ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ, ಅಡುಗೆ ಅನಿಲ ದರ ಏರಿಕೆ ಖಂಡಿಸಿ ಪ್ರತಿಭಟನೆ

Last Updated 5 ಫೆಬ್ರುವರಿ 2021, 14:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ಏರಿಕೆ ಖಂಡಿಸಿ, ಕಾಂಗ್ರೆಸ್ ಕಾರ್ಯಕರ್ತರು ನಗರದ ದುರ್ಗದ ಬೈಲ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಸಿಲಿಂಡರ್ ಮತ್ತು ಬೈಕ್‌ನ ಅಣಕು ಶವಯಾತ್ರೆ ನಡೆಸಿದರು.

ಈ ವೇಳೆ ಮಾತನಾಡಿದ ಮಹಾನಗರ ಕಾಂಗ್ರೆಸ್‌ ಘಟಕದ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ, ‘ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ತೈಲ ದರದಿಂದಾಗಿ, ದಿನಬಳಕೆಯ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ದರ ಏರಿಕೆಯಾದಾಗ ಬೀದಿಗಿಳಿಯುತ್ತಿದ್ದ ಬಿಜೆಪಿ ಆಡಳಿತಾವಧಿಯಲ್ಲಿ ತೈಲ ದರ ಈಗ ನೂರರ ಗಡಿ ತಲುಪಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ, ಗ್ರಾಹಕರಿಗೆ ದರ ಏರಿಕೆಯ ಬರೆ ಹಾಕಲಾಗುತ್ತಿದೆ. ಕೊರೊನಾದಿಂದಾಗಿ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಜನರ ಬದುಕು, ಬೆಲೆ ಏರಿಕೆಯಿಂದಾಗಿ ಮತ್ತಷ್ಟು ತತ್ತರಿಸಲಿದೆ’ ಎಂದು ಹೇಳಿದರು.

ಯುವ ಕಾಂಗ್ರೆಸ್ ಉಪಾಧ್ಯಕ್ಷ ಚೈತನ್ಯ ಬಿಜವಾಡ, ‘ತೈಲ ದರ ಎಷ್ಟೇ ಏರಿಕೆಯಾದರೂ ಪ್ರಧಾನಿ ನರೇಂದ್ರ ಮೋದಿಗಾಗಿ ಖರೀಸುತ್ತೇವೆ ಎನ್ನುವ ಮೋದಿ ಭಕ್ತರು, ಬೇಕಿದ್ದರೆ ತಮ್ಮದೇ ಪೆಟ್ರೋಲ್ ಬಂಕ್ ಆರಂಭಿಸಲಿ. ಆದರೆ, ಸಂಕಷ್ಟದಲ್ಲಿರುವ ಬಡ ಹಾಗೂ ಮಧ್ಯಮ ವರ್ಗದವರ ಬದುಕಿನ ದೃಷ್ಟಿಯಿಂದ ಕೇಂದ್ರ ಸರ್ಕಾರ ತೈಲ ದರವನ್ನು ತಕ್ಷಣ ಇಳಿಕೆ ಮಾಡಬೇಕು’ ಎಂದು ಆಗ್ರಹಿಸಿದರು.

ಪಕ್ಷದ ಮುಖಂಡರಾದ ಶಹಜಾನ್ ಮುಜಾಹಿದ್, ಗೋವಿಂದ ಬೆಲ್ದೋನಿ, ಸಮೀರ್ ಖಾನ್, ಭಾರತಿ ಬದ್ದಿ, ನಿರ್ಮಲಾ ಮಾನೆ, ರಾಹುಲ್ ಚಂದಾವರ್ಕರ್, ಡ್ಯಾನಿಯಲ್ ಹೆಗಡೆ, ಸೈಫ್ ಮುಲ್ಲಾ, ಸುನೀಲ್ ಮರಾಠೆ, ನವೀನ ಶಿಸನಳ್ಳಿ, ಮಣಿಕಂಠ ಪಿರಗೊಜಿ, ಪ್ರಜ್ವಲ್ ಮೋರೆ, ನಾಗರಾಜ್ ಹಿರೇಮಠ, ಅಂಕಿತ್ ಬಿಜವಾಡ, ಸುಪ್ರೀತ ಬಿಜವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT