ಸೋಮವಾರ, ಫೆಬ್ರವರಿ 24, 2020
19 °C

ಉಣಕಲ್ ಚನ್ನಬಸವೇಶ್ವರ ರಥೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಉಣಕಲ್‌ ಗ್ರಾಮದಲ್ಲಿ ಸೋಮವಾರ ಉಳವಿ ಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ದಾಂಡೇಲಿಯ ಉಳವಿಯಲ್ಲಿ ರಥೋತ್ಸವ ನಡೆಯುವ ದಿನವೇ ಇಲ್ಲಿಯೂ ನಡೆಯುವುದು ವಿಶೇಷ.

ಚನ್ನಬಸವೇಶ್ವರ ಸ್ವಾಮಿಯ ಬೆಳ್ಳಿಯ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಉಣಕಲ್‌ ಗ್ರಾಮದ ಬೀದಿಗಳಲ್ಲಿ ಸಾಗಿತು. ಸಂಜೆ 6ಕ್ಕೆ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಹರ ಹರ ಮಹಾದೇವ, ಓಂ ನಮಃ ಶಿವಾಯ ಎಂಬ ಘೋಷಣೆಗಳನ್ನು ಕೂಗುತ್ತಾ ಭಕ್ತರು ರಥ ಎಳೆದರು.

ಧಾರವಾಡ, ಹಾವೇರಿ ಹಾಗೂ ಹುಬ್ಬಳ್ಳಿ ಸುತ್ತಲಿನ ಗ್ರಾಮಗಳಿಂದ ಬಂದಿದ್ದ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ತೂರಿ ಕೃತಾರ್ಥರಾದರು. ಉಣಕಲ್‌ ಉದ್ಯಾನದವರೆಗೆ ರಥ ಎಳೆದು ಮರಳಿ ದೇವಸ್ಥಾನಕ್ಕೆ ತರಲಾಯಿತು.

ರಥೋತ್ಸವ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಬೆಳಿಗ್ಗೆ ಕಳಸಾರೋಹಣ, ರುದ್ರಾಭಿಷೇಕ ನೆರವೇರಿಸಲಾಯಿತು. ಮಧ್ಯಾಹ್ನ ಮಹಾಪ್ರಸಾದ ವಿತರಿಸಲಾಯಿತು.‌

‘ಚನ್ನಬಸವೇಶ್ವರರು ಉಳವಿಯಲ್ಲಿ ನೆಲೆ ನಿಲ್ಲುವ ಮೊದಲು ಉಣಕಲ್‌ನಲ್ಲಿ ಪೂಜೆ ಸಲ್ಲಿಸಿದ್ದರು ಎಂಬ ಪ್ರತೀತಿ ಇದೆ. ಹಾಗಾಗಿ ಪ್ರತಿ ವರ್ಷ ಉಳವಿಯಲ್ಲಿ ರಥೋತ್ಸವ ನಡೆಯುವ ದಿನವೇ ಇಲ್ಲಿಯೂ ರಥೋತ್ಸವ ನಡೆಸಲಾಗುತ್ತಿದೆ. ಉಣಕಲ್‌ ದೇವಸ್ಥಾನದಲ್ಲಿ 1971ರಿಂದಲೂ ರಥೋತ್ಸವ ಆಚರಿಸಲಾಗುತ್ತಿದೆ’ ಎಂದು ಜ್ಞಾನನಿಧಿ ಉಳವಿ ಚನ್ನಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಮಹದೇವಪ್ಪ ಮೆಣಸಿನಕಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಮಿತಿಯ ಸದಸ್ಯರಾದ ಭೀಮನಗೌಡ ಕೆಂಚನಗೌಡ, ಈರಣ್ಣ ಭದ್ರಾಪುರ, ವೀರಯ್ಯ ಮಠಪತಿ, ಕಲ್ಲಪ್ಪ ಹದ್ಲಿ ಉಸ್ತುವಾರಿಯಲ್ಲಿ ರಥೋತ್ಸವ ನಡೆಯಿತು. ಮಕ್ಕಳ ಆಟಿಕೆ ಸಾಮಗ್ರಿ ಹಾಗೂ ಪೂಜಾ ಸಾಮಗ್ರಿಗಳ ಮಾರಾಟವೂ ಜೋರಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು