ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌–ಬಿಜೆಪಿ ಮೈತ್ರಿ ಅಧಿಕಾರಕ್ಕಾಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Published 9 ಸೆಪ್ಟೆಂಬರ್ 2023, 19:06 IST
Last Updated 9 ಸೆಪ್ಟೆಂಬರ್ 2023, 19:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಿಜೆಪಿಯ ‘ಬಿ ಟೀಂ’ ಎಂದು ಕರೆದಾಗ, ಜೆಡಿಎಸ್‌ನವರಿಗೆ ಕೋಪ ಬರುತಿತ್ತು. ಆದರೆ, ಈಗ ಅವರೇ ಆ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಯಾವ ಸಿದ್ಧಾಂತವೂ ಇಲ್ಲ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಜಾತ್ಯತೀತ ಎಂದು ಹೆಸರು ಇಟ್ಟುಕೊಂಡು, ಕೋಮುವಾದಿಗಳ ಜೊತೆ ಸೇರಿದ್ದಾರೆ. ಯಾವ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ದೇವೇಗೌಡರು ಹೇಳಿದ್ದರು. ಆದರೆ, ಪಕ್ಷದ ಉಳಿವಿಗಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದಾಗಿ ಜಿ.ಟಿ. ದೇವೇಗೌಡರಿಂದ ಹೇಳಿಸಿದ್ದಾರೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಖರ್ಗೆ ಅವರನ್ನು ಆಹ್ವಾನಿಸಬೇಕಿತ್ತು: ‘ಜಿ–20 ಶೃಂಗಸಭೆಯ ಸಂದರ್ಭದಲ್ಲಿ ರಾಷ್ಟ್ರಪತಿಯವರು ಆಯೋಜಿಸಿರುವ ಔತಣಕೂಟಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಬೇಕಿತ್ತು. ಅವರು ಬರೀ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಲ್ಲ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಹೌದು. ನನಗೆ ಆಹ್ವಾನವಿದೆ. ಆದರೆ, ನಾನು ಭಾಗವಹಿಸಲ್ಲ’ ಎಂದರು.

‘ಮಹದಾಯಿ, ಕೃಷ್ಣ ಮೇಲ್ದಂಡೆ ಯೋಜನೆ, ಮೇಕೆದಾಟು, ಕಾವೇರಿ ಸೇರಿ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಲು ಸರ್ವ ಪಕ್ಷಗಳ ನಿಯೋಗ ಕರೆದೊಯ್ಯಲು ಪ್ರಧಾನಿ ಅವರ ಕಾಲಾವಕಾಶ ಕೋರಿದ್ದೇವೆ. ಇನ್ನೂ ಸಮಯ ನೀಡಿಲ್ಲ’ ಎಂದರು.

‘ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅರಣ್ಯ ಹಾಗೂ ಪರಿಸರ ಇಲಾಖೆಯಿಂದ ನಿರಾಕ್ಷೇಪಣೆ ಪತ್ರ ಕೊಡಿಸಿಲ್ಲ. ಅದನ್ನು ನೀಡಿದರೆ, ನಾವು ಕಾಮಗಾರಿ ಆರಂಭಿಸಲು ಸಿದ್ಧ’  ಎಂದರು. 

‘ಬರ ಎದುರಿಸಲು ಕೇಂದ್ರ ಸರ್ಕಾರದ ನೆರವೂ ಬೇಕು. ಬರ ಘೋಷಣೆಗೆ ನಿಯಮಗಳನ್ನು ಪ್ರತಿ 2 ವರ್ಷಕ್ಕೊಮ್ಮೆ ಬದಲಿಸಬೇಕು. 3 ವರ್ಷವಾದರೂ ಬದಲಿಸಿಲ್ಲ. ಬದಲಾವಣೆ ಕೋರಿ ಪತ್ರ ಬರೆದಿರುವೆ’ ಎಂದರು.

‘ವಿದ್ಯಾವಿಕಾಸ ಯೋಜನೆಯಡಿ ಕರ್ನಾಟಕ ಕೈಮಗ್ಗ ಸಂಸ್ಥೆಯಿಂದ ಶಾಲಾ ಮಕ್ಕಳಿಗೆ ನೀಡಲಾಗಿದ್ದ ಸಮವಸ್ತ್ರ ಕಳಪೆಯಾಗಿರುವ ಬಗ್ಗೆ ತನಿಖೆ ನಡೆಸಲು ತೀರ್ಮಾನಿಸಲಾಗಿದೆ. ಸಮವಸ್ತ್ರಕ್ಕೆ ಪಾವತಿಸಲಾದ ಮೊತ್ತವನ್ನು ಮರುಪಡೆಯಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ನಾನು ಯಾವುದೇ ಕಾರಣಕ್ಕೂ ರಾಷ್ಟ್ರರಾಜಕಾರಣಕ್ಕೆ ಹೋಗಲ್ಲ. ಎಚ್‌.ವಿಶ್ವನಾಥ ಸೇರಿ ಹಲವು ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT