ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಗೋಲಿಬಾರ್‌: ನ್ಯಾಯಾಂಗ ತನಿಖೆಗೆ ಇಬ್ರಾಹಿಂ ಆಗ್ರಹ

Last Updated 22 ಡಿಸೆಂಬರ್ 2019, 14:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಂಗಳೂರು ಗೋಲಿಬಾರ್‌ ಘಟನೆಯನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರ‍ಪ್ಪ ಅವರನ್ನು ಆಗ್ರಹಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ(ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಬಗ್ಗೆ ಜನ ಗಾಬರಿ ಬಿದ್ದಿದ್ದಾರೆ. ಈ ಕಾಯ್ದೆಗಳನ್ನು ಹಿಂಪಡೆಯುವವರೆಗೆ ಹೋರಾಟ ನಿಲ್ಲದು ಎಂದು ಅವರು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಎನ್‌ಆರ್‌ಸಿಯನ್ನು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನವರಿಕೆ ಮಾಡಬೇಕು. ಈ ವಿಷಯದಲ್ಲಿ ಕೇಂದ್ರದ ಒತ್ತಡಕ್ಕೆ ಮಣಿಯಬಾರದು ಎಂದು ಹೇಳಿದರು.

ಹೋರಾಟಗಾರರು ಯಾವುದೇ ಕಾರಣಕ್ಕೂ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಇಳಿಯಬಾರದು. ಶಾಂತಿಯುತವಾಗಿ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಮೆರವಣಿಗೆ, ಸಭೆ ಮಾಡುವ ಮೂಲಕ ಜನಸಾಮಾನ್ಯರಿಗೆ ಈ ಕಾಯ್ದೆಗಳ ದುಷ್ಪರಿಣಾಮಗಳ ಬಗ್ಗೆ ಅರಿವು, ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.

ದೇಶದ ಇಂದಿನ ಉದ್ವಿಘ್ನ ಪರಿಸ್ಥಿತಿಗೆ ಮೋದಿ ಮತ್ತು ಅಮಿತ್‌ ಶಾ ಕಾರಣ. ಅನುಭವ ಇಲ್ಲದವರು ಅಧಿಕಾರಿಕ್ಕೆ ಬಂದರೆ ಏನಾಗುತ್ತದೆ ಎಂಬುದಕ್ಕೆ ದೇಶದ ಸದ್ಯದ ಸ್ಥಿತಿ ಸಾಕ್ಷಿಯಾಗಿದೆ. ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ, ನಿರುದ್ಯೋಗ ಮಿತಿ ಮೀರಿದೆ, ಕೈಗಾರಿಕೆಗಳು ಬಾಗಿಲು ಮುಚ್ಚುತ್ತಿವೆ. ಇಂತಹ ಜ್ವಲಂತ ಸಮಸ್ಯೆಗಳನ್ನು ನಿವಾರಣೆ ಮಾಡುವ ಬದಲಿಗೆ ಇವರಿಬ್ಬರು ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಚಿಕ್ಕ ಮಕ್ಕಳು ಕತ್ತೆ ಕಾಲಿಗೆ ಡಬ್ಬಿ ಕಟ್ಟಿ ಹೊರಹೊಮ್ಮುವ ಶಬ್ಧದಿಂದ ಖುಷಿ ಪಡುವಂತೆ ಇವರು ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ವಾಜಪೇಯಿ, ಇಂದಿರಾಗಾಂಧಿ ಅವರಂತವರು ಇದ್ದಿದ್ದರೇ ಇಂತಹ ಸ್ಥಿತಿ ದೇಶಕ್ಕೆ ಬರುತ್ತಿರಲಿಲ್ಲ. ಈ ದೇಶದಲ್ಲಿ ಯಾರ ಆಡಳಿತವೂ ಶಾಶ್ವತವಲ್ಲ. ಎಲ್ಲರೂ ಬಾಡಿಗೆದಾರರೇ ಹೊರತು; ಮಾಲೀಕರಲ್ಲ. ಈ ದೇಶದ ಜನ ತುರ್ತು ಪರಿಸ್ಥಿತಿಗೆ ಅಂಜಿಲ್ಲ; ಇನ್ನು ಇದಾವ ಲೆಕ್ಕ ಎಂದರು.

ಪ್ರಧಾನಿ ಅವರು ಪ್ರತಿಷ್ಠೆಯನ್ನು ಕೈಬಿಟ್ಟು, ಸರ್ವಪಕ್ಷಗಳ ಮುಖಂಡರು, ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಸಂಘಟನೆಗಳ ಮುಖಂಡರು, ಬುದ್ದಿಜೀವಿಗಳು, ಇತಿಹಾಸಕಾರರು, ಕಾನೂನು ತಜ್ಞರ ಸಭೆ ಕರೆದು ಅವರೊಂದಿಗೆ ಚರ್ಚಿಸಿದ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಬಗ್ಗೆ ಸೂಕ್ತ ತೀರ್ಮಾನಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ದೇಶದಲ್ಲಿ ದಲಿತರು, ಹಿಂದುಳಿದವರು, ಮುಸ್ಲಿಮನರು, ಅಲೆಮಾರಿಗಳ ಸಂಖ್ಯೆ ಶೇ 40ರಿಂದ 50ರಷ್ಟು ಇದೆ. ಅವರ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದರು.

ಎನ್‌ಆರ್‌ಸಿಯೇ ಬೇರೆ, ವೋಟರ್‌ ಲೀಸ್ಟ್‌ ಬೇರೆ. ಹೀಗಾಗಿ ದೇಶಕ್ಕೆ ಬಂದಿರುವ ಅಕ್ರಮ ವಲಸಿಗರನ್ನು ಗುರುತಿಸಲು ಕೋಟ್ಯಂತರ ರೂಪಾಯಿ ವ್ಯಯ ಮಾಡುವ ಬದಲು ಆಯಾ ತಹಶೀಲ್ದಾರ್‌, ಸಬ್‌ ಇನ್‌ಸ್ಪೆಕ್ಟರ್‌ ಅವರಿಗೆ ಹೇಳಿದರೆ ಸಾಕು ಒಂದು ತಿಂಗಳ ಒಳಗೆ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ ಎಂದು ಸಲಹೆ ನೀಡಿದರು.

ಹಳೇ ಬಾಡಿಗೆದಾರ ಸಿ.ಟಿ.ರವಿ:‘ಸಚಿವ ಸಿ.ಟಿ.ರವಿ ಬಿಜೆಪಿಯ ಹಳೇ ಬಾಡಿಗೆದಾರ. ಆದರೆ, ಚಿಕ್ಕ ಹುಡುಗ ಅಶ್ವತ್ಥನಾರಾಯಣ ಅವರನ್ನು ಡಿಸಿಎಂ ಮಾಡಿರುವುದಕ್ಕೆ ತಾಳಲಾಗದೇ ಏನಾದರೂ ಮಾಡಿ ಮುಂದೆ ಬರಬೇಕು ಎಂದುಕೊಂಡು ಬಾಯಿಗೆ ಬಂದಂತೆ ಏನೇನೋ ಮಾತನಾಡುತ್ತಾನೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT