ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ ಕಟ್ಟಡ ಕಾಮಗಾರಿ ತ್ವರಿತವಾಗಿ ಮುಗಿಸಿ: ಸಚಿವ ಮಹದೇವಪ್ಪ ಸೂಚನೆ

Published 9 ನವೆಂಬರ್ 2023, 6:14 IST
Last Updated 9 ನವೆಂಬರ್ 2023, 6:14 IST
ಅಕ್ಷರ ಗಾತ್ರ

ಧಾರವಾಡ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸುತ್ತಿರುವ ಹಾಸ್ಟೆಲ್‌ ಕಟ್ಟಡ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಬೆಳಗಾವಿ ವಿಭಾಗಮಟ್ಟದ ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಶೈಕ್ಷಣಿಕ ತಾಣವಾದ ಈ ಜಿಲ್ಲೆಯಲ್ಲಿ ಹೆಚ್ಚುವರಿ ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಬೇಕೆಂಬ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಪ್ರಸ್ತಾವ ಸಲ್ಲಿಸಿದರೆ ಅನುಮೋದನೆ ನೀಡಿ, ಅನುದಾನ ಒದಗಿಸಲಾಗುವುದು ಎಂದರು.

ಬೆಳಗಾವಿ ವಿಭಾಗ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ 206 ಬಾಲಕರ ಹಾಗೂ 64 ಬಾಲಕಿಯರ ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗಳು ಸಹಿತ 270 ಹಾಸ್ಟೆಲ್‌ಗಳು ಇವೆ. ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗಳಲ್ಲಿ 14,619 ಬಾಲಕರು ಮತ್ತು 5,722 ಬಾಲಕಿಯರು ಸಹಿತ 20,341 ವಿದ್ಯಾರ್ಥಿಗಳು ಸಮಾಜಕಲ್ಯಾಣ ವಸತಿ ನಿಲಯಗಳಲ್ಲಿ ಇದ್ಧಾರೆ. ಏಳು ಜಿಲ್ಲೆಗಳಲ್ಲಿ ಮೆಟ್ರಿಕ್ ನಂತರದ 87 ಪುರುಷ ಮತ್ತು 52 ಮಹಿಳಾ 139 ಹಾಸ್ಟೆಲ್‌ಗಳು ಇವೆ. 14,963 ಪುರುಷ ಹಾಗೂ 8,520 ಮಹಿಳೆ ಸಹಿತ 23,483 ವಿದ್ಯಾರ್ಥಿಗಳು ಇದ್ದಾರೆ ಎಂದು ಹೇಳಿದರು.

ವಿವಿಧ ಜಿಲ್ಲೆಗಳ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿ ನಿಲಯಗಳ ದುರಸ್ತಿಗೆ ₹1026.73 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಈ ಪೈಕಿ ₹753.28 ಕೋಟಿ ಬಿಡುಗಡೆ ಮಾಡಲಾಗಿದೆ. ಇಲಾಖೆಯ ಸುಮಾರು 42 ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ವಿವರ ನೀಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮತ್ತು ವಿದ್ಯಾರ್ಥಿ ವೇತನಕ್ಕಾಗಿ 2022-23 ನೇ ಸಾಲಿಗೆ 24,177 ವಿದ್ಯಾರ್ಥಿಗಳು ಹಾಗೂ ಪ್ರಸಕ್ತ ಸಾಲಿನಲ್ಲಿ 11,263 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಪ್ರೋತ್ಸಾಹಧನ ಬಿಡುಗಡೆ ಹಂತದಲ್ಲಿದೆ ಎಂದರು.

ಇಲಾಖೆಯಿಂದ ಬೆಳಗಾವಿ ವಿಭಾಗದ 7 ಜಿಲ್ಲೆಗಳಲ್ಲಿ 1,731 ಸಮುದಾಯ ಭವನಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, ಈ ಪೈಕಿ1,277 ಭವನಗಳ ಕಾಮಗಾರಿ ಮುಗಿದಿದೆ. 352 ಭವನ ನಿರ್ಮಾಣ ಕಾಮಗಾರಿ ಹಂತದಲ್ಲಿದೆ. ಬಾಕಿ 55 ಭವನಗಳ ಕಾಮಗಾರಿ ಆರಂಭವಾಗಬೇಕಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸ್ಮಶಾನಕ್ಕಾಗಿ ಬೆಳಗಾವಿ ವಿಭಾಗದ 7 ಜಿಲ್ಲೆಗಳಿಗೆ ₹17 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಸುಮಾರು 31 ಗ್ರಾಮಗಳಿಗಾಗಿ 21ಎಕರೆ ಜಾಗ ಖರೀದಿಸಲಾಗಿದೆ. ಸ್ಮಶಾನ ಜಾಗದಲ್ಲಿ ಮೂಲಸೌಕರ್ಯ ಕಲ್ಪಿಸಲು 139 ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

‌ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶಕುಮಾರ ಮತ್ತು ರಾಜ್ಯ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳ ರಾಜ್ಯ ಸಲಹಾ ಸಮಿತಿ ಸದಸ್ಯ ಇ.ವೆಂಕಟಾಚಲ, ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಬೆಳಗಾವಿ ವಿಭಾಗದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಉಪ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಗಡಾದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಇದ್ದರು.

ಧಾರವಾಡ ಜಿಲ್ಲೆಗೆ ವಿದ್ಯಾರ್ಥಿ ವಸತಿ ನಿಲಯಗಳಿಗೆ ಬೇಡಿಕೆ ಇದೆ. ಹಾಸ್ಟೆಲ್‌ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಹಾಸ್ಟೆಲ್‌ಗಳಲ್ಲಿ ಸೌಕರ್ಯಗಳನ್ನು ಹೆಚ್ಚಿಸಬೇಕು.
ಎನ್.ಎಚ್. ಕೋನರೆಡ್ಡಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT