ಗುರುವಾರ , ಅಕ್ಟೋಬರ್ 22, 2020
22 °C
ಕಾಂಗ್ರೆಸ್ ಕಾರ್ಯಕರ್ತರಿಂದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆ ತಡೆ

ಹುಬ್ಬಳ್ಳಿ: ರಾಹುಲ್, ಪ್ರಿಯಾಂಕ ಬಂಧನಕ್ಕೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾದ್ರಾ ಬಂಧನ ಖಂಡಿಸಿ, ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಸಂಚಾರ ದಟ್ಟಣೆಯ ಈ ವೃತ್ತದಲ್ಲಿ ಸಂಜೆ ಜಮಾಯಿಸಿದ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ ಕೂಗಿದರು. ಭಾವಚಿತ್ರವನ್ನು ಕಾಲಿನಿಂದ ತುಳಿದರು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಮಹಾನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ, ‘ಉತ್ತರಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಯುವತಿಯ ಗ್ರಾಮಕ್ಕೆ ಪಾದಯಾತ್ರೆ ಕೈಗೊಂಡಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾದ್ರಾ ಅವರ ಬಂಧನ ಖಂಡಿನೀಯ. ಪೊಲೀಸರು ಸರ್ಕಾರದ ಗುಲಾಮರಂತೆ ನಡೆದುಕೊಂಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಮಾತನಾಡಿ, ‘ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅತ್ಯಾಚಾರ ಮತ್ತು ಕೊಲೆಗಳು ಸಾಮಾನ್ಯವಾಗಿವೆ. ಹಾಗಾಗಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಮಾತಿನ ಚಕಮಕಿ:

ಏಕಾಏಕಿ ನಡೆದ ರಸ್ತೆ ತಡೆಯಿಂದಾಗಿ ಪೊಲೀಸರು ಮತ್ತು ಕಾಂಗ್ರೆಸ್ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆಯಿತು. ರಸ್ತೆಯಲ್ಲಿ ಟೈಯರ್ ಸುಡಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ತಡೆದರು. ಆದರೂ ಪ್ರತಿಭಟನಾಕಾರರು ಯೋಗಿ ಆದಿತ್ಯನಾಥ್ ಭಾವಚಿತ್ರಗಳನ್ನು ಸುಟ್ಟರು.

ಮುಖಂಡರಾದ ಐ.ಜಿ. ಸನದಿ, ನಾಗರಾಜ್ ಗೌರಿ, ಮೋಹನ ಅಸುಂಡಿ, ಇಮ್ರಾನ್ ಎಲಿಗಾರ, ಅಬ್ದುಲ್ ಗನಿ ವಲಿಅಹ್ಮದ, ಸಾಗರ ಹಿರೇಮನಿ, ಬಸವರಾಜ ಕಿತ್ತೂರ, ಸಂತೋಷ ಜಕ್ಕಪ್ಪನವರ, ಪ್ರವೀಣ ಶೆಲವಡಿ, ರಫೀಕ ದರಗಾದ, ದುರ್ಗಪ್ಪ ಪೂಜಾರ, ಸುರೇಶ ಯಾತಗೇರಿ, ಅರಬಾಜ್ ಮನಿಯಾರ, ರಾಖಿಬ್ ಲೋಧಿ, ಶಿವು ಗೋಕಾವಿ, ಪುಷ್ಪರಾಜ ಹಳ್ಳಿ, ಶಾನು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.