುವ ಪ್ರಶ್ನೆಗೆ ‘ಕೃಷಿ ಮಾರಾಟ ವಾಹಿನಿ ವೆಬ್‌ಸೈಟ್‌ ಮೂಲಕ ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆಗೆ ಕೃಷಿ ಉತ್ಪನ್ನ ಮಾರಾಟವಾಗಿದೆ ಎಂದು ಬೆರಳತುದಿಯಿಂದಲೇ ತಿಳಿದುಕೊಳ್ಳುವ ವ್ಯವಸ್ಥೆಯಿದೆ. ದಲ್ಲಾಳಿಗಳಿಗೆ ಅವಕಾಶವಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.