ರಸ್ತೆ ತಡೆ: ಕಾಂಗ್ರೆಸ್‌ ಕಾರ್ಯಕರ್ತರು ವಶಕ್ಕೆ

7
ಶಾಸಕರಿಗೆ ಹಣದ ಆಮಿಷ ಒಡ್ಡಿದ ಪ್ರಕರಣ; ಬಿಎಸ್‌ವೈ ಬಂಧನಕ್ಕೆ ಒತ್ತಾಯ

ರಸ್ತೆ ತಡೆ: ಕಾಂಗ್ರೆಸ್‌ ಕಾರ್ಯಕರ್ತರು ವಶಕ್ಕೆ

Published:
Updated:
Prajavani

ಹುಬ್ಬಳ್ಳಿ: ಸರ್ಕಾರ ಉರುಳಿಸಲು ಸಂಚು ರೂಪಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶಾಸಕರಿಗೆ ಹಣದ ಆಮಿಷ ಒಡ್ಡಿದ್ದಾರೆ. ಅವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಶನಿವಾರ ನಗರದಲ್ಲಿ ರಸ್ತೆ ತಡೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಅಂಬೇಡ್ಕರ್‌ ವೃತ್ತದಿಂದ ಮೆರವಣಿಗೆ ಮೂಲಕ ತಹಶೀಲ್ದಾರ್‌ ಕಚೇರಿಗೆ ತೆರಳಿ ಮನವಿ ಸಲ್ಲಿಸುವುದು ಮೊದಲಿನ ಯೋಜನೆಯಾಗಿತ್ತು. ಆದರೆ, ಪಕ್ಷದ ಮಹಾನಗರ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ಹಾಗೂ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಅನಿಲಕುಮಾರ್‌ ಪಾಟೀಲ ಅವರು ಚಿಟಗುಪ್ಪಿ ಸರ್ಕಲ್‌ನಲ್ಲಿ ರಸ್ತೆ ತಡೆ ಮಾಡುವ ದಿಢೀರ್‌ ನಿರ್ಣಯ ಕೈಗೊಂಡರು.

ಅರ್ಧಗಂಟೆಗೂ ಅಧಿಕ ಕಾಲ ಕೊಪ್ಪಿಕರ ರಸ್ತೆ ಹಾಗೂ ಸ್ಟೇಶನ್‌ ಕಡೆಗೆ ಹೋಗುವ ರಸ್ತೆ ಮಧ್ಯದಲ್ಲಿ ಕಾರ್ಯಕರ್ತರು ನಿಂತಿದ್ದರಿಂದ ವಾಹನ ಸಂಚಾರದಲ್ಲಿ ವ್ಯತ್ಯಯವಾಯಿತು. ರಸ್ತೆ ತಡೆ ನಡೆಸುವ ಬಗ್ಗೆ ಯಾಪೊಲೀಸರಿಗೂ ವುದೇ ಮಾಹಿತಿ ಇರಲಿಲ್ಲ. ರಸ್ತೆ ತಡೆಯ ಮಧ್ಯೆಯೇ ಕಾರು ಚಲಾಯಿಸಿಕೊಂಡು ಮುಂದೆ ಹೋಗಲು ಯತ್ನಿಸಿದ ಕಾರು ಚಾಲಕರೊಬ್ಬರನ್ನು ಪಕ್ಷದ ಮುಖಂಡ ಮೋಹನ ಅಸುಂಡಿ ನಿಂದಿಸಿದರು.

ಸ್ಥಳಕ್ಕೆ ಬಂದ ಎಸಿಪಿ ಎಚ್‌.ಕೆ. ಪಠಾಣ ಅವರು ಅಲ್ತಾಫ್‌ ಹಳ್ಳೂರ, ಸದಾನಂದ ಡಂಗನವರ, ಅಸುಂಡಿ, ಬಂಗಾರೇಶ ಹಿರೇಮಠ ಸೇರಿದಂತೆ ಹಲವು ಮುಖಂಡರನ್ನು ಬೇಂದ್ರೆ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಅದರಲ್ಲಿ ಹತ್ತಿಸಿದರು.ಆ ಬಳಿಕವೂ ಕೆಲವರು ವಾಹನದಿಂದ ಇಳಿದು ಬಂದು ಮತ್ತೆ ರಸ್ತೆ ತಡೆ ನಡೆಸಿದರು.

ಈ ಬಾರಿ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ಕರೆಸಿದ ಪಠಾಣ, ಅದೇ ಬಸ್‌ನಲ್ಲಿ ಕೂರಿಸಿಕೊಂಡು ಹೋದರು. ನಂತರ ಬಿಡುಗಡೆ ಮಾಡಿದರು.

ಇದಕ್ಕೂ ಮುನ್ನ ಅಂಬೇಡ್ಕರ್‌ ವೃತ್ತದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಲ್ತಾಫ್‌ ಹಳ್ಳೂರ ಹಾಗೂ ಅನಿಲಕುಮಾರ್‌ ಪಾಟೀಲ, ದಿನ ಬೆಳಗಾದರೆ ಕೋಟಿ ಕೋಟಿ ಹಣದ ಆಮಿಷ ಒಡ್ಡುತ್ತಿರುವ ಬಿಜೆಪಿಯವರು ಏನಾದರೂ ಮಾಡಿ ಅಧಿಕಾರಿ ಹಿಡಿಯಬೇಕು ಎಂಬ ಉದ್ದೇಶದಿಂದ ಮಾನಸಿಕ ಸಮಸ್ಯೆಗೆ ಒಳಗಾಗಿದ್ದಾರೆ. ಇದರಿಂದ ಕಾಂಗ್ರೆಸ್‌ ಶಾಸಕರಿಗೆ ನಿತ್ಯ ಕಿರಿ ಕಿರಿ ಉಂಟಾಗಿದೆ. ಈಗಂತೂ ಯಡಿಯೂರಪ್ಪ ಅವರು ರಾಜ್ಯದ ಮೈತ್ರಿ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನ ನಡೆಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಇದರ ಹಿಂದ ಕೇಂದ್ರದ ಪ್ರಮುಖ ನಾಯಕರು ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !