ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ಜೆಡಿಎಸ್‌ಗೆ ಕಾಂಗ್ರೆಸ್ ಪಕ್ಷವೇ ಟಾರ್ಗೆಟ್- ಸಿದ್ದರಾಮಯ್ಯ

Last Updated 7 ಅಕ್ಟೋಬರ್ 2021, 4:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಉದ್ದೇಶಪೂರ್ವಕವಾಗಿ ನಮ್ಮ ಪಕ್ಷವನ್ನು ಟಾರ್ಗೆಟ್ ‌ಮಾಡುತ್ತಿದೆ. ಬಿಜೆಪಿ ಪರ ಒಲವು ತೋರುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಗುರುವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಗಳ ಕಣಕ್ಕಿಳಿಸಿದೆ. ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಎಲ್ಲಿ ಕಣಕ್ಕಿಳಿಸಬೇಕಿತ್ತೊ ಅಲ್ಲಿ ನಿಲ್ಲಿಸಿಲ್ಲ ಎಂದರು.

ಹಿಂದೆ ಮಂಡ್ಯ, ಹಾಸನ ಮತ್ತಿತರ ಕಡೆಗಳಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಕಣಕ್ಕಿಳಿಸಬೇಕಿತ್ತು. ಹಾನಗಲ್ ಹಾಗೂ ಸಿಂದಗಿಯಲ್ಲಿ ಬಿಜೆಪಿಗೆ ಸಹಾಯವಾಗಲಿ ಎಂದು ಅಲ್ಪಸಂಖ್ಯಾತರನ್ನು ಕಣಕ್ಕಿಳಿಸಿದೆ ಎಂದು ದೂರಿದರು.

ಹಳೇ ಮೈಸೂರು ಭಾಗದಲ್ಲಿ ಮಾತ್ರ ಜೆಡಿಎಸ್ ಪ್ರಾಬಲ್ಯ ಹೊಂದಿದೆ. ಅಲ್ಲಿ ಕಾಂಗ್ರೆಸ್ ಸಹ ಪ್ರಬಲವಾಗಿದೆ. ಹೀಗಾಗಿ ಜೆಡಿಎಸ್ ಪದೇ ಪದೇ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡುತ್ತಿದೆ ಎಂದರು.

ಆರ್ ಎಸ್ ಎಸ್ ಕೋಮುವಾದಿ ಸಂಘಟನೆ. ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದೆ. ಹಿಂದೂಗಳನ್ನು ಮುಸ್ಲಿಮರ ವಿರುದ್ದ ಎತ್ತಿ ಕಟ್ಟುತ್ತಿದೆ. ಇದರಲ್ಲಿ ‌ಕಾಂಗ್ರೆಸ್ ಯಾವುದೇ ನಂಬಿಕೆ ‌ಇಟ್ಟುಕೊಂಡಿಲ್ಲ. ನಾವು ಎಲ್ಲ ಧರ್ಮದವರನ್ನು ಗೌರವಿಸುತ್ತೇವೆ. ಬಿಜೆಪಿ ಆರ್ ಎಸ್ ಎಸ್ ಮುಖವಾಡ ಎಂದು ಟೀಕಿಸಿದರು.

ಆರ್ ಎಸ್ ಎಸ್ ನವರು ಕೊಡುವ ನಿರ್ದೇಶನವನ್ನು ಬಿಜೆಪಿ ಯಥಾವತ್ತಾಗಿ ಪಾಲನೆ ಮಾಡುತ್ತಿದೆ. ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಹೊಣೆ. ರಾಜ್ಯ ಸರ್ಕಾರ ಇಲ್ಲಿ ತಮಟೆ ಹೊಡೆದುಕೊಂಡು ಕುಳಿತಿದೆ‌ ಎಂದರು.

ರಾಜ್ಯ ರಾಜಕಾರಣದ ಬಗ್ಗೆ ಚರ್ಚಿಸಲು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದೆ. ಅಲ್ಲಿ ರಾಷ್ಟ್ರ ರಾಜಕಾರಣದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಅವರು ನನ್ನನ್ನು ರಾಷ್ಟ್ರ ರಾಜಕಾರಣಕ್ಕೆ ಕರೆದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT